ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಉಭಯ ದೇಶಗಳು ಕಾರ್ಯ ನಿರ್ವಹಿಸಬೇಕು: ಮಲಾಲ ವಿವಾದಾತ್ಮಕ ಹೇಳಿಕೆ

ಮಲಾಲ ಯೂಸುಫೈ ಝೈ ಇದೀಗ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದು, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಹಾಗೂ ಪಾಕಿಸ್ತಾನ ದೇಶಗಳು ಜಂಟಿಯಾಗಿ ಕಾರ್ಯಾಚರಿಸಬೇಕು ಎಂದು ಹೇಳಿದ್ದಾರೆ.
ಮಲಾಲ ಯೂಸುಫ್ ಝೈ (ಸಂಗ್ರಹ ಚಿತ್ರ)
ಮಲಾಲ ಯೂಸುಫ್ ಝೈ (ಸಂಗ್ರಹ ಚಿತ್ರ)

ನವದೆಹಲಿ: ಪಾಕಿಸ್ತಾನದ ಮೂಲಭೂತವಾದಿ ತಾಲಿಬಾನಿಗಳ ಹಿಡಿತದಲ್ಲಿದ್ದ ಪ್ರದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದ ಮಲಾಲ ಯೂಸುಫೈ ಝೈ ಇದೀಗ ವಿವಾದವನ್ನು  ಮೈ ಮೇಲೆ ಎಳೆದುಕೊಂಡಿದ್ದು, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಹಾಗೂ ಪಾಕಿಸ್ತಾನ ದೇಶಗಳು ಜಂಟಿಯಾಗಿ ಕಾರ್ಯಾಚರಿಸಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಡಾನ್ ಪತ್ರಿಕೆಗೆ ಸಂದರ್ಶನ ನೀಡಿ ಮಾತನಾಡಿದ ಮಲಾಲಾ, "ಕಾಶ್ಮೀರಿಗಳಿಗೆ ಎಲ್ಲರಂತೆಯೇ ಮೂಲಭೂತ ಮಾನವ ಹಕ್ಕು ಬೇಕು. ಭಯ ಹಾಗೂ ದಬ್ಟಾಳಿಕೆಯಿಂದ ಅವರು  ಮುಕ್ತರಾಗಿರಬೇಕು. ಕಾಶ್ಮೀರಿಗಳಿಗೆ ಬೇಕಾದ ಸ್ವಾತಂತ್ರ್ಯ, ಗೌರವ ಹಾಗೂ ಘನತೆಯನ್ನು ತಂದುಕೊಡಲು ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಸಮುದಾಯ, ಭಾರತ ಹಾಗೂ ಪಾಕಿಸ್ಥಾನ ತುರ್ತಾಗಿ  ಕೆಲಸ ಮಾಡಬೇಕು. ಕಾಶ್ಮೀರದಲ್ಲಿನ ಅಮಾನವೀಯತೆ ಹಾಗೂ ದುಃಖಕ್ಕೆ ಮಂಗಳ ಹಾಡಬೇಕು ಎಂದು ಹೇಳಿದ್ದಾರೆ.

ಅಂತೆಯೇ ನಿರಾಯುಧ ಪ್ರತಿಭಟನಾಕಾರರನ್ನು ಕಾಶ್ಮೀರದಲ್ಲಿ ಕೊಲ್ಲಲಾಗುತ್ತಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಪೆಲ್ಲೆಟ್‌ ಗನ್‌ಗಳಿಂದಾಗಿ ನೂರಾರು ಮಂದಿ ಅಂಧರಾಗಿದ್ದಾರೆ.  ಹಲವಾರು ಶಾಲೆಗಳು ಮುಚ್ಚಲ್ಪಟ್ಟಿವೆ. ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದಾರೆ. ನಾನು 1.4 ಕೋಟಿ ಕಾಶ್ಮೀರಿ ಸೋದರ, ಸೋದರಿಯರ ಪರ ನಿಲ್ಲುತ್ತೇನೆ ಎಂದು ಮಲಾಲಾ ಹೇಳಿದ್ದಾರೆ.

ಮಲಾಲಾ ಅವರ ಈ ಹೇಳಿಕೆ ಪರೋಕ್ಷವಾಗಿ ಪಾಕಿಸ್ತಾನದ ನಿಲುವಿನಂತಿದ್ದು, ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಬುರ್ಹಾನ್‌ ವಾನಿ ಹತ್ಯೆ ಖಂಡಿಸಿ ಹಿಂಸಾಚಾರದಲ್ಲಿ ತೊಡಗಿರುವ ಯುವಕರನ್ನು  ನಿಯಂತ್ರಿಸಲು ಭಾರತ ಸರಕಾರ ಕೈಗೊಂಡ ಕ್ರಮಗಳ ವಿರುದ್ಧವೇ ಮಲಾಲಾ ಪರೋಕ್ಷ ದನಿ ಎತ್ತಿದ್ದಾರೆ. ಆದರೆ ಪಾಕಿಸ್ಥಾನದ ಕುಮ್ಮಕ್ಕಿನ ಬಗ್ಗೆ ಮಲಾಲಾ ಸಂದರ್ಶನದಲ್ಲಿ ಎಲ್ಲಿಯೂ  ಮಾತನಾಡಿಲ್ಲ.

ಪಾಕಿಸ್ತಾನ ಮೂಲಭೂತವಾದಿ ತಾಲಿಬಾನ್ ಭಯೋತ್ಪಾದಕರಿಂದ ರಕ್ಷಣೆ ಒದಗಿಸದ ಪಾಕಿಸ್ಥಾನವನ್ನು ತೊರೆದು ಬ್ರಿಟನ್‌ನಲ್ಲಿ ನೆಲೆಯೂರಿರುವ ನೊಬೆಲ್‌ ಪುರಸ್ಕೃತ ಪಾಕ್‌ ಯುವತಿ ಮಲಾಲಾ  ಯೂಸುಫ್ ಝೈ ಇದೀಗ ಕಾಶ್ಮೀರದ ಸ್ವಾತಂತ್ರ್ಯ ಪರ ದನಿ ಎತ್ತುವ ಭರದಲ್ಲಿ ಭಾರತದ ವಿರುದ್ಧ ಮಾತನಾಡುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com