
ನವದೆಹಲಿ: ನೋಟು ನಿಷೇಧದ ಬಳಿಕ ವ್ಯಾಪಕವಾಗಿರುವ ಕಪ್ಪುಹಣ ಹರಿವಿನ ಕುರಿತಂತೆ ಕಟ್ಟೆಚ್ಚರ ವಹಿಸಿರುವ ಕೇಂದ್ರ ಸರ್ಕಾರ 50 ಸಾವಿರಕ್ಕೂ ಅಧಿಕ ಹಣ ಠೇವಣಿ ಮಾಡುವ ಗ್ರಾಹಕರ ಮೇಲೆ ನಿಗಾ ಇರಿಸುವಂತೆ ತೆರಿಗೆ ಇಲಾಖೆಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಹಳೆಯ 500 ರು. ಮತ್ತು 1000 ರು. ನೋಟುಗಳನ್ನು ರದ್ದುಗೊಳಿಸಿದ ಬಳಿಕ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವ ಕಾಳಧನಿಕರ ಯತ್ನ ಹೆಚ್ಚಾಗಿದ್ದು, ಹೇಗಾದರೂ ಸರಿ ತಮ್ಮ ಬಳಿ ಇರುವ ಹಣವನ್ನು ಬಿಳಿಯಾಗಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಇದಕ್ಕಾಗಿ ಕೆಲವು ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಕೆಲ ದಲ್ಲಾಳಿಗಳಿಗೆ ಕಮಿಷನ್ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, 50 ಸಾವಿರಕ್ಕೂ ಅಧಿಕ ಹಣ ಠೇವಣಿಯಾಗುವ ಖಾತೆ ಮೇಲೆ ತೀವ್ರ ನಿಗಾ ವಹಿಸುವಂತೆ ತೆರಿಗೆ ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಸೂಚನೆಯನ್ವಯ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ತೆರಿಗೆ ಇಲಾಖೆ 50 ಸಾವಿರಕ್ಕೂ ಅಧಿಕ ಹಣ ಠೇವಣಿಯಾಗುವ ಖಾತೆಗಳ ವಿವರ ಸಲ್ಲಿಕೆ ಮಾಡುವಂತೆ ಹೇಳಿದೆ. ರದ್ದಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ನೀಡಲಾದ 50 ದಿನಗಳ ಅವಧಿ ಅಂದರೆ ಡಿಸೆಂಬರ್ 31ರವರೆಗೂ ಒಂದೇ ದಿನ 50 ಸಾವಿರ ರು.ಗೂ ಹೆಚ್ಚು ಹಣ ಠೇವಣಿ ಇಟ್ಟರೆ ಮತ್ತು 50 ದಿನದ ಅವಧಿಯಲ್ಲಿ ಉಳಿತಾಯ ಖಾತೆಗಳಿಗೆ 2.5 ಲಕ್ಷಕ್ಕಿಂತ ಹೆಚ್ಚು ಜಮಾ ಮಾಡಿದರೆ ಅಂಥಹ ಖಾತೆ ಹಾಗೂ ಖಾತೆದಾರರ ಮಾಹಿತಿಯನ್ನು ತೆರಿಗೆ ಇಲಾಖೆಗೆ ನೀಡುವಂತೆ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಈ ಸಂಬಂಧ ಬುಧವಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಾಗಿದ್ದು, ಈ ಅವಧಿಯಲ್ಲಿ 12.50 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣ ಠೇವಣಿ ಇಟ್ಟವರ ಖಾತೆಗಳ ವಿವರವನ್ನೂ ತೆರಿಗೆ ಇಲಾಖೆಗೆ ನೀಡುವಂತೆ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚು ಹಣ ಇರುವ ಜನಧನ ಖಾತೆಗೆ ಶೇ.200 ದಂಡ!
ಇದೇ ವೇಳೆ ಬಡವರಿಗಾಗಿ ಜಾರಿಗ ತರಲಾಗಿದ್ದ ಜನಧನ ಯೋಜನೆಯ ಮೇಲೂ ಕೇಂದ್ರ ಸರ್ಕಾರ ಕಣ್ಣಿಟ್ಟಿದ್ದು, ಕಪ್ಪುಹಣದ ಠೇವಣಿ ಇಡಲು ಬಳಕೆಯಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ, ಜನಧನ ಖಾತೆಗಳಲ್ಲಿ ಹಣದ ಏರಿಕೆಯ ಮೇಲೆ ಕಣ್ಣಿಟ್ಟಿದೆ. ಈ ಯೋಜನೆಯಡಿಯಲ್ಲಿ ಬರುವ ಜನಧನ ಖಾತೆಗಳಲ್ಲಿ ಹೆಚ್ಚು ಹಣ ಠೇವಣಿಯಾಗಿದ್ದರೆ ಅಂತಹ ಖಾತೆಗಳಿಗೆ ಭಾರಿ ಪ್ರಮಾಣದ ದಂಡವಿಧಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ ದಂಡದ ಪ್ರಮಾಣವನ್ನು ಶೇ.200ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರಂತೆ ಜನಧನ ಖಾತೆಯಲ್ಲಿ ಹೆಚ್ಚು ಹಣ ಠೇವಣಿಯಾಗಿರುವುದು ಕಂಡುಬಂದರೆ ಶೇ. 30ರಷ್ಟು ತೆರಿಗೆ, ಶೇ.12ರಷ್ಟು ಬಡ್ಡಿ ಮತ್ತು ಶೇ. 200ರಷ್ಟು ದಂಡ ಬೀಳಲಿದೆ.
Advertisement