ಇವಿಎಂ ತಿರುಚಲು ಅಸಾಧ್ಯ; ಪ್ರಾತ್ಯಕ್ಷಿಕೆ ಮೂಲಕ ತೋರಿಸಲು ಕೇಂದ್ರ ಚುನಾವಣಾ ಆಯೋಗ ಮುಂದು

ಮತಯಂತ್ರಗಳಲ್ಲಿನ ದೋಷದಿಂದಾಗಿಯೇ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂಬ ಪ್ರತಿಪಕ್ಷಗಳ ಗಂಭೀರ ಆರೋಪದ ಹಿನ್ನಲೆಯಲ್ಲಿ ವಿವಾದಕ್ಕೆ ತೆರೆ ಎಳೆಯಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದ್ದು, ಮತಯಂತ್ರ ಪ್ರಾತ್ಯಕ್ಷಿಕೆಗೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮತಯಂತ್ರಗಳಲ್ಲಿನ ದೋಷದಿಂದಾಗಿಯೇ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂಬ ಪ್ರತಿಪಕ್ಷಗಳ ಗಂಭೀರ ಆರೋಪದ ಹಿನ್ನಲೆಯಲ್ಲಿ ವಿವಾದಕ್ಕೆ ತೆರೆ ಎಳೆಯಲು ಕೇಂದ್ರ ಚುನಾವಣಾ ಆಯೋಗ  ಮುಂದಾಗಿದ್ದು, ಮತಯಂತ್ರ ಪ್ರಾತ್ಯಕ್ಷಿಕೆಗೆ ಮುಂದಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಗಳಿಸಿದ್ದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಮತಯಂತ್ರಗಳಲ್ಲಿ ವ್ಯಾಪಕ ಅಕ್ರಮ ನಡೆದಿದ್ದು. ದೋಷಪೂರಿತ ಮತಯಂತ್ರಗಳಿಂದ ಬಿಜೆಪಿಗೆ ಹೆಚ್ಚಿನ  ಮತಗಳು ಲಭಿಸಿವೆ. ಮತಯಂತ್ರದ ಯಾವುದೇ ಬಟನ್ ಒತ್ತಿದರೂ ಬಿಜೆಪಿ ಮತ ಬೀಳುವಂತೆ ರಚಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿತ್ತು. ಇದಕ್ಕೆ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಬೆಂಬಲ  ನೀಡಿ ಮತ್ತೆ ಈ ಹಿಂದಿನ ಬ್ಯಾಲಟ್ ಪೇಪರ್ ವ್ಯವಸ್ಥೆಯನ್ನು ತರುವಂತೆ ಆಗ್ರಹಿಸಿದ್ದವು.

ಈ ಆರೋಪದ ಬೆನ್ನಲ್ಲೇ ಅಂದರೆ ಕಳೆದವಾರವಷ್ಟೇ ಕೇಂದ್ರ ಚುನಾವಣಾ ಆಯೋಗ ಮತಯಂತ್ರದಲ್ಲಿನ ದೋಷ ಸಾಬೀತು ಪಡಿಸಿ ಎಂದು ಪ್ರತಿಪಕ್ಷಗಳಿಗೆ ಸವಾಲೆಸೆದಿತ್ತು. ಇತ್ತೀಚಿನ ಚುನಾವಣೆಗಳಲ್ಲಿ ನಡೆದ ಯಾವುದೇ  ಮತದಾನದಲ್ಲೂ ದೋಷ ಪೂರಿತ ಮತಯಂತ್ರಗಳ ಬಳಕೆಯಾಗಿದ್ದರೆ ಅದನ್ನು ಸಾಬೀತು ಪಡಿಸಿ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ನಸೀಮ್ ಜೈದಿ ಹೇಳಿದ್ದರು.

ಇದೀಗ ಈ ಎಲ್ಲ ವಿವಾದಗಳಿಗೆ ತೆರೆ ಎಳೆಯಲು ನಿರ್ಧರಿಸಿರುವ ಚುನಾವಣಾ ಆಯೋಗ ಮಾಧ್ಯಮಗಳ ಎದುರು ಚುನಾವಣಾ ಮತಯಂತ್ರದ ಪ್ರಾತ್ಯಕ್ಷಿಕೆ ನೀಡಲು ಮುಂದಾಗಿದೆ. ಶೀಘ್ರದಲ್ಲೇ ಮತ ಯಂತ್ರದ ಪ್ರಾತ್ಯಕ್ಷಿಕೆ  ನೀಡುವುದಾಗಿ ಆಯೋಗ ಹೇಳಿದೆಯಾದರೂ, ಪ್ರಾತ್ಯಕ್ಷಿಕೆ ನೀಡುವ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com