ಭಾರತದ ಸ್ಕಾಟ್ಲೆಂಡ್, ದಕ್ಷಿಣದ ಕಾಶ್ಮೀರ ನಮ್ಮ ಈ "ಕೊಡಗು"

ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಹಸಿರು ಗಿರಿವನಗಳ ಸಿರಿವಂತ ಜಿಲ್ಲೆ. ತುಂಬಿ ಹರಿಯುವ ತೊರೆಗಳು, ದಟ್ಟ ಕಾನನ, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳು ಅವುಗಳ ನಡುವೆ ಮಧ್ಯೆ...
ಕರ್ನಾಟಕದ ಹೆಮ್ಮೆಯ ಪ್ರವಾಸಿ ತಾಣ ಕೊಡಗು (ಸಂಗ್ರಹ ಚಿತ್ರ)
ಕರ್ನಾಟಕದ ಹೆಮ್ಮೆಯ ಪ್ರವಾಸಿ ತಾಣ ಕೊಡಗು (ಸಂಗ್ರಹ ಚಿತ್ರ)

ವಿಶ್ವ ಪ್ರವಾಸೋಧ್ಯಮ ಪಟ್ಟಿಯಲ್ಲಿ ಸ್ಕಾಟೆಂಡ್ ದೇಶಕ್ಕೆ ಪ್ರಮುಖ ಸ್ಥಾನ. ಅಲ್ಲಿನ ಪ್ರಾಕೃತಿಕ ವಾತಾವರಣ ಆ ದೇಶವನ್ನು ಆಸ್ಥಾನದಲ್ಲಿ ತಂದು ನಿಲ್ಲಿಸಿದೆ. ಸದಾ ಕಾಲ ಮಂಜಿನ ವಾತಾವರಣದಿಂದ ಕೂಡಿರುವ ಸ್ಕಾಟ್ಲೆಂಡ್ ನವ ವಿವಾಹಿತರಿಗೆ ಹನಿಮೂನ್ ಅತ್ಯುತ್ತಮ ಹನಿಮೂನ್ ಸ್ಪಾನ್ ಎಂದೇ ಖ್ಯಾತಿಗಳಿಸಿದೆ. ಇಂತಹುದೇ ವಾತವಾರಣವಿರುವ ನಗರವೊಂದ ನಮ್ಮ ದೇಶದಲ್ಲಿದ್ದು, ಅದೂ ಕೂಡ ನಮ್ಮ ಕರ್ನಾಕದಲ್ಲಿರುವುದು ನಮ್ಮ ಹೆಮ್ಮೆ.

ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಹಸಿರು ಗಿರಿವನಗಳ ಸಿರಿವಂತ ಜಿಲ್ಲೆ. ತುಂಬಿ ಹರಿಯುವ ತೊರೆಗಳು, ದಟ್ಟ ಕಾನನ, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳು ಅವುಗಳ ನಡುವೆ ಮಧ್ಯೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಟ್ರಾಫಿಕ್ ಮತ್ತು ಮಾಲೀನ್ಯ ಜಂಜಾಟದಿಂದ ಬಳಲುತ್ತಿರುವ ಕಾಂಕ್ರೀಟ್ ನಾಡಿನ ನೊಂದ ಮನಗಳಿಗೆ ವಿಶ್ರಾಂತಿಯ ಸವಿ ಉಣಿಸುವ ರಮಣೀಯ ತಾಣ ಈ ಕೊಡಗು.

ಕೊಡಗು ಸಮುದ್ರಮಟ್ಟದಿಂದ 1525 ಮೀಟರ್ ಎತ್ತರದಲ್ಲಿರುವ ಮಡಿಕೇರಿಯು ಕೊಡಗಿನ ಜಿಲ್ಲಾ ಕೇಂದ್ರ. ಭಾರತದ ಸ್ಕಾಟ್ಲೆಂಡ್ ಎಂಬ ಹೆಸರು ಗಳಿಸಿರುವ ಈ ನಾಡು, ಕೊಡಗಿನ ಕಿತ್ತಳೆ, ಕಾಫಿ, ಏಲಕ್ಕಿ, ಚಹಾ ತೋಟ, ಮಂಜು ಮುಸುಕಿದ ಕಾಡಿಗೆ ಪ್ರಸಿದ್ಧವಾಗಿದ್ದು, ಅತ್ಯದ್ಭುತ ಪ್ರವಾಸೀ ಧಾಮವಾಗಿ ಕಣ್ಮನ ಸೆಳೆಯುತ್ತಿದೆ. ಇಂತಹ ಪ್ರಕೃತಿ ರಮಣೀಯ, ಸಮೃದ್ಧ ಹಸಿರಿನ ನಾಡಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳು ಯಾತ್ರಿಕರ ಪ್ರಮುಖ ಆಕರ್ಷಣೆ.

ಅಬ್ಬಿ ಜಲಪಾತ
ಕರ್ನಾಟಕದ ವಿವಿಧ ಮೂಲೆಗಳಲ್ಲಿರುವ ಜಲಪಾತಗಳಲ್ಲಿ ಕೊಡಗಿನ ಅಬ್ಬಿ ಜಲಪಾತ ಕೂಡ ಒಂದು. ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿ ಈ ಜಲಪಾತವಿದ್ದು, ಏಲಕ್ಕಿ, ಕಾಫಿ ಕಾಡಿನೊಳಗೆ ಹಕ್ಕಿಗಳ ಕಲರವದ ಮಧ್ಯೆ ಭೋರ್ಗರೆಯುವ ಈ ಜಲಪಾತ ಪ್ರವಾಸಿಗರ ಮನಕ್ಕೆ ಮುದ ನೀಡುತ್ತದೆ. ಜಲಪಾತದ ವಿಶೇಷವೆಂದರೆ ಬೇಸಿಗೆಯಲ್ಲೂ ಈ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಕೇವಲ ಪ್ರವಾಸಿಗರಿಗೆ ಮಾತ್ರವಲ್ಲದೇ ಚಿತ್ರರಂಗಕ್ಕೂ ಅಬ್ಬಿ ಜಲಪಾತ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಇಲ್ಲಿ ಸಾಕಷ್ಟು ಚಿತ್ರೀಕರಣಗಳು ನಡೆದಿವೆ.

ರಾಜರ ಆಸನ (ರಾಜಾ ಸೀಟ್)
ಕೊಡಗಿನ ಪ್ರಮುಖ ಆಕರ್ಷಕ ಪ್ರದೇಶಗಳಲ್ಲಿ ರಾಜಾ ಸೀಟ್  ಕೂಡ ಒಂದು. ಇತಿಹಾಸದ ಕಥೆಗಳ ಪ್ರಕಾರ ಈ ಪ್ರದೇಶದಲ್ಲಿ ರಾಜರು ಸಂಜೆ ಕಳೆಯುತ್ತಿದ್ದರಂತೆ. ಇದೇ ಕಾರಣಕ್ಕೆ ಈ ಪ್ರದೇಶವನ್ನು ರಾಜರ ಆಸನ ಅಥವಾ ರಾಜಾಸ್ ಸೀಟ್ ಎಂದು ಕರೆಯುತ್ತಾರೆ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿಂದ ಸೂರ್ಯಾಸ್ತ ಬಹಳ ಸುಂದರವಾಗಿ ಕಾಣುತ್ತದೆ. ಸೂರ್ಯ ಮುಳುಗುವಾಗ ಮೊದಲು ಬಂಗಾರದ ಬಣ್ಣಕ್ಕೆ ತಿರುಗಿ ಬಳಿಕೆ ಕೆಂಬಣ್ಣಕ್ಕೆ ತಿರುಗಿ ಮರೆಯಾಗುತ್ತಾನೆ. ಈ ಅಭೂತಪೂರ್ವ ದೃಶ್ಯ ವೀಕ್ಷಣೆಗೆ ಪ್ರತಿನಿತ್ಯ ಇಲ್ಲಿಗೆ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.

ತಲಕಾವೇರಿ
ಕರ್ನಾಟಕದ ಜೀವನದಿ ಮತ್ತು ರಾಜಧಾನಿ ಬೆಂಗಳೂರು ನಗರದ ಜನತೆಯ ದಾಹ ತಣಿಸುತ್ತಿರುವ ಕಾವೇರಿ ನದಿಯ ಉಗಮ ಸ್ಥಾನ ಈ ತಲಕಾವೇರಿ. ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಅತ್ಯಂತ ಪವಿತ್ರ ಸಪ್ತನದಿಗಳಲ್ಲಿ ಕಾವೇರಿ ಕೂಡ ಒಂದು. ತಲಕಾವೇರಿಯು ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಸಮುದ್ರಮಟ್ಟದಿಂದ ಸುಮಾರು 4500 ಅಡಿ ಎತ್ತರದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿರುವ ಪುಟ್ಟ ಒರತೆಯಲ್ಲಿ ಕಾವೇರಿ ಹುಟ್ಟುತ್ತಾಳೆ. ನಂತರ ಪುನಃ ಭೂಗತವಾಗಿ ಹರಿಯುವ ಕಾವೇರಿ ಸ್ವಲ್ಪದೂರದಲ್ಲಿ ಹೊರಗೆ ಗೋಚರಿಸುತ್ತಾಳೆ. ಕಾವೇರಿಯು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸುಮಾರು 800 ಕಿ.ಮೀ. ದೂರ ಕ್ರಮಿಸಿ, ತಮಿಳುನಾಡಿನ ಪೂಂಪುಹಾರ್ ಎಂಬಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ತಲಕಾವೇರಿಯಲ್ಲಿ ಒಂದು ಪುಟ್ಟ ಗುಡಿಯಿದ್ದು, ಎದುರಿನ ದೊಡ್ಡ ಕೊಳದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡುತ್ತಾರೆ. ಇಲ್ಲಿ ಪುರಾತನ, ಅಪರೂಪದ ಶಿವಲಿಂಗವಿರುವ ಶಿವ ದೇವಸ್ಥಾನ ಮತ್ತು ಗಣಪತಿ ದೇವಸ್ಥಾನಗಳಿವೆ. ಸಮೀಪದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವವರು ಅಗಸ್ತ್ಯ ಮುನಿಗೆ ದರ್ಶನ ನೀಡಿದರೆನ್ನಲಾದ ಪವಿತ್ರ ಅಶ್ವತ್ಥವೃಕ್ಷವಿದೆ. ಇಲ್ಲಿ ತುಲಾ ಸಂಕ್ರಮಣವನ್ನು ಕಾವೇರಿ ಸಂಕ್ರಮಣವಾಗಿ ಆಚರಿಸಲಾಗುತ್ತಿದ್ದು, ಆ ದಿನ ಪಾರ್ವತಿ ದೇವಿಯು ಪವಿತ್ರ ಕುಂಡಿಕೆಯಲ್ಲಿ ತೀರ್ಥೋದ್ಭವದ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬುದು ನಂಬಿಕೆ.

ಬ್ರಹ್ಮಗಿರಿ ಶಿಖರ
ತಲಕಾವೇರಿಯ ಸಮೀಪದಲ್ಲೇ ಬ್ರಹ್ಮಗಿರಿ ಶಿಖರವಿದ್ದು, ಸಪ್ತಋಷಿಗಳು ಇಲ್ಲಿ ವಿಶೇಷ ಯಜ್ಞ ಮಾಡಿದರೆಂಬ ಕಥನವಿದೆ.

ಮಡಿಕೇರಿ ಕೋಟೆ
ಮಡಿಕೇರಿಯ ಮಧ್ಯಭಾಗದಲ್ಲಿ 19ನೇ ಶತಮಾನದ ಒಂದು ಕೋಟೆಯಿದ್ದು, ಕೋಟೆಯಲ್ಲಿ ಒಂದು ಮಂದಿರ ಮತ್ತು ಕಾರಾಗೃಹವಿದೆ. ಕರ್ನಾಟಕ ಪ್ರವಾಸೋಧ್ಯಮ ಇಲಾಖೆ ಇಲ್ಲಿ ಸಣ್ಣ ಮ್ಯೂಸಿಯಂ ನಿರ್ಮಿಸಿದ್ದು, ಈಗ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾರ್ಯಾಚರಿಸುತ್ತಿದೆ. 1814ರಲ್ಲಿ ಲಿಂಗರಾಜೇಂದ್ರ ಒಡೆಯರ್ ಎಂಬುವವರು ಈ ಕೋಟೆಯನ್ನು ಕಟ್ಟಿಸಿದರು. ಈ ಕೋಟೆಯ ಮೇಲ್ಭಾಗದಿಂದ ನೋಡಿದರೆ ಮಡಿಕೇರಿ ಸೌಂದರ್ಯ ಗೋಚರವಾಗುತ್ತದೆ.

ಭಾಗಮಂಡಲ
ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಎಂಬ ಮೂರು ನದಿಗಳ ಸಂಗಮ ಕ್ಷೇತ್ರವಾದ ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಕೇರಳೀಯ ಶೈಲಿಯ ಆಕರ್ಷಕ ದೇವಸ್ಥಾನವಿದೆ. ಇದು ವಿರಾಜಪೇಟೆಯಿಂದ ಸುಮಾರು 50 ಕಿ.ಮೀ. ಹಾಗೂ ಮಡಿಕೇರಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಕುಶಾಲನಗರ ಸಮೀಪ ಕಾವೇರಿ ನದಿಗೆ ಕಟ್ಟಲಾದ ಹಾರಂಗಿ ಜಲಾಶಯವು ಮತ್ತೊಂದು ಪ್ರವಾಸಿ ಕೇಂದ್ರ.

ದುಬಾರೆ ಆನೆ ತರಬೇತಿ ಕೇಂದ್ರ
ಸಿದ್ದಾಪುರ-ಕುಶಾಲನಗರ ರಸ್ತೆಯಲ್ಲಿ ಕಾವೇರಿ ನದಿ ತಟದಲ್ಲಿ ಅರಣ್ಯ ಇಲಾಖೆಗೆ ಸೇರಿದ ಆನೆಗಳ ತರಬೇತಿ ಕೇಂದ್ರವಿದ್ದು, ಇದನ್ನು ದುಬಾರೆ ಆನೆ ತರಬೇತಿ ಕೇಂದ್ರ ಎಂದು ಕರೆಯುತ್ತಾರೆ. ಇಲ್ಲಿ ಸಾಕಷ್ಟು ಪಳಗಿಸಿದ ಆನೆಗಳಿದ್ದು, ಕಾಡಿನಿಂದ ನಾಡಿಗೆ ಬಂದು ರಗಳೆ ಮಾಡುವ ಆನೆಗಳನ್ನು ಇಲ್ಲಿಗೆ ಕರೆತಂದು ಪಳಗಿಸಲಾಗಿಸುತ್ತದೆ. ಪ್ರವಾಸೋಧ್ಯಮ ನಿಟ್ಟಿನಿಂದ ಇಲ್ಲಿ ಮಾವುತರ ಸಹಾಯದಿಂದ ಆನೆ ಸವಾರಿಗೂ ಕೂಡ ಸರ್ಕಾರ ಅನುಮತಿ ನೀಡಿದೆ. ಬೋಟಿಂಗ್ ಮತ್ತು ರ್ಯಾಫ್ಟಿಂಗ್ ಇಲ್ಲಿನ ವಿಶೇಷ. ಸಂಜೆ ವೇಳೆ ಆನೆಗಳು ಸ್ನಾನಕ್ಕೆ ಬರುತ್ತವೆ, ಅವುಗಳಿಗೆ ರಾಗಿ ಮತ್ತು ಬೆಲ್ಲದ ದೊಡ್ಡ ದೊಡ್ಡ ಉಂಡೆಗಳನ್ನು ಉಣಬಡಿಸಲಾಗುತ್ತದೆ.

ತಲುಪುವುದು ಹೇಗೆ?
ಕೊಡಗಿಗೆ ರಾಜ್ಯದ ಎಲ್ಲ ಪ್ರಮುಖ ಜಿಲ್ಲೆಗಳಿಂದ ಬಸ್ ವ್ಯವಸ್ಥೆ ಇದ್ದು, ಆದರೆ ಇಲ್ಲಿಗೆ ನೇರ ರೈಲು ಮಾರ್ಗ ಇಲ್ಲ. ಇನ್ನು ಸ್ವಂತ ವಾಹನದಲ್ಲಿ ಬರಲು ಇಚ್ಛಿಸುವವರು ಮೈಸೂರು-ಮಂಗಳೂರು ಹೆದ್ದಾರಿಯ ಮೂಲಕವಾಗಿ ಕೊಡಗಿಗೆ ಆಗಮಿಸಬಹುದು.

ಏನೇನು ಕೊಳ್ಳಬಹುದು?
ಸೀಸನ್ ಅವಧಿಯಲ್ಲಿ ಕಿತ್ತಳೆ, ಕಾಫಿ, ಜೇನು, ಏಲಕ್ಕಿ, ಕಾಳುಮೆಣಸು ಇಲ್ಲಿ ಪ್ರಸಿದ್ಧ.

ಪ್ರವಾಸಕ್ಕೆ ಯಾವ ಸಮಯ ಸೂಕ್ತ
ಇಲ್ಲಿ ಸಾಮಾನ್ಯವಾಗಿ ವರ್ಷಪೂರ್ತಿ ಒಳ್ಳೆಯ ಹವಾಮಾನ ಇರುತ್ತದೆ. ಜೂನ್ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಮುಂಗಾರು ಮಳೆಯಿರುತ್ತದೆ. ಹೀಗಾಗಿ ಈ ಅವಧಿಯಲ್ಲಿ ಕೊಡಗಿನ ಸಂಪೂರ್ಣ ಸೌಂದರ್ಯವನ್ನು ಸವಿಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com