ಅಮೆರಿಕದಿಂದಾಗಿ 20 ವರ್ಷ ತಡವಾದ ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನ!

ದೇಶದ ಮೊದಲ ಅತೀ ದೊಡ್ಡ ಕ್ರಯೋಜನಿಕ್ ಇಂಜಿನ್ ಅನ್ನು ಯಶಸ್ವೀಯಾಗಿ ಪರೀಕ್ಷೆ ಮಾಡುವ ಮೂಲಕ ಇಸ್ರೋ ವಿಶ್ವದ ಶ್ಲಾಘನೆಗೆ ಪಾತ್ರವಾಗಿದೆ. ಆದರೆ ಈ ಯಶಸ್ಸು ಅಷ್ಟು ಸುಲಭವಾಗಿ ಭಾರತಕ್ಕೆ ದಕ್ಕಲ್ಲಿಲ್ಲ...
ಇಸ್ರೋದ ಅತೀ ದೊಡ್ಡ ಕ್ರಯೋಜನಿಕ್ ಎಂಜಿನ್ ಪರೀಕ್ಷೆ
ಇಸ್ರೋದ ಅತೀ ದೊಡ್ಡ ಕ್ರಯೋಜನಿಕ್ ಎಂಜಿನ್ ಪರೀಕ್ಷೆ

ನವದೆಹಲಿ: ದೇಶದ ಮೊದಲ ಅತೀ ದೊಡ್ಡ ಕ್ರಯೋಜನಿಕ್ ಇಂಜಿನ್ ಅನ್ನು ಯಶಸ್ವೀಯಾಗಿ ಪರೀಕ್ಷೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪ್ರಸ್ತುತ ಇಡೀ ವಿಶ್ವದ ಶ್ಲಾಘನೆಗೆ ಪಾತ್ರವಾಗಿದೆ. ಆದರೆ ಈ ಯಶಸ್ಸು ಅಷ್ಟು ಸುಲಭವಾಗಿ ಭಾರತಕ್ಕೆ ದಕ್ಕಲ್ಲಿಲ್ಲ. ಅದರ ಹಿಂದೆ ಸಾಕಷ್ಟು ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ವಿಶ್ವ ವೇದಿಕೆಯಲ್ಲಿ ಭಾರತೀಯ ವಿಜ್ಞಾನಿಗಳು ಅನುಭವಿಸಿದ ಮುಜುಗರ, ಶಂಕೆ ಮತ್ತು ಹತಾಶೆಗಳು ಕೂಡ ಅಡಗಿವೆ.

1980ರಲ್ಲೇ ಭಾರತ ಆತೀ ದೊಡ್ಡ ರಾಕೆಟ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಅಂದಿನ ಕಾಲಕ್ಕೆ ಅದಾಗಲೇ ರಷ್ಯಾ, ಜಪಾನ್ ಮತ್ತು ಅಮೆರಿಕ ದೇಶಗಳು ತಂತ್ರಜ್ಞಾನವನ್ನು ಸಿದ್ಧಿಸಿಕೊಂಡಿದ್ದವು. ಹೀಗಾಗಿ ಮೊದಲು ಭಾರತ ಈ ತಂತ್ರಜ್ಞಾನ ಹಂಚಿಕೆ ಸಂಬಂಧ ಜಪಾನ್ ದೇಶವನ್ನು ಸಂಪರ್ಕಿಸಿತ್ತು. ಆದರೆ ಆ ಹೊತ್ತಿಗೆ ಭಾರತ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಸ್ಮೈಲಿಂಗ್ ಬುದ್ಧ ಹೆಸರಲ್ಲಿ 1974ರ ಮೇ ತಿಂಗಳಲ್ಲಿ ಭಾರತ ತನ್ನ ಮೊದಲ ಅಣ್ವಸ್ತ್ರ ಪರೀಕ್ಷೆ ಪೋಖ್ರಾನ್ ಪರೀಕ್ಷೆ ಮಾಡಿತ್ತು. ಹೀಗಾಗಿ ಜಪಾನ್ ದೇಶ ತಂತ್ರಜ್ಞಾನ ಹಂಚಿಕೆಗೆ ಹಿಂದೇಟು ಹಾಕಿತ್ತು.

ಬಳಿಕ ಭಾರತ ಅಮೆರಿಕನ್ ಎಂಜಿನ್ ತಯಾರಕಾರದ ಜನರಲ್ ಡೈನಾಮಿಕ್ಸ್ ಕಾರ್ಪೋರೇಷನ್ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆದರೆ ಈ ಎಂಜಿನ್ ನ ಬೆಲೆ ದುಬಾರಿಯಾದ್ದರಿಂದ ಈ ಯೋಜನೆಯನ್ನೂ ಕೂಡ ಭಾರತ ಕೈಬಿಟ್ಟಿತ್ತು. ಬಳಿಕ ಅಂತಿಮ ಪ್ರಯತ್ನವಾಗಿ ಭಾರತ ರಷ್ಯಾದ ಸೋವಿಯತ್ ಒಕ್ಕೂಟವನ್ನು ಸಂಪರ್ಕಿಸಿತ್ತು. ಆರಂಭದಲ್ಲಿ ರಷ್ಯಾ ಕೂಡ ಭಾರತಕ್ಕೆ ಸುಧಾರಿತ ದರದಲ್ಲಿ ಎರಡು ಕ್ರಯೋಜನಿಕ್ ಎಂಜಿನ್ ಅನ್ನು ನೀಡಲು ಒಪ್ಪಿಗೆ ನೀಡಿತ್ತು. ಈ ಹಂತದಲ್ಲಿ ಅಡ್ಡಗಾಲು ಹಾಕಿದ್ದ ಅಮೆರಿಕ ಭಾರತ ಈ ತಂತ್ರಜ್ಞಾನವನ್ನು ತನ್ನ ಮಿಲಿಟರಿ ಶಕ್ತಿ ಅಭಿವೃದ್ಧಿಗೆ ಬಳಕೆ ಮಾಡುವ ಅಪಾಯವಿದೆ ಎಂದು ಹೇಳಿ 1992ರಲ್ಲಿ ರಷ್ಯಾ-ಭಾರತ ನಡುವಿನ ಒಪ್ಪಂದವನ್ನು ಅಮಾನತು ಮಾಡಿತ್ತು.  ಅಲ್ಲದೆ ರಷ್ಯಾ ಭಾರತಕ್ಕೆ ತಂತ್ರಜ್ಞಾನ ನೀಡದಂತೆ ಒತ್ತಡ ಹೇರಿತ್ತು. ಹೀಗಾಗಿ ರಷ್ಯಾ ಕೂಡ ತಂತ್ರಜ್ಞಾನ ನೀಡಿಕೆಯಿಂದ ಹಿಂದೆ ಸರಿದಿತ್ತು.

ಆ ಮೂಲಕ ಭಾರತದ ಉದ್ದೇಶಿತ ಯೋಜನೆಗೆ ಅಮೆರಿಕ ಅಡ್ಡಿಗಾಲು ಹಾಕಿತ್ತಾದರೂ, ಬಳಿಕದ ದಿನಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಸುಧಾರಿಸಿತ್ತು. ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಸತತ ಪರಿಶ್ರಮ ಪಟ್ಟು ವಿಜ್ಞಾನಿಗಳು ಸತತ 2 ದಶಕಗಳ ಕಾಲ ನಿರಂತರ ಸಂಶೋಧನೆ ಫಲವಾಗಿ ಈ ತಂತ್ರಜ್ಞಾನವನ್ನು ತಾವೇ ಸ್ವತಃ ಕಂಡುಕೊಂಡಿದ್ದಾರೆ.

ಆ ಮೂಲಕ ಈ ತಂತ್ರಜ್ಞಾನ ಹೊಂದಿದ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಈ ಹಿಂದೆ ರಷ್ಯಾ, ಅಮೇರಿಕಾದ, ಫ್ರಾನ್ಸ್, ಚೀನಾ, ಜಪಾನ್ ದೇಶಗಳು ಈ ಮಾದರಿಯ ಎಂಜಿನ್ ಅನ್ನು ಹೊಂದಿದ್ದು,  ಇದೀಗ ಭಾರತ ಕೂಡ ಸೇರ್ಪಡೆಯಾಗಿದೆ. ಈ ಅತೀದೊಡ್ಡ ಕ್ರಯೊಜನಿಕ್ ಎಂಜಿನ್ ಮೈನಸ್ 253 ಡಿಗ್ರಿ ತಾಪಮಾನದಲ್ಲಿರುವ ಲಿಕ್ವಿಡ್ ಹೈಡ್ರೋಜನ್ ಮತ್ತು ಲಿಕ್ವಿಡ್ ಆಕ್ಸಿಜನ್ ಇಂಧನವನ್ನು ಬಳಕೆ ಮಾಡಿಕೊಳ್ಳಲಿದೆ. ಇದೊಂದು  ಅತ್ಯಂತ ಸೂಕ್ಷ್ಮ ತಂತ್ರಜ್ಞಾನವಾಗಿದ್ದು, ಅತ್ಯಂತ ಕಡಿಮೆ ಇಂಧನ ಬಳಕೆ ಮಾಡಿ ಹೆಚ್ಚು ದೂರಕ್ಕೆ ರಾಕೆಟ್ ಅನ್ನು ಈ ಎಂಜಿನ್ ಮೂಲಕ ಚಲಾವಣೆ ಮಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com