ಕೋಕ್, ಪೆಪ್ಸಿ ಮೇಲೆ ನಿಷೇಧ; ತಮಿಳುನಾಡು ಬಳಿಕ ಈಗ ಕೇರಳ ಸರದಿ!

ಬಹುರಾಷ್ಟ್ರೀಯ ಸಂಸ್ಥೆಯಾದ ಕೋಕಕೋಲಾ ಮತ್ತು ಪೆಪ್ಸಿ ಪೇಯಗಳನ್ನು ಮಾರಾಟ ಮಾಡದಿರಲು ಕೇರಳ ವರ್ತಕರ ಒಕ್ಕೂಟ ನಿರ್ಧರಿಸಿದ್ದು, ಇದೇ ಮಾರ್ಚ್ 14ರಂದು ಅಧಿಕೃತ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರಂ: ಬಹುರಾಷ್ಟ್ರೀಯ ಸಂಸ್ಥೆಯಾದ ಕೋಕಕೋಲಾ ಮತ್ತು ಪೆಪ್ಸಿ ಪೇಯಗಳನ್ನು ಮಾರಾಟ ಮಾಡದಿರಲು ಕೇರಳ ವರ್ತಕರ ಒಕ್ಕೂಟ ನಿರ್ಧರಿಸಿದ್ದು, ಇದೇ ಮಾರ್ಚ್ 14ರಂದು ಅಧಿಕೃತ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.

ಕೇರದಳ ವರ್ತಕರ ಸಂಘ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ (ಕೆವಿವಿಇಎಸ್) ಕೋಕಕೋಲಾ ಮತ್ತು ಪೆಪ್ಸಿ ಸಂಸ್ಥೆಗಳು ನಮ್ಮ ನೆಲದ ಅಂತರ್ಜಲ ಮೂಲವನ್ನು ಹಾಳು ಮಾಡುತ್ತಿದ್ದು, ಇದರಿಂದಾಗಿ ರಾಜ್ಯದ  ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ರೈತರು ತೊಂದರೆ ಅನುಭವಿಸುತ್ತಿದ್ದು, ಇದೇ ಕಾರಣಕ್ಕಾಗಿ ಈ ಸಂಸ್ಥೆಯ ಪೇಯಗಳನ್ನು ಮಾರಾಟ ಮಾಡದಿರಲು ನಾವು ನಿರ್ಧರಿಸಿದ್ದೇವೆ.  ಮಾರ್ಚ್ 14ರಂದು ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಲಾಗುತ್ತದೆ ಎಂದು ತಿಳಿಸಿದೆ.

ಇದೇ ವೇಳೆ ತಮ್ಮ ನಿರ್ಧಾರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಕೇರಳ ಸರ್ಕಾರ ಬೆಂಬಲ ನೀಡಬೇಕು ಎಂದು ಕೆವಿವಿಇಎಸ್ ಅಧ್ಯಕ್ಷ ಟಿ ನಾಜಿರುದ್ದೀನ್ ಮನವಿ ಮಾಡಿದ್ದಾರೆ. ಇದೇ ವೇಳೆ ಕೋಕಕೋಲಾ ಮತ್ತು  ಪೆಪ್ಸಿಯಿಂತಹ ಬಹುರಾಷ್ಟ್ರೀಯ ಸಂಸ್ಥೆಗಳ ಬದಲಿಗೆ ದೇಶೀ ಸಂಸ್ಥೆಗಳನ್ನು ಪ್ರಚಾರ ಮಾಡಲು ನಿರ್ಧರಿಸಿದ್ದು, ಲೈಮ್ ಸೋಡಾ, ಎಳನೀರು, ಬಾದಾಮಿ ಹಾಲಿನಂತಹ ದೇಶೀ ಪೇಯಗಳನ್ನು ಮಾರಾಟ ಮಾಡುವುದಾಗಿಯೂ  ತಿಳಿಸಿದ್ದಾರೆ.

ಕೇರಳದಲ್ಲಿರುವ ಸುಮಾರು 7 ಲಕ್ಷ ಅಂಗಡಿ ಮಾಲೀಕರು ತಮ್ಮ ನಿರ್ಧಾರಕ್ಕೆ ಬೆಂಬಲ ನೀಡಿದ್ದು, ಮಾರ್ಚ್ 14ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಳಿಕ ಈ ಸಂಸ್ಥೆಗಳ ವಿರುದ್ಧ  ಸಾಂಕೇತಿಕ ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕೃತವಾಗಿ ತಮ್ಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಟಿ ನಾಜಿರುದ್ದೀನ್ ತಿಳಿಸಿದರು.

ಇದೇ ಮಾರ್ಚ್ 1ರಿಂದ ತಮಿಳುನಾಡಿನಲ್ಲಿ ಪೆಪ್ಸಿ ಮತ್ತು ಕೋಕಕೋಲ ಪೇಯಗಳ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ತಮಿಳುನಾಡು ವರ್ತಕರ ಸಂಘ ದೇಶೀ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರಮ  ಕೈಗೊಂಡಿತ್ತು. ಇದೀಗ ಕೇರಳ ವರ್ತಕರ ಸಂಘ ಅಂತರ್ಜಲ ರಕ್ಷಣೆಗಾಗಿ ಮಾರುಕಟ್ಟೆಯಲ್ಲಿ ದೈತ್ಯವಾಗಿ ಬೆಳೆದು ನಿಂತಿರುವ ಪೆಪ್ಸಿ ಮತ್ತು ಕೋಕಕೋಲಾ ಪೇಯಗಳ ಮಾರಾಟಕ್ಕೆ ಆಂಕುಶ ಹಾಕಲು ಮುಂದಾಗಿದೆ.

ಒಟ್ಟಾರೆ ಲಾಭಾಂಶಕ್ಕೆ ಆಸೆ ಪಡದೇ ರೈತರ ಮತ್ತು ದೇಶೀ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇರಳ ಮತ್ತು ತಮಿಳುನಾಡು ವರ್ತಕರ ಸಂಘಗಳು ಕೈಗೊಂಡಿರುವ ಈ ದಿಟ್ಟ ನಿರ್ಧಾರ ನಿಜಕ್ಕೂ ಇತರೆ ರಾಜ್ಯಗಳ ವರ್ತಕರಿಗೆ  ಮಾದರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com