
ಲಖನೌ: ಉತ್ತರ ಪ್ರದೇಶದ ಠಾಕೂರ್‌ಗಂಜ್ ನಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರನ ವಿರುದ್ಧ ಭಯೋತ್ಪಾದನೆ ನಿಗ್ರಹ ದಳದ ಸೈನಿಕರು ನಡೆಸುತ್ತಿದ್ದ ಕಾರ್ಯಾಚರಣೆ ಅಂತ್ಯವಾಗಿದ್ದು, ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಶಂಕಿತ ಉಗ್ರನನ್ನು ಹೊಡೆದುರುಳಿಸುವಲ್ಲಿ ಸೈನಿಕರು ಯಶಸ್ವಿಯಾಗಿದ್ದಾರೆ.
ರಾಜಧಾನಿ ಲಖನೌನಿಂದ ಹೊರವಲಯದಲ್ಲಿರುವ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತು ದಾಳಿ ಮಾಡುತ್ತಿದ್ದ ಶಂಕಿತ ಉಗ್ರನನ್ನು ಸೈಪುಲ್ಲಾ ಎಂದು ಗುರುತಿಸಲಾಗಿದ್ದು, ಅಡಗಿ ಕುಳಿತಿದ್ದ ಶಂಕಿತ ಉಗ್ರ ಸೈಪುಲ್ಲಾ ಎಂಬಾತ ಶರಣಾಗಲು ಒಪ್ಪದೆ ಗುಂಡಿನ ಚಕಮಕಿಯಲ್ಲಿ ನಿರತನಾಗಿದ್ದ. ಹೀಗಾಗಿ ಆತನ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಎಟಿಎಸ್ ರಾತ್ರಿ ವೇಳೆಗೆ ಹೊಡೆದುರುಳಿಸಿದೆ. ಸೈಪುಲ್ಲಾ ಸುಮಾರು 8 ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿ ಸೈನಿಕರಿಗೆ ಬೆದರಿಕೆ ಹಾಕುತ್ತಿದ್ದ.
ಉಗ್ರ ಸೈಫುಲ್ಲಾ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಉಗ್ರಗಾಮಿ ಆಗಿರಬಹುದು ಎಂದು ಶಂಕಿಸಲಾಗುತ್ತಿದ್ದು, ಇಸಿಸ್ ಗೆ ಸೇರಿದ ಬಾವುಟ ಕೂಡ ಕೊಠಡಿಯಲ್ಲಿ ಪತ್ತೆಯಾಗಿದೆ.
ಅಪಾರ ಪ್ರಮಾಣ ಮದ್ದು-ಗುಂಡು, ಶಸ್ತ್ರಾಸ್ತ್ರ ಪತ್ತೆ
ಇನ್ನು ಉಗ್ರ ಸೈಫುಲ್ಲಾ ಅವಿತು ಕುಳಿತಿದ್ದ ಮನೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪಿಸ್ತೂಲು, ರಿವಾಲ್ವರ್, ಚಾಕುಗಳು, ಅಪಾರ ಸುತ್ತಿನ ಗುಂಡುಗಳು, ಬಾಂಬ್ ತಯಾರಿಕೆಯಲ್ಲಿ ಬಳಸಲಾಗುವ ಟೈಮರ್ ಮತ್ತು ಯಂತ್ರೋಪಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಈ ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ದೊರೆತ ಪಾಸ್ ಪೋರ್ಟ್ ಮತ್ತು ಇತರೆ ವಸ್ತುಗಳ ಆಧಾರದ ಮೇಲೆ ಆತನ ಸ್ನೇಹಿತರ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಅಂತೆಯೇ ಸ್ಥಳದಲ್ಲಿ ಹಲವು ಮೊಬೈಲ್ ಗಳು ಪತ್ತೆಯಾಗಿದ್ದು, ಇವುಗಳಲ್ಲಿ ಮಾಹಿತಿಯನ್ನಾಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
Advertisement