ಜಲ್ಲಿಕಟ್ಟು ಆಚರಣೆಗೆ ಶೀಘ್ರ ಚಾಲನೆ: ತಮಿಳುನಾಡು ಸಿಎಂ

ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ತಮಿಳುನಾಡು ಸರ್ಕಾರ ಪ್ರತಿಭಟನಾಕಾರರಿಗೆ...
ಮರೀನಾ ಬೀಚ್ ನಲ್ಲಿ ಪ್ರತಿಭಟನೆ ಮತ್ತು ಸಿಎಂ ಪನ್ನೀರ್ ಸೆಲ್ವಂ
ಮರೀನಾ ಬೀಚ್ ನಲ್ಲಿ ಪ್ರತಿಭಟನೆ ಮತ್ತು ಸಿಎಂ ಪನ್ನೀರ್ ಸೆಲ್ವಂ
ಚೆನ್ನೈ: ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ತಮಿಳುನಾಡು ಸರ್ಕಾರ ಪ್ರತಿಭಟನಾಕಾರರಿಗೆ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲಿ ಜಲ್ಲಿಕಟ್ಟು ಆಚರಣೆಗೆ ಚಾಲನೆ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರು ಶುಕ್ರವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿಂದ ನಿಷೇಧಕ್ಕೊಳಗಾಗಿರುವ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ರಕ್ಷಣೆಗೆ ತಮಿಳುನಾಡು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಪನ್ನೀರ್ ಸೆಲ್ವಂ ಅವರು ಸುಗ್ರೀವಾಜ್ಞೆ ಹೋರಡಿಸುವಂತೆ ಒತ್ತಾಯಿಸಿದ್ದರು.
ದೆಹಲಿಯಿಂದ ಇಂದು ಚೆನ್ನೈಗೆ ಆಗಮಿಸಿದ ಪನ್ನೀರ್ ಸೆಲ್ವಂ ಅವರು, ನೀವು ಬಯಸಿದಂತೆ ಜಲ್ಲಿಕಟ್ಟು ಆಚರಣೆ ನಡೆಯಲಿದೆ ಎಂದು ವಿಮಾನ ನಿಲ್ದಾಣದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಜಲ್ಲಿಕಟ್ಟು ನಿಷೇಧ ತೆರವುಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಕರಡು ಪ್ರತಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಗೃಹ ಸಚಿವಾಲಯ, ಕಾನೂನು ಮತ್ತು ಪರಿಸರ, ಅರಣ್ಯ ಮತ್ತು ಹವಮಾನ ಸಚಿವಾಲಯಗಳಿಂದ ಒಪ್ಪಿಗೆ ಪಡೆದ ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಹಿಗೆ ಕಳುಹಿಸಲಾಗುತ್ತದೆ ಎಂದು ತಮಿಳುನಾಡು ಸಿಎಂ ತಿಳಿಸಿದ್ದಾರೆ.
ಜಲ್ಲಿಕಟ್ಟು ರಕ್ಷಣೆಗಾಗಿ ಸುಗ್ರೀವಾಜ್ಞೆ ಸಿದ್ಧಪಡಿಸಿ ಅನುಮೋದನೆಗಾಗಿ ಕೇಂದ್ರ  ಸರ್ಕಾರಕ್ಕೆ ರವಾನಿಸಿದ್ದೇವೆ. ಇನ್ನೆರಡು-ಮೂರು ಗಂಟೆಗಳಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಲಿದೆ. ಹೀಗಾಗಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಬೇಕು. ಯಾವುದೇ ರೀತಿಯಲ್ಲೂ ಕಾನೂನು  ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಸಿಎಂ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ. ಆದರೂ ತಮಿಳುನಾಡಿನಾದ್ಯಂತ ಪ್ರತಿಭಟನೆ ಮುಂದುವರೆದಿದೆ.
ಈ ಮಧ್ಯೆ ಜಲ್ಲಿಕಟ್ಟು ಆಚರಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮದುರೈ ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರ ಸೂಚಿಸಿದ್ದು, ವಿವಾದಿತ ಕ್ರೀಡೆ ಆಯೋಜನೆಗೆ ಜಿಲ್ಲಾ ಆಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com