ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಮೇಲೆ ಅಮೆರಿಕ ಗೂಢಚಾರಿಕೆ?

ಇತರೆ ದೇಶಗಳ ರಕ್ಷಣಾ ವ್ಯವಸ್ಥೆ ಹಾಗೂ ರಾಜಕೀಯ ಕ್ಷೇತ್ರದ ಮೇಲೆ ಗೂಢಚಾರಿಕೆ ಮಾಡಿ ಕುಖ್ಯಾತಿ ಗಳಿಸಿದ್ದ ಅಮೆರಿಕದ ಸಿಐಎ ಅಚ್ಚರಿ ಎನ್ನುವಂತೆ ಭಾರತ ಓರ್ವ ಧಾರ್ಮಿಕ ಗುರುವಿನ ಮೇಲೆ ಗೂಢಚಾರಿಕೆ ನಡೆಸಿತ್ತು ಎಂಬ ಆಶ್ಚರ್ಯಕರ ವಿಚಾರ ಬೆಳಕಿಗೆ ಬಂದಿದೆ.
ಪುಟ್ಟಪರ್ತಿ ಸಾಯಿ ಬಾಬಾ ಮತ್ತು ಸಿಐಎ
ಪುಟ್ಟಪರ್ತಿ ಸಾಯಿ ಬಾಬಾ ಮತ್ತು ಸಿಐಎ
Updated on

ನವದೆಹಲಿ: ಇತರೆ ದೇಶಗಳ ರಕ್ಷಣಾ ವ್ಯವಸ್ಥೆ ಹಾಗೂ ರಾಜಕೀಯ ಕ್ಷೇತ್ರದ ಮೇಲೆ ಗೂಢಚಾರಿಕೆ ಮಾಡಿ ಕುಖ್ಯಾತಿ ಗಳಿಸಿದ್ದ ಅಮೆರಿಕದ ಸಿಐಎ ಅಚ್ಚರಿ ಎನ್ನುವಂತೆ ಭಾರತ ಓರ್ವ ಧಾರ್ಮಿಕ ಗುರುವಿನ ಮೇಲೆ ಗೂಢಚಾರಿಕೆ  ನಡೆಸಿತ್ತು ಎಂಬ ಆಶ್ಚರ್ಯಕರ ವಿಚಾರ ಬೆಳಕಿಗೆ ಬಂದಿದೆ.

ಅಮೆರಿಕದ ತನಿಖಾ ಸಂಸ್ಥೆ ಸಿಐಎ ದಕ್ಷಿಣ ಭಾರತದ ಖ್ಯಾತ ಧರ್ಮಗುರು ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಬಗ್ಗೆ ಗೂಢಚಾರಿಕೆ ನಡೆಸಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆಲ ಆಂಗ್ಲ ಪತ್ರಿಕೆಗಳು ವರದಿ ಪ್ರಸಾರ ಮಾಡಿದ್ದು,  ಸಿಐಎ ಗೂಢಚಾರಿಕೆ ನಡೆಸಿದ್ದ ಕುರಿತ ಮಹತ್ವದ ಕಡತಗಳು ಆನ್ ಲೈನ್ ನಲ್ಲಿ ಬಿಡುಗಡೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸುಮಾರು 16 ಪುಟಗಳ ಈ ಕಡತದಲ್ಲಿ ಸತ್ಯಸಾಯಿಬಾಬಾ ಕುರಿತ ಮಹತ್ವದ ಅಂಶಗಳು  ದಾಖಲಾಗಿದ್ದು, 1990ರಿಂದಲೇ ಬಾಬಾ ಅವರ ಮೇಲೆ ಗೂಢಚಾರಿಕೆ ನಡೆಸಿದ್ದರ ಕುರಿತು ಮಾಹಿತಿ ಲಭ್ಯವಾಗಿವೆ.

ಆದರೆ ಈ ಕಡತದಲ್ಲಿ ಸಾಯಿಬಾಬಾ ಅವರ ನಿಗೂಢ ಸಾವಿನ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಹೇಳಾಗುತ್ತಿದ್ದು, ಅಂತೆಯೇ ಸಾಯಿಬಾಬಾ ಪ್ರತ್ಯೇಕ ಧರ್ಮ ಸ್ಥಾಪನೆಗೂ ಮುಂದಾಗಿದ್ದರು ಎಂದು ಹೇಳಲಾಗಿದೆ. ಮೂಲಗಳ  ಪ್ರಕಾರ ಈ ಮಹತ್ವದ ಕಡತವನ್ನು 2000ನೇ ಇಸವಿಯಲ್ಲೇ ಬಿಡುಗಡೆ ಮಾಡಲು ಸಿಐಎ ಮುಂದಾಗಿತ್ತಾದರೂ, ಅನುಮತಿ ದೊರೆತಿರಲಿಲ್ಲ. ಹೀಗಾಗಿ ಈಗ ಈ ಮಹತ್ವದ ಕಡತವನ್ನು ಬಿಡುಗಡೆ ಮಾಡಲಾಗಿದೆ.

ರಹಸ್ಯ ಕಡತದಲ್ಲಿ ಏನಿದೆ?
ಹಿಂದೂ ಧರ್ಮದ ಕುರಿತಂತೆ ಆರಂಭದಲ್ಲಿ ಹೇಳಿಕೊಂಡು ಹೋಗುವ ಈ ಕಡತದಲ್ಲಿ ಇಲ್ಲಿನ ವೇದಗಳು, ಉಪನಿಷತ್‌'ಗಳು, ದೇವರು, ಅದರ ಮೇಲಿನ ನಂಬಿಕೆ ಕುರಿತಂತೆ ಸಮಗ್ರ ಮಾಹಿತಿ ನೀಡಲಾಗಿದೆಯಂತೆ. ಭಾರತದ ಜನ  ಪವಾಡಗಳನ್ನು ಬಹುಬೇಗನೇ ನಂಬುತ್ತಾರೆ, ಪವಾಡಗಳನ್ನು ನಡೆಸುವವರನ್ನು ದೇವರೇ ಎಂದು ತಿಳಿಯುತ್ತಾರೆ ಎಂಬ ವಿಚಾರವನ್ನೂ ಪ್ರಸ್ತಾವಿಸಲಾಗಿದೆ. ಅಂತೆಯೇ ಪವಾಡಗಳನ್ನು ಮಾಡುತ್ತಿದ್ದ ಪುಟ್ಟಪರ್ತಿ ಸಾಯಿಬಾಬಾ  ಅವರನ್ನು ವಿಷ್ಣುವಿಗೆ ಹೋಲಿಸಲಾಗಿದೆ. ವಿಷ್ಟುವಿನ 10 ಅವತಾರಗಳ ಬಗ್ಗೆ ಪ್ರಸ್ತಾವಿಸಿ, ಭಗವಾನ್‌ ಸತ್ಯಸಾಯಿ ಬಾಬಾ ಅವರದ್ದು ಇದರಲ್ಲೊಂದು ಪೂರ್ಣಾವತಾರ ಎಂದೇ ಅವರ ಭಕ್ತರು ನಂಬಿದ್ದಾರೆ. ಅಂದರೆ ಕಲ್ಕಿಯ  ಅವತಾರವೆಂದರೆ ಇದೇ ಎಂಬುದಾಗಿ ಅವರ ಭಕ್ತರು ನಂಬಿದ್ದರು ಎಂದು ಕಡತದಲ್ಲಿ ಹೇಳಲಾಗಿದೆ.

ಕೇವಲ ಪವಾಡಗಳನ್ನು ಮಾಡಿದರೆ ಅವರು ಕೇವಲ ಸಂತರೆನಿಸಿಕೊಳ್ಳುತ್ತಾರೆ. ಆದರೆ ಹಿಂದೆ ಆಗಿರುವ ಮತ್ತು ಮುಂದೆ ಆಗಬೇಕಿರುವ ವಿಚಾರಗಳನ್ನು ಕುಳಿತಲ್ಲೇ ಹೇಳುವ, ಜಗತ್ತಿನ ಎಲ್ಲ ಭಕ್ತರಿಗೂ ಏಕಕಾಲದಲ್ಲೇ ಅವರ  ಎದುರಲ್ಲೇ ದರ್ಶನ ಕೊಡುವ, ಹಿಂದೆ ಒಂದು ಬಾರಿಯೂ ನೋಡದಿದ್ದರೂ ಕೂಡ ಅವರ ಕನಸಿನಲ್ಲಿ ಬರುವ ಹಾಗೆ ಮಾಡುವ , ಜನರ ರೋಗವನ್ನು ವಾಸಿಮಾಡುವ, ಗಾಳಿಯಲ್ಲೇ ವಸ್ತುಗಳನ್ನು, ಆಭರಣಗಳನ್ನು, ಪವಿತ್ರ ವಿಭೂತಿ  ಸೃಷ್ಟಿಸಿ ಭಕ್ತರಿಗೆ ನೀಡುವ ಶಕ್ತಿ ಸಾಯಿಬಾಬಾ ಅವರಿಗೆ ಇತ್ತು. ಇದಷ್ಟೇ ಅಲ್ಲ ಪ್ರತಿಯೊಬ್ಬ ಭಕ್ತರ ಜತೆಯಲ್ಲೂ ಅವರದ್ದೇ ಭಾಷೆಯಲ್ಲಿ ಮಾತನಾಡುವ ಸಾಮರ್ಥ್ಯವೂ ಸಾಯಿಬಾಬಾ ಅವರಲ್ಲಿತ್ತು ಎಂದು ಅವರ ಭಕ್ತರು  ಮಾತನಾಡಿಕೊಳ್ಳುತ್ತಾರೆ. ಆದರೆ ಈ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿರಲಿಲ್ಲವಾದರೂ ಭಕ್ತರು ಅವರ ಮೇಲೆ ಅಪಾರ ನಂಬಿಕೆಯನ್ನಿಟ್ಟಿದ್ದರು ಎಂದು ಕಡತದಲ್ಲಿ ಹೇಳಲಾಗಿದೆ.

ಅಂತೆಯೇ ಈ ಬಗ್ಗೆ ವೈಜ್ಞಾನಿಕವಾಗಿ ಯಾರೂ ಸಾಬೀತು ಮಾಡಿಲ್ಲ. ಇದು ಭಕ್ತರ ನಂಬಿಕೆಯಷ್ಟೇ ಎಂದೂ ಹೇಳಲಾಗಿದೆ. ಇಡೀ ಜಗತ್ತಿನಲ್ಲಿ ಸಾಯಿಬಾಬಾ ಅವರಿಗೆ 5 ಕೋಟಿಗೂ ಹೆಚ್ಚು ಮಂದಿ ಅನುಯಾಯಿಗಳಿದ್ದಾರೆ. ಅಲ್ಲದೆ  ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯಕ್ಕೆ ಪ್ರತಿದಿನ 6 ಲಕ್ಷ ಮಂದಿ ಬಂದು ಹೋಗುತ್ತಾರೆ. ಹೀಗಾಗಿಯೇ ಇದಕ್ಕೆ ಸಾಯಿಬಾಬಾ ಆಂದೋಲನ ಎಂದು ಹೆಸರಿಟ್ಟು ಈ ಮೂಲಕ ಸಾಕಷ್ಟು ಪುಣ್ಯದ ಕೆಲಸಗಳಿಗೆ ಮುಂದಾಗಿದ್ದರು.  ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವುದು, ಶಾಲೆ, ಆಸ್ಪತ್ರೆಗಳ ನಿರ್ಮಾಣ ಮಾಡುವಂಥ ಕೆಲಸ ಗಳನ್ನು ಈ ಮೂಲಕ ಮಾಡಲಾಗುತ್ತಿತ್ತು. ಜತೆಗೆ ಪ್ರಶಾಂತಿ ನಿಲಯಂ ಬಳಿಯೇ 100 ಕೋಟಿ ಡಾಲರ್‌ ವೆಚ್ಚ  ಮಾಡಿ ಭಾರೀ ಆಸ್ಪತ್ರೆಯೊಂದನ್ನೂ ನಿರ್ಮಿಸಲಾಗಿತ್ತು. ಉತ್ತಮ ಶಿಕ್ಷಣ ನೀಡುವ ಸಲುವಾಗಿ ವಿಶ್ವವಿದ್ಯಾನಿಲಯವನ್ನೂ ಕಟ್ಟಲಾಗಿತ್ತು ಎಂಬಿತ್ಯಾದಿ ವಿವರಗಳು ಈ ಕಡತದಲ್ಲಿವೆ ಎನ್ನಲಾಗುತ್ತಿದೆ.

ಪ್ರತ್ಯೇಕ ಧರ್ಮ ಸ್ಥಾಪಿಸಲು ಬಯಸಿದ್ದರೇ ಬಾಬಾ ?
ಸಾಯಿಬಾಬಾ ಅವರದ್ದು ಪೂರ್ಣಾವತಾರವಾಗಿರುವುದರಿಂದ ಅವರ ಭಕ್ತರಿಗಾಗಿ ಪ್ರತ್ಯೇಕ ಧರ್ಮ ಕಟ್ಟಬೇಕು ಎಂದು ಕೊಂಡಿದ್ದರಂತೆ. ಆದರೆ ಯಾವುದೇ ಕಾರಣಕ್ಕೂ ಇನ್ನೊಂದು ಧರ್ಮದಿಂದ ಮತಾಂತರ ಮಾಡಿಕೊಳ್ಳಬಾರದು.  ಅವರು ಎಲ್ಲೇ ಇರಲಿ, ಹೇಗೆ ಇರಲಿ. ಆದರೆ ಈ ಧರ್ಮದ ಅನುಯಾಯಿಗಳಾಗಿರಬೇಕು. ಮುಂದೊಂದು ದಿನ  ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಪ್ರತ್ಯೇಕ ಧರ್ಮವೊಂದನ್ನು ಸ್ಥಾಪಿಸುವ ಉದ್ದೇಶ ಬಾಬಾ ಅವರ  ಭಕ್ತರಿಗೆ ಇತ್ತು. ಏಕೆಂದರೆ ಈ ಎಲ್ಲ ಧರ್ಮಗಳ ಹಿಂದೆ ಒಬ್ಬೊಬ್ಬ ಧಾರ್ಮಿಕ ನಾಯಕರೇ ಇರುವುದರಿಂದ ಅವರೂ ಧರ್ಮ ಕಟ್ಟಲು ಮುಂದಾಗಿದ್ದರು ಎಂಬುದನ್ನು ಕಡತದಲ್ಲಿ ಪ್ರಸ್ತಾವಿಸಲಾಗಿದೆ.

ಇನ್ನು ಕಡತದಲ್ಲಿ ಬಾಬಾ ಮತ್ತು ರಾಜಕೀಯ ನಂಟಿನ ಕುರಿತು ಪ್ರಸ್ತಾಪಿಸಲಾಗಿದ್ದು,  ಸಾಯಿಬಾಬಾ ಅವರಿಗೆ ರಾಜಕೀಯದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೆ ಇವರಿಗೆ ರಾಜಕೀಯಕ್ಕೆ ಸೇರಿದ ಹಾಗೂ ಸಮಾಜದ ವಿವಿಧ ಸ್ತರಗಳ  ಭಾರೀ ಗಣ್ಯರು ಅನುಯಾಯಿಗಳಾಗಿದ್ದರು. 1991ರಲ್ಲಿ ಇಲ್ಲಿನ ಆಸ್ಪತ್ರೆ ಉದ್ಘಾಟನೆ ಮತ್ತು ಸಾಯಿಬಾಬಾ ಅವರ ಹುಟ್ಟುಹಬ್ಬಕ್ಕೆ ಆಗಿನ ಪ್ರಧಾನಿ ಪಿ ವಿ ನರಸಿಂಹರಾವ್‌ ಅವರೇ ಬಂದಿದ್ದರು ಎಂದು ಉಲ್ಲೇಖೀಸಲಾಗಿದೆ. ಅಂತೆಯೇ  ಇದು ನರಸಿಂಹರಾವ್ ಅವರ ವೋಟ್ ಬ್ಯಾಂಕ್ ರಾಜಕೀಯವೇ ಎಂಬುದು ತಿಳಿದಿಲ್ಲ ಎಂದು ಕಡತದಲ್ಲಿ ಹೇಳಲಾಗಿದೆ. ರಾಜಕಾರಣಿಗಳಿಗೆ ಇವರ ಹಿಂದೆ ಇದ್ದ ವೋಟ್‌ ಬ್ಯಾಂಕ್‌ ಅಥವಾ ಒಬ್ಬ ಧಾರ್ಮಿಕ ನಾಯಕ ಎಂಬ ಕಾರಣಕ್ಕೆ  ಸಾಯಿಬಾಬಾ ಬಗ್ಗೆ ಒಲವಿತ್ತೇ ಎಂಬ ಬಗ್ಗೆ ತಿಳಿದಿಲ್ಲ ಎಂಬ ಅಂಶ ಪ್ರಸ್ತಾವಿಸಲಾಗಿದೆ. ಆದರೆ ಸಾಯಿಬಾಬಾ ಅವರು ಎಂದೂ ತಮ್ಮ ಭಾಷಣದಲ್ಲಿ ರಾಜಕೀಯ ವಿಚಾರ ಪ್ರಸ್ತಾವಿಸಲಿಲ್ಲ ಎಂಬ ಮಾಹಿತಿ ಇದೆ.

ಬಾಬಾ ಭಕ್ತರಲ್ಲಿ ಉಪರಾಷ್ಟ್ರಪತಿಗಳು, ರಾಜ್ಯಗಳ ರಾಜ್ಯಪಾಲರು, ಸು.ಕೋರ್ಟ್‌, ರಾಜ್ಯ ಹೈಕೋರ್ಟ್‌ ಗಳ ನ್ಯಾಯಮೂರ್ತಿಗಳು, ಚೀಫ್ ಏರ್‌ ಮಾರ್ಷಲ್‌, ಸೇನೆಯ ಜನರಲ್‌ಗ‌ಳು, ವಿವಿಧ ಸಚಿವರು, ಪ್ರಮುಖ ವಿಜ್ಞಾನಿಗಳು,  ಕೈಗಾರಿಕೋದ್ಯಮಿಗಳು, ವಿದ್ವಾಂಸರು, ಭಾರತದ ವಿವಿಧ ರಾಜಮನೆತನಗಳ ಮಂದಿ ಮತ್ತು ಹಲವಾರು ಸ್ವಾಮೀಜಿಗಳೂ ಇವರ ಭಕ್ತರಾಗಿದ್ದರು ಎಂಬ ಅಂಶವನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಈ ಕಡತವನ್ನು ಅಮೆರಿಕದ ಟಾಪ್‌ ಸೀಕ್ರೆಟ್‌ ಕೆಟಗರಿಯಲ್ಲಿ ಇಡಲಾಗಿದ್ದು, ಯಾವುದೇ ವಿದೇಶಿ ನಾಗರಿಕನಿಗೆ ಕೊಡಬಾರದು ಎಂದು ಉಲ್ಲೇಖಿಸಲಾಗಿದೆ. ಆದರೆ ಸಿಐಎ ಬಿಡುಗಡೆ ಮಾಡಿರುವ ಒಟ್ಟಾರೆ 9.30 ಲಕ್ಷ ವರ್ಗೀಕೃತವಲ್ಲದ  ಕಡತಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com