'ಸಾಲದ ದೊರೆ' ವಿಜಯ್ ಮಲ್ಯಗೆ ಷರತ್ತುಬದ್ಧ ಜಾಮೀನು; ಮಾಧ್ಯಮಗಳ ಹಂಗಾಮ ಎಂದು ಮಲ್ಯ ಟ್ವೀಟ್

ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಲಂಡನ್ ನ ವೆಸ್ಟ್ ಮಿನಿಸ್ಟರ್ಸ್....
ವಿಜಯ್ ಮಲ್ಯ
ವಿಜಯ್ ಮಲ್ಯ

ಲಂಡನ್: ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಲಂಡನ್ ನ ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದ ವಿಜಯ್‌ ಮಲ್ಯ ವಿರುದ್ಧ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಮಲ್ಯ ಅವರನ್ನು ಬಂಧಿಸಿ, ವೆಸ್ಟ್ ಮಿನಿಸ್ಟರ್ಸ್ ಕೋರ್ಟ್ ಗೆ ಹಾಜರುಪಡಿಸಿದ್ದರು.

ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಇಂದಿನಿಂದ ವಿಚಾರಣೆ ಆರಂಭವಾಗಿದ್ದು, ವಿಚಾರಣೆ ಬಳಿಕ ಆರೋಪಿ ವಿಜಯ್ ಮಲ್ಯ ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಕಳೆದ ಫೆಬ್ರವರಿಯಲ್ಲಿ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಬ್ರಿಟಿಷ್ ಸರ್ಕಾರ ಪುರಷ್ಕರಿಸಿದ್ದು, ಅದನ್ನು ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ರವಾನಿಸಿತ್ತು.

ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಷ್ಕರಿಸಿತ್ತು. ಅಲ್ಲದೆ ಮಲ್ಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವ ಬಗ್ಗೆ ಲಂಡನ್ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು.

9 ಸಾವಿರ ಕೋಟಿ ರುಪಾಯಿ ಸಾಲ ಮಾಡಿಕೊಂಡು ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಕೋರ್ಟ್ ಗಳಿಂದ ಹಲವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಇದೀಗ ಮಲ್ಯ ಅವರನ್ನು ದೇಶಕ್ಕೆ ಕರೆತರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ಮಲ್ಯ ಅವರು, ಎಂದಿನಂತೆ ಭಾರತೀಯ ಮಾಧ್ಯಮಗಳು ಅನಗತ್ಯ ಹಂಗಾಮ ಸೃಷ್ಟಿಸಿವೆ. ನಿರೀಕ್ಷೆಯಂತೆ ಹಸ್ತಾಂತರ ಕುರಿತು ಇಂದಿನಿಂದ ವಿಚಾರಣೆ ಆರಂಭವಾಗಿದೆ ಅಷ್ಟೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com