ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ಹೋರಾಟ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಿನ್ನೆ ಪ್ರತಿಭಟನೆ ವೇಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ನಾಮ್ ತಮಿಳರ್ ಕಚ್ಚಿ ವಿದ್ಯಾರ್ಥಿ ಸಂಘಟನೆಯ 21 ವರ್ಷದ ಯುವಕ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ,
ಎಗ್ಮೊರೆಯ ಆರ್ ಆರ್ ಸ್ಟೆಡಿಯಂ ಬಳಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ರಸ್ತೆಯ ಮದ್ಯೆ ಓಡಿ ಹೋದ ಪಿ. ವಿಘ್ನೇಶ್ ಎಂಬ ವಿದ್ಯಾರ್ಥಿ, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಶೇ. 90 ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ವಿಘ್ನೇಶ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 11.05ಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಆರ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ತಮಿಳುನಾಡಿನಲ್ಲಿ ಕರ್ನಾಟಕ ನೋಂದಣಿಯ 2 ಕಾರುಗಳ ಮೇಲೆ ದಾಳಿ ಮಾಡಲಾಗಿದೆ. ದಾಳಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕುಮಾರ್ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ.