ಜಲ್ಲಿಕಟ್ಟು ನಿಷೇಧ: ಮರೀನಾ ಬೀಚ್ ಪ್ರತಿಭಟನೆ ಸಂಬಂಧ ಮಧ್ಯಪ್ರವೇಶವಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಲ್ಲಿಕಟ್ಟು ಆಚರಣೆ ಮೇಲಿನ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ತಮಿಳುನಾಡಿನ ಸಾಂಪ್ರದಾಯಿಕ ಆಚರಣೆ ಜಲ್ಲಿಕಟ್ಟು ಮೇಲಿನ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ನ್ಯಾಯಾಲಯ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಳ್ಳುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇದೇ ವೇಳೆ ನ್ಯಾಯಾಲಯ ವಜಾಗೊಳಿಸಿದ್ದು, ಮದ್ರಾಸ್ ಹೈಕೋರ್ಟ್ ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದೆ.
ವಕೀಲ ರಾಜಾರಮಣ್ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಜಲ್ಲಿಕಟ್ಟು ಆಚರಣೆ ಸಂಬಂಧ ವಿಚಾರಣೆ ನಡೆಸುವಂತೆ ಕೋರಿದ್ದರು. "ಜಲ್ಲಿಕಟ್ಟು ಆಚರಣೆ ಮೇಲಿನ ನಿಷೇಧ ತೆರವುಗೊಳಿಸುವಂತೆ ಕಳೆದ ಮೂರು ದಿನಗಳಿಂದ ತಮಿಳುನಾಡು ಜನತೆ ಚೆನ್ನೈನ ಮರೀನಾ ಬೀಚ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪೊಲೀಸರು ಪ್ರತಿಭಟನೆಗೆ ಅಡ್ಡಿಯಾಗುತ್ತಿದ್ದು, ಪ್ರತಿಭಟನಾಕಾರರಿಗೆ ಊಟ ಮತ್ತು ನೀರು ಸರಬರಾಜು ಮಾಡುತ್ತಿರುವವರ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾರೆ. ಇದರಿಂದ ಪ್ರತಿಭಟನೆಗೆ ಅಡ್ಡಿಯಾಗಿದೆ. ಹೀಗಾಗಿ ಈ ಬಗ್ಗೆ ನ್ಯಾಯಾಲಯ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಕೋರಿದ್ದರು.
ರಾಜಾ ರಮಣ್ ಅವರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು. ಮರೀನಾ ಬೀಚ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳು, ಮದ್ರಾಸ್ ಹೈಕೋರ್ಟ್ ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.
ಇಂದು ಬೆಳಗ್ಗೆಯಷ್ಟೇ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಅವರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ತೆರಳಿ ಜಲ್ಲಿಕಟ್ಟು ಆಚರಣೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಕೆ ಮಾಡಿದ್ದರು.