ಇಸ್ರೋ ಮತ್ತೊಂದು ಮೈಲಿಗಲ್ಲು: ಅತೀ ದೊಡ್ಡ ಕ್ರಯೋಜನಿಕ್ ಇಂಜಿನ್ ಪರೀಕ್ಷೆ ಯಶಸ್ವಿ!

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮಹತ್ತರ ಮೈಲುಗಲ್ಲು ಸಾಧಿಸಿದ್ದು, ಅತೀ ದೊಡ್ಡ ಕ್ರಯೋಜನಿಕ್ ಇಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.
ಇಸ್ರೋದ ಅತೀ ದೊಡ್ಡ ಕ್ರಯೋಜನಿಕ್ ಎಂಜಿನ್ ಪರೀಕ್ಷೆ
ಇಸ್ರೋದ ಅತೀ ದೊಡ್ಡ ಕ್ರಯೋಜನಿಕ್ ಎಂಜಿನ್ ಪರೀಕ್ಷೆ

ಚೆನ್ನೈ: ಇತ್ತೀಚೆಗಷ್ಟೇ ಒಂದೇ ರಾಕೆಟ್ ನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದರ ಬೆನ್ನಲ್ಲೇ ಮತ್ತೊಂದು ಮಹತ್ತರ ಮೈಲುಗಲ್ಲು ಸಾಧಿಸಿದ್ದು,  ವಿಶ್ವದಲ್ಲೇ ಅತೀ ದೊಡ್ಡ ಕ್ರಯೋಜನಿಕ್ ಇಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.

ಇಸ್ರೋದ ಬಹು ಉದ್ದೇಶಿತ ಮತ್ತು ಬಹು ನಿರೀಕ್ಷಿತ Geosynchronous Satellite Launch Vehicle Mark III rocket-ಜಿಎಸ್ಎಲ್ ವಿ-ಮಾರ್ಕ್ 3 (ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ-ಮಾರ್ಕ್ III  ರಾಕೆಟ್) ರಾಕೆಟ್ ಗೆ ಬಳಕೆ ಮಾಡಲು ಈ ಅತ್ಯಾಧುನಿಕ ಎಂಜಿನ್ ಅನ್ನು ಸಂಶೋಧನೆ ಮಾಡಲಾಗಿದ್ದು, ತಮಿಳುನಾಡಿನ ಮಹೇಂದ್ರ ಗಿರಿಯಲ್ಲಿರುವ ಇಸ್ರೋ ಕೇಂದ್ರದಲ್ಲಿ ಈ ಅತೀ ದೊಡ್ಡ ಕ್ರಯೋಜನಿಕ್ ಎಂಜಿನ್ ಅನ್ನು  ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.

ಜಿಎಸ್ ಎಲ್ ವಿ ಸುಮಾರು 4 ಟನ್ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ರಾಕೆಟ್ ಆಗಿರಲಿದ್ದು, ಇಷ್ಟು ಭಾರಿ ಪ್ರಮಾಣದ ರಾಕೆಟ್ ಉಡಾವಣೆಗೆಂದೇ ವಿಶೇಷವಾಗಿ ಈ ಅತೀ ದೊಡ್ಡ ಕ್ರಯೋಜನಿಕ್ ಎಂಜಿನ್ ಅನ್ನು  ಇಸ್ರೋ ವಿಜ್ಞಾನಿಗಳು ಸಿದ್ಧಪಡಿಸಿದ್ದರು. ನಿನ್ನೆ ಮಹೇಂದ್ರ ಗಿರಿಯಲ್ಲಿರುವ ಇಸ್ರೋ ಕೇಂದ್ರದಲ್ಲಿ ಸುಮಾರು 10 ನಿಮಿಷಗಳ ಈ ಎಂಜಿನ್ ಅನ್ನು ಉರಿಸುವ ಮೂಲಕ ಪರೀಕ್ಷಿಸಲಾಗಿದ್ದು, ಎಂಜಿನ್ ನಿರೀಕ್ಷೆಯಂತೆಯೇ ಉರಿಯುವ  ಮೂಲಕ ಭಾರಿ ಯಶಸ್ಸು ಸಾಧಿಸಿದೆ.

ಪ್ರಸ್ತುತ ಇಸ್ರೋ ಬಳಿ ಇರುವ ಪಿಎಸ್ ಎಲ್ ವಿ ರಾಕೆಟ್ ಕೂಡ ಭಾರದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯದಿಂದ ಕೂಡಿದ್ದು, ಸುಮಾರು 1, 750 ಕಿಲೋ (1.75 ಟನ್) ತೂಕದ ಉಪಗ್ರಹಗಳನ್ನ ಬಾಹ್ಯಾಕಾಶಕ್ಕೆ  ಹೊತ್ತೊಯ್ಯುವ ಸಾಮರ್ಥ್ಯವಿದೆ. ಇನ್ನು ಪ್ರಸ್ತುತ ಇಸ್ರೋ ವಿಜ್ಞಾನಿಗಳು ಸಿದ್ಧ ಪಡಿಸುತ್ತಿರುವ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಪಿಎಸ್ ಎಲ್ ವಿಗಿಂತ ಮೂರು ಪಟ್ಟು ಅಧಿಕ ತೂಕ (4,000 ಕೆಜಿ)ದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ  ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಜಿಎಸ್ ಎಲ್ ವಿ ಮಾರ್ಕ್ 2 ರಾಕೆಟ್ ಅನ್ನು 2001ರಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿತ್ತು. ಇದೀಗ ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ ಪರೀಕ್ಷೆಗೆ ಸಿದ್ಧವಾಗುತ್ತಿದೆ.

ಈ ಹಿಂದೆ ರಷ್ಯಾ, ಅಮೇರಿಕಾದ, ಫ್ರಾನ್ಸ್, ಚೀನಾ, ಜಪಾನ್ ದೇಶಗಳು ಈ ಮಾದರಿಯ ಎಂಜಿನ್ ಅನ್ನು ಹೊಂದಿದ್ದು,  ಇದೀಗ ಭಾರತ ಕೂಡ ಸೇರ್ಪಡೆಯಾಗಿದೆ. ಈ ಅತೀದೊಡ್ಡ ಕ್ರಯೊಜನಿಕ್ ಎಂಜಿನ್ ಮೈನಸ್ 253 ಡಿಗ್ರಿ ತಾಪಮಾನದಲ್ಲಿರುವ ಲಿಕ್ವಿಡ್ ಹೈಡ್ರೋಜನ್ ಮತ್ತು ಲಿಕ್ವಿಡ್ ಆಕ್ಸಿಜನ್ ಇಂಧನವನ್ನು ಬಳಕೆ ಮಾಡಿಕೊಳ್ಳಲಿದೆ. ಇದೊಂದು  ಅತ್ಯಂತ ಸೂಕ್ಷ್ಮ ತಂತ್ರಜ್ಞಾನವಾಗಿದ್ದು, ಅತ್ಯಂತ ಕಡಿಮೆ ಇಂಧನ ಬಳಕೆ ಮಾಡಿ ಹೆಚ್ಚು ದೂರಕ್ಕೆ ರಾಕೆಟ್ ಅನ್ನು ಈ ಎಂಜಿನ್ ಮೂಲಕ ಚಲಾವಣೆ ಮಾಡಬಹುದಾಗಿದೆ.

ಬಾಹ್ಯಾಕಾಶಕ್ಕೆ ಮಾನವಸಹಿತ ರಾಕೆಟ್ ಕನಸಿಗೆ ನೆರವಾಗಲಿರುವ ಜಿಎಸ್ ಎಲ್ ವಿ ಮಾರ್ಕ್ 3
ಇನ್ನು ಇಸ್ರೋದ ಕನಸಿನ ಯೋಜನೆ ಬಾಹ್ಯಾಕಾಶಕ್ಕೆ ಮಾನವ ಸಹಿತ ರಾಕೆಟ್ ಕಳುಹಿಸುವ ಇಸ್ರೋ ಕನಸಿಗೆ ಈ ಎಂಜಿನ್ ಯಶಸ್ಸು ಪೂರಕವಾಗಿದ್ದು, ಭಾರಿ ಪ್ರಮಾಣದ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಇದರ ಮೂಲಕ ರವಾನೆ  ಮಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com