ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾನ್ಪುರ ಭೀಕರ ರೈಲು ದುರಂತದ ಹಿಂದೆ ಪಾಕ್ ಕೈವಾಡ?

ಕಳೆದ ನವೆಂಬರ್ 20ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಪಾಟ್ನಾ: ಕಳೆದ ನವೆಂಬರ್ 20ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಕಾನ್ಪುರ ರೈಲು ದುರಂತದ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದ್ದು, 140 ಮಂದಿ ಪ್ರಯಾಣಿಕರ ಸಾವಿಗೆ ಕಾರಣವಾಗ ಕಾನ್ಪುರ ರೈಲು ದುರಂತ ಪ್ರಕರಣದ ಹಿಂದೆ ಪಾಕಿಸ್ತಾನದ  ಗುಪ್ತಚರ ಇಲಾಖೆ ಐಎಸ್ಐ ನ ಕೈವಾಡವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ನೆರವಿನೊಂದಿಗೆ ಉಗ್ರಗಾಮಿಗಳು ಅಥವಾ  ಸ್ಥಳೀಯ ದುಷ್ಕರ್ಮಿಗಳು ಐಇಡಿ ಬಾಂಬ್ (ಸುಧಾರಿತ ಸ್ಫೋಟಕ) ಅಳವಡಿಸಿ ಹಳಿ ಸ್ಫೋಟಿಸಿರಬಹುದು ಎಂದು ಶಂಕಿಸಿದ್ದಾರೆ ಎಂದು ಹೇಳಿದೆ.

ರೈಲು ದುರಂತದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ದುರಂತ ನಡೆದ ಸ್ಥಳದಲ್ಲಿ ಕೆಲ ಅನುಮಾನಾಸ್ಪದ ವಸ್ತುಗಳ ದೊರೆತಿದ್ದು, ಈ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದಾಗ ಅದು ಸುಧಾರಿತ  ಸ್ಫೋಟಕಗಳು ಎಂದು ತಿಳಿದುಬಂದಿದೆ. ಹೀಗಾಗಿ ದುರಂತದಲ್ಲಿ ಪಾಕಿಸ್ತಾನದ ಕೈವಾಡದ ಕುರಿತು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ನಡೆದ ತನಿಖೆ ವೇಳೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದು, ವಿಚಾರಣೆ ವೇಳೆ  ಬಂಧಿತರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಅಂತೆಯೇ ಪಾಕಿಸ್ತಾನದ ಕೈವಾಡದ ಕುರಿತು ಬಾಯಿ ಬಿಟ್ಟಿದ್ದಾರೆ ಎಂದು ಬಿಹಾರ ಎಸ್ ಪಿ ಜಿತೇಂದ್ರ ರಾಣಾ ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಂತೆಯೇ ವರದಿಯಲ್ಲಿ ಈ ರೈಲು ಹಳಿ ಸ್ಫೋಟಗೊಳಿಸಲು 3 ಲಕ್ಷ ಹಣವನ್ನು ಪಾಕಿಸ್ತಾನ ನೀಡಿತ್ತು ಎಂದು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪ್ರಸ್ತುತ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು,  ಇನ್ನಷ್ಟೇ ಅಧಿಕೃತ ಹೇಳಿಕೆಗಳು ಪ್ರಕಟಗೊಳ್ಳಬೇಕಿದೆ.

ಕಳೆದ ನವೆಂಬರ್ 20ರಂದು ಇಂದೋರ್- ಪಾಟ್ನಾ ನಡುವೆ ಸಂಚರಿಸುತ್ತಿದ್ದ ಇಂದೋರ್-ರಾಜೇಂದ್ರ ನಗರ ಎಕ್ಸ್ ಪ್ರೆಸ್ ರೈಲು ಉತ್ತರ ಪ್ರದೇಶದ ಕಾನ್ಪುರದ ಫುಖ್ ರಾಯನ್ ಸಮೀಪ  ದುರಂತಕ್ಕೀಡಾಗಿತ್ತು. ರೈಲು ಹಳಿ  ತುಂಡರಿಸಿ ಹೋಗಿದ್ದರಿಂದ ರೈಲು ಬೋಗಿಗಳು ಹಳಿ ತಪ್ಪಿದ್ದವು. ರೈಲು ಅಪಘಾತಕ್ಕೀಡಾದ ರಭಸಕ್ಕೆ 14 ಭೋಗಿಗಳು ಜಖಂಗೊಂಡಿದ್ದವು. ಈ ಪೈಕಿ ಮೂರು ಬೋಗಿಗಳು ಒಂದಕ್ಕೊಂದು ಅಪ್ಪಳಿಸಿದ್ದರಿಂದ ಸುಮಾರು 140 ಮಂದಿ  ಸಾವನ್ನಪ್ಪಿ, 250 ಮಂದಿ ಗಾಯಗೊಂಡಿದ್ದರು. ಕಳೆದ ಆರು ವರ್ಷಗಳಲ್ಲಿ ಸಂಭವಿಸಿದ ಅತೀ ದೊಡ್ಡ ರೈಲು ದುರಂತ ಇದಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com