
ನವದೆಹಲಿ: ಉತ್ತರ ಪ್ರದೇಶದ ಫೈರ್ ಬ್ರಾಂಡ್ ಐಎಎಸ್ ಅಧಿಕಾರಿ ಎಂದೇ ಖ್ಯಾತರಾಗಿದ್ದ ಪ್ರಾಮಾಣಿಕ ಅಧಿಕಾರಿ ಬಿ ಚಂದ್ರಕಲಾ ಅವರಿಗೆ ಕೇಂದ್ರ ಸರ್ಕಾರದ ಮನ್ನಣೆ ದೊರೆತಿದ್ದು, ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಚಂದ್ರಕಲಾ ಅವರಿಗೆ ಬಡ್ತಿ ನೀಡಲಾಗಿದೆ.
ಉತ್ತರ ಪ್ರದೇಶದ ಬುಲಂದ್ ಶಹರ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ ಚಂದ್ರಕಲಾ ಅವರು ತಮ್ಮ ಪ್ರಾಮಾಣಿಕತೆ ಹಾಗೂ ನಿಷ್ಠೂರವಾದದಿಂದಲೇ ಖ್ಯಾತಿ ಗಳಿಸಿದವರು. ಚಂದ್ರಕಲಾ ಅವರು 2008ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ 2014ರಲ್ಲಿ ರಸ್ತೆ ಕಾಮಗಾರಿಯಲ್ಲಿ ಲಂಚ ಪಡೆದಿದ್ದ ಅಧಿಕಾರಿಗಳನ್ನು ಸಾರ್ವಜನಿಕವಾಗಿಯೇ ಜಾಡಿಸಿ ಬುದ್ಧಿಕಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋ ರಾತ್ರಿ ಖ್ಯಾತಿ ಗಳಿಸಿದ್ದರು. ಬಳಿಕ ತಮ್ಮ ಪ್ರಾಮಾಣಿಕ ಕೆಲಸಗಳಿಂದಲೇ ಉತ್ತರ ಪ್ರದೇಶದಲ್ಲಿ ಫೈರ್ ಬ್ರಾಂಡ್ ಎಂದು ಖ್ಯಾತಿ ಗಳಿಸಿದ್ದ ಚಂದ್ರಕಲಾ ಅವರು ಬಿಜ್ನೋರ್ ಅನ್ನು "ಬಯಲು ಶೌಚ ಮುಕ್ತ" ಪ್ರದೇಶವನ್ನಾಗಿಸಿದ್ದರು.
ಅವರ ಈ ಕಾರ್ಯ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶಂಸೆಗೆ ಕಾರಣವಾಗಿದ್ದು, ಚಂದ್ರಕಲಾ ಅವರಿಗೆ ಕೇಂದ್ರ ಸರ್ಕಾರ ಬಡ್ತಿ ನೀಡಿ ಕುಡಿಯುವ ನೀರು ಮತ್ತು ಒಳಚರಂಡಿ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಕೇವಲ ಅಷ್ಟು ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನದ ನಿರ್ದೇಶಕಿಯಾಗಿಯೂ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಬಲಂದ್ ಶಹರ್, ಮೀರತ್ ಮತ್ತು ಬಿಜ್ನೋರ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಚಂದ್ರಕಲಾ ಅವರು ಶೀಘ್ರದಲ್ಲೇ ಕೇಂದ್ರ ಕರ್ತವ್ಯಕ್ಕೆ ನಿಯೋಜನೆಯಾಗಲಿದ್ದಾರೆ.
Advertisement