ಕೂಡ್ಲು ತೀರ್ಥ ಜಲಪಾತ
ಕೂಡ್ಲು ತೀರ್ಥ ಜಲಪಾತ

ಕೂಡ್ಲು ತೀರ್ಥದ ಸೊಬಗು ನೋಡಿದಿರಾ?

ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು...
Published on

ಕರ್ನಾಟಕದ ಮಲೆನಾಡು ಪ್ರದೇಶಗಳನ್ನು ಬಹುಶಃ ಜಲಪಾತಗಳ ನಾಡು ಎಂದೇ ಕರೆಯಬಹುದು. ಏಕೆಂದರೆ ರಾಜ್ಯದ ಬಹುತೇಕ ಜಲಪಾತಗಳು ಈ ಮಲೆನಾಡಿನಲ್ಲೇ ಇವೆ. ಮಲೆನಾಡಿನ ಅತಿ ಸುಂದರ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು. ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು.

ಆಗುಂಬೆ ಬಳಿ ಹರಿಯುವ ಪವಿತ್ರಾ ಸೀತಾ ನದಿಯಿಂದಾಗಿ ಕೂಡ್ಲು ತೀರ್ಥ ಜಲಪಾತ ಸೃಷ್ಟಿಯಾಗಿದ್ದು, ಸ್ಥಳೀಯವಾಗಿ ಈ ಸೀತಾನದಿಗೆ ಪವಿತ್ರ ಸ್ಥಾನವಿದೆ. ಈ ಸೀತಾನದಿಯನ್ನು ಹೆಬ್ರಿ ಸೀತಾ ನದಿ ಎಂದೂ ಕೂಡ ಸ್ಥಳೀಯರು ಕರೆಯುತ್ತಾರೆ. ಸೀತಾ ನದಿಯ ಒಂದು ಕೊಳದಿಂದ ಹರಿಯುವ ನೀರಿನಿಂದಾಗಿ ಈ ಕೂಡ್ಲು ತೀರ್ಥ ಜಲಪಾತ ಸೃಷ್ಟಿಯಾಗಿದ್ದು, ಈ ಕೊಳದಲ್ಲಿ ನೂರಾರು ವರ್ಷಗಳ ಹಿಂದೆ ಹಲವು ಋಷಿ ಮುನಿಗಳು ತಪಸ್ಸನ್ನಾಚರಿಸಿದ್ದರು ಎಂಬ ಪ್ರತೀತಿ ಇದೆ. ಈ ಕೊಳದಿಂದಾಗಿ ಸೃಷ್ಟಿಯಾಗಿರುವ ಕೂಡ್ಲು ತೀರ್ಥ ಜಲಪಾತ ಸುಮಾರು 126 ಅಡಿ  ಮೇಲಿಂದ ಧುಮ್ಮುಕ್ಕುತ್ತದೆ.

ಇದು ಆಗುಂಬೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಪ್ರವಾಸ ಹೊರಡುವವರೆಲ್ಲರು ನೋಡಲೇಬೇಕಾದ ಒಂದು ಸುಂದರ ಜಲಪಾತವಾಗಿದೆ.

ಕೂಡ್ಲು ತೀರ್ಥಕ್ಕೆ ಹೋಗುವುದು ಹೇಗೆ?


ಕೂಡ್ಲು ತೀರ್ಥ ಜಲಪಾತ ಉಡುಪಿಯಿಂದ ಸುಮಾರು 55 ಕಿ.ಮೀ ದೂರದಲ್ಲಿದ್ದು, ಆಗುಂಬೆಯಿಂದ ಕೇವಲ 26 ಕಿ.ಮೀ ದೂರದಲ್ಲಿದೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವವರು  ತೀರ್ಥಹಳ್ಳಿ-ಉಡುಪಿ ಬಸ್ ಮೂಲಕ ಸೋಮೇಶ್ವರ ನಿಲ್ದಾಣದಲ್ಲಿ ಇಳಿಯಬೇಕು. ಸೋಮೇಶ್ವರದಿಂದ ಕೂಡ್ಲು ತೀರ್ಥ ಕೇವಲ 10 ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಕೂಡ್ಲು ತೀರ್ಥಕ್ಕೆ ಪ್ರಯಾಣಿಸಲು ಆಟೋಗಳ ಸೇವೆ ಇದೆ.

ಇನ್ನು ಬೈಕ್ ಮತ್ತು ಕಾರುಗಳಂತಹ ಸ್ವಂತ ವಾಹನಗಳಿದ್ದರೆ, ಆಗುಂಬೆಯ ಘಾಟಿಯಿಂದ ಕೆಳಗೆ ಸೊಮೇಶ್ವರಕ್ಕೆ ಹೋದರೆ, ಸುಮಾರು 1 ರಿಂದ 2 ಕಿ.ಮಿ ದೂರದಲ್ಲಿ ಎಡಕ್ಕೆ ತಿರುಗಿ ಸುಮಾರು  7 ಕಿ.ಮಿ ಕ್ರಮಿಸಬೇಕು. ಬಳಿಕ ಪ್ರವಾಸಿಗರು ಮೂರರಿಂದ ನಾಲ್ಕು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಮನೋಹರವಾಗಿ ಧುಮ್ಮುಕ್ಕುವ ಕೂಡ್ಲು ತೀರ್ಥ ಜಲಪಾತವನ್ನು ತಲುಪಬಹುದು.

ಊಟ-ತಿಂಡಿಗಿಲ್ಲ ವ್ಯವಸ್ಥೆ


ಇನ್ನು ಈ ಸುಂದರ ಜಲಪಾತ ನೋಡಲು ಇಚ್ಛಿಸುವವರು ಊಟ-ತಿಂಡಿಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ತೀರಾ ದಟ್ಟವಾದ ಅರಣ್ಯದಿಂದ ಕೂಡ್ಲು ತೀರ್ಥ ಸುತ್ತುವರೆದಿದ್ದು,  6-7 ಕಿ.ಮೀ ವ್ಯಾಪ್ತಿಯಲ್ಲಿ ನಿಮಗೆ ತಿನ್ನಲು ಯಾವುದೇ ತಿಂಡಿ-ತಿನಿಸುಗಳು ದೊರೆಯುವುದಿಲ್ಲ. ಕೆಲ ಸ್ಥಳೀಯರು ಪಾರ್ಕಿಂಗ್ ಜಾಗದಲ್ಲಿ ಮೀನು, ಕೆಲ ಕುರುಕಲು ತಿಂಡಿಗಳಂತಹ  ಪದಾರ್ಥಗಳನ್ನು ಮಾರುತ್ತಾರೆಯಾದರೂ ಅದು ಕೊಂಚ ದುಬಾರಿ. ಹೀಗಾಗಿ ಪ್ರವಾಸಿಗರು ತಮ್ಮ ಊಟದ ವ್ಯವಸ್ಥೆಯನ್ನು ತಾವೇ ಮಾಡಿಕೊಂಡು ಪ್ರಯಾಣಕ್ಕೆ ಸಿದ್ಧರಾದರೆ ಒಳಿತು.

ಮಾಹಿತಿ: ಅನಂತ ಪ್ರಣಯ ಬ್ಲಾಗ್ ಸ್ಪಾಟ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com