ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು

ಬಿಪೋರ್ಜಾಯ್ ಚಂಡಮಾರುತದ ಪರಿಣಾಮ ತಡವಾಗಿ ಪ್ರವೇಶ ಮಾಡಿರುವ ಮುಂಗಾರು ನಿಧಾನವಾಗಿ ತನ್ನ ಪರಿಣಾಮ ತೋರ ತೊಡಗಿದೆ. ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇಂತಿವೆ.
ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣ
ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣ

ಬೆಂಗಳೂರು: ಬಿಪೋರ್ಜಾಯ್ ಚಂಡಮಾರುತದ ಪರಿಣಾಮ ತಡವಾಗಿ ಪ್ರವೇಶ ಮಾಡಿರುವ ಮುಂಗಾರು ನಿಧಾನವಾಗಿ ತನ್ನ ಪರಿಣಾಮ ತೋರ ತೊಡಗಿದೆ. ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇಂತಿವೆ.

ಮಳೆಗಾಲದಲ್ಲಿ ನಾವು ನಡೆಯುವಾಗ, ನಾವು ಪ್ರಯಾಣಿಸುವಾಗ ಮತ್ತು ನಾವು ಚಾಲನೆ ಮಾಡುವಾಗ ಪ್ರತಿಯೊಂದು ಸಣ್ಣ ವಿಷಯಕ್ಕೂ ವಿಶೇಷ ಗಮನ ನೀಡಬೇಕಾಗುತ್ತದೆ. ಪ್ರಮುಖವಾಗಿ ಮಳೆಯು ನಮ್ಮ ರಸ್ತೆ ಪ್ರಯಾಣಗಳನ್ನು ಅತ್ಯಂತ ದುರ್ಬಲಗೊಳಿಸುವುದರಿಂದ ನೀರು ನಿಲ್ಲುವುದು, ರಸ್ತೆಗುಂಡಿ, ರಸ್ತೆ ಹೊಂಡಗಳು, ಗೋಚರತೆಯ ಕೊರತೆ, ಜಾರು ಮೇಲ್ಮೈನಂತಹ ಅಪಾಯಗಳು ಪ್ರತಿಯೊಂದು ಮೂಲೆಯಲ್ಲಿಯೂ ಅಡಗಿ ಕುಳಿತಿರುತ್ತದೆ. ಇದರೊಂದಿಗೆ ಬೇಜವಾಬ್ದಾರಿ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಈ ಮಾನ್ಸೂನ್ ನಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳನ್ನು ಇಲ್ಲಿ ವಿವರಿಸಲಾಗಿದೆ.

ಟೈರ್


ಮಾನ್ಸೂನ್ ಡ್ರೈವಿಂಗ್‌ನಲ್ಲಿ ಟೈರ್‌ಗಳ ಸ್ಥಿತಿ ಬಹಳ ಮುಖ್ಯ. ಅನೇಕ 'ಸಾಂದರ್ಭಿಕ ಚಾಲಕರು' ಅವುಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಇಂತಹ ಲಘು ವರ್ತನೆಗಳೇ ಮಳೆಯ ದಿನದಲ್ಲಿ ಮಾರಕವಾಗಬಹುದು. ಟೈರ್ ಟ್ರೆಡ್‌ಗಳು (ಟೈರ್ ಮೇಲ್ಮೈಯಲ್ಲಿರುವ ಚಡಿಗಳು) ಹಿಡಿತವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಟ್ರೆಡ್‌ಗಳು ನೀರನ್ನು ಚದುರಿಸಲು ಮತ್ತು ರಬ್ಬರ್ ಮತ್ತು ರಸ್ತೆಯ ನಡುವೆ ಸೂಕ್ತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಚಾನಲ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಟ್ರೆಡ್‌ಗಳು ಸವೆದಿರುವ ಟೈರ್‌ಗಳು ಅಥವಾ ಬೋಳು ಟೈರ್‌ಗಳು ನೀರನ್ನು ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ ಮತ್ತು ಅಕ್ವಾಪ್ಲೇನಿಂಗ್‌ (ನೀರಿನ ಮೇಲ್ಮೈ ಮೇಲೆ ಜಾರುವಿಕೆ)ಗೆ ಗುರಿಯಾಗುತ್ತವೆ. ಆದ್ದರಿಂದ, ಟ್ರೆಡ್ ಆಳ ಕನಿಷ್ಠ 2 ಮಿಮೀ ಎಂದು ಖಚಿತಪಡಿಸಿಕೊಳ್ಳಿ. ಹೆಚ್ಚಿನ ಟೈರ್‌ಗಳು ಟ್ರೆಡ್ ವೇರ್ ಸೂಚಕಗಳನ್ನು ಹೊಂದಿರುತ್ತವೆ - ಈ ಟ್ರೆಡ್ ಗಳಲ್ಲಿ 1.5 ರಿಂದ 2 ಮಿಮೀ ಎತ್ತರವಿದ್ದು ಸವೆದು ಹೋಗಿದ್ದರೆ ಟೈರ್ ಅನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥ. ಇಂತಹ ಸಮಯದಲ್ಲಿ ನಿಮ್ಮ ಪ್ರಯಾಣಕ್ಕೂ ಮುನ್ನ ನಿಮ್ಮ ಗಾಡಿಯ ಟೈರ್ ಗಳನ್ನು ಬದಲಿಸುವುದು ಸೂಕ್ತ.

ಜಲಾವೃತಗೊಂಡ ರಸ್ತೆಗಳು


ಮಳೆಯು ಈಗ ತುಂಬಾ ಅನಿರೀಕ್ಷಿತವಾಗಿದೆ ಮತ್ತು ನೀವು ನೀರಿನಿಂದ ತುಂಬಿರುವ ರಸ್ತೆಯ ಮೂಲಕ ಪ್ರಯಾಣಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಆದರೆ ನೀವು ಆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಮುಂದೆ ಇರುವ ವಾಹನಗಳನ್ನು ಕಾದು ನೋಡುವ ಮೂಲಕ ನೀರಿನ ಆಳವನ್ನು ನಿರ್ಣಯಿಸುವುದು ಉತ್ತಮ. ಬಳಿಕ ಸುರಕ್ಷಿತವೆಂದು ತೋರಿದರೆ ಮಾತ್ರ ಆ ನೀರು ತುಂಬಿರುವ ರಸ್ತೆಯಲ್ಲಿ ಪ್ರಯಾಣ ಮುಂದುವರೆಸಿ. ನೀವು ಚಲಿಸಿದರೆ, ಕಡಿಮೆ ಗೇರ್‌ ನಲ್ಲೇ ವಾಹನ ಚಲಾಯಿಸಿ. ನೀರು ತುಂಬಿರುವ ಜಾಗದಲ್ಲಿ ವಾಹನ ಮೊದಲ ಗೇರ್ ನಲ್ಲೇ ನಿಧಾನವಾಗಿ ಚಲಿಸುವುದು ಉತ್ತಮ. ಇದರಿಂದ  ಎಂಜಿನ್ ಚಲನೆಯ RPM ನಿಧಾನಕ್ಕೆ ಚಲಿಸುವುದರಿಂದ ಇದು ಎಂಜಿನ್ ಒಳಗೆ ನೀರು ಪ್ರವೇಶಿಸುವುದನ್ನು ತಡೆಯುತ್ತದೆ.

ವೈಪರ್

ಬಹುತೇಕ ಕಾರು ಮಾಲೀಕರು ಕಾರಿನ ಈ ವೈಪರ್ ಗಳ ನಿರ್ವಹಣೆ ಕುರಿತು ನಿರ್ಲಕ್ಷ್ಯ ವಹಿಸುವುದೇ ಹೆಚ್ಚು... ಮಳೆ ಬಂದು ನೀರು ಕಾರಿನ ಗ್ಲಾಸಿಗೆ ಬಿದ್ದು ರಸ್ತೆ ಕಾಣದಾದಾಗ ಮಾತ್ರ ವೈಪರ್ ಗಳನ್ನು ಬಳಸುತ್ತೇವೆ. ಅಲ್ಲಿಯವರೆಗೂ ವೈಪರ್ ಗಳು ಹೇಗಿವೆ ಎಂಬುದರ ಕುರಿತು ಕನಿಷ್ಠ ಗಮನ ಕೂಡ ಹರಿಸುವುದಿಲ್ಲ. ಆದರೆ ಮಳೆಗಾಲದಲ್ಲಿ ಈ ವೈಪರ್ ಗಳು ನಿರ್ಣಾಯಕವಾಗಿರುತ್ತವೆ. ಹೀಗಾಗಿ ನಿಮ್ಮ ವೈಪರ್ ಬ್ಲೇಡ್‌ಗಳು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಹಾದು ಹೋಗುವ ವಾಹನಗಳಿಂದ ಮಣ್ಣಿನ ಸ್ಪ್ಲಾಶ್‌ಗಳು ಅಥವಾ ಧೂಳಿನ ಕಣಗಳು ಬಂದು ವೈಪರ್ ಗಳ ಮೇಲೆ ಕುಳಿತಿರುತ್ತವೆ. ಇಂತಹ ದೂಳನ್ನು ಸ್ಪ್ರೇಗಳನ್ನು ಬಳಸಿ ಸ್ವಚ್ಛಗೊಳಿಸಿ ಅಥವಾ ವೈಪರ್ ವಾಷರ್ ದ್ರವವನ್ನು ಬಳಸಿ ಸ್ವಚ್ಠಗೊಳಿಸುವುದು ಉತ್ತಮ. 

ಬ್ರೇಕ್‌

ಮಾನ್ಸೂನ್ ಸಮಯದಲ್ಲಿ ಗಾಡಿಗಳ ಬ್ರೇಕ್ ಗಳ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳುವುದು ಅತ್ಯಂತ ಅನಿವಾರ್ಯ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾರಿನೊಳಗೂ ನೀರು ಪರೋಕ್ಷವಾಗಿ ಬರುತ್ತದೆ. ನಾವು ಕುಳಿತುಕೊಳ್ಳುವಾಗ ನಮ್ಮ ಕಾಲಿನ ಚಪ್ಪಲಿ ಅಥವಾ ಶೂಗಳು ತೇವವಾಗಿದ್ದರೆ ಅದು ಸಾಮಾನ್ಯವಾಗಿ ಕಾರಿನ ಬ್ರೇಕ್ ಮತ್ತು ಎಕ್ಸಲೇಟರ್, ಕ್ಲಚ್ ಗಳಿಗೂ ಅಂಟುತ್ತದೆ. ಭಾರೀ ಮಳೆಯ ಸಮಯದಲ್ಲಿ ಅಥವಾ ದೊಡ್ಡ ಕೊಚ್ಚೆಗುಂಡಿಗಳ ಮೂಲಕ ಚಾಲನೆ ಮಾಡುವಾಗ, ಇವುಗಳ ಮೇಲಿನ ನೀರು ಒಣಗಲು ಅವಕಾಶ ನೀಡಿ. ಪೆಡಲ್ಗಳನ್ನು ಒರೆಸುವ ಮೂಲಕ ಬ್ರೇಕ್ ಡಿಸ್ಕ್ಗಳನ್ನು ಒಣಗುವಂತೆ ನೋಡಿಕೊಳ್ಳಿ. ಇದರಿಂದ ಕಾರು ಚಾಲನೆ ವೇಳೆ ಜಾರುವಿಕೆ ಸಮಸ್ಯೆ ಉಂಟಾಗುವುದಿಲ್ಲ.

ವೇಗ ನಿಯಂತ್ರಣ

ತೇವಾಂಶ ಮೇಲ್ಮೈಗಳಲ್ಲಿ ಬ್ರೇಕಿಂಗ್ ಅಂತರವು ಹೆಚ್ಚಾಗುತ್ತದೆ. ಆದ್ದರಿಂದ ಮುಂಭಾಗದಲ್ಲಿರುವ ವಾಹನದಿಂದ ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ವೇಗವನ್ನು ನಿಯಂತ್ರಿಸುವುದು ಉತ್ತಮ. ಇದು ಬ್ರೇಕ್ ಹಾಕಲು ಮತ್ತು ಪ್ರತಿಕ್ರಿಯಿಸಲು ನಿಮಗೆ ಸಾಕಷ್ಟು ಸ್ಥಳಾವಕಾಶ ಮತ್ತು ಸಮಯಾವಕಾಶವನ್ನು ನೀಡುತ್ತದೆ. ಮುಂದೆ ರಸ್ತೆಯಲ್ಲಿನ ಗುಂಡಿಗಳು, ಅವಶೇಷಗಳು, ಮಣ್ಣು ಮತ್ತು ನೀರಿನ ಉತ್ತಮ ನೋಟವನ್ನು ಇದು ನಿಮಗೆ ಒದಗಿಸುತ್ತದೆ. ಮಳೆಯ ವಾತಾವರಣದಲ್ಲಿ ಚಾಲನೆ ಮಾಡುವಾಗ, ನಾವು ಆಕ್ವಾಪ್ಲೇನಿಂಗ್ ಅಥವಾ ಹೈಡ್ರೋಪ್ಲೇನಿಂಗ್ ಸಮಸ್ಯೆ (ಜಾರುವಿಕೆ)ಯನ್ನು ಎದುರಿಸುತ್ತೇವೆ. ಚಕ್ರ ಮತ್ತು ರಸ್ತೆಯ ನಡುವೆ ನೀರಿನ ಪದರವು ರೂಪುಗೊಳ್ಳುತ್ತದೆ. ಈ ಸ್ಥಿತಿಯು ತುಂಬಾ ಅಪಾಯಕಾರಿ. ಏಕೆಂದರೆ ವಾಹನವು ಬ್ರೇಕ್ ಮತ್ತು ಸ್ಟೀರಿಂಗ್ ಮೇಲೆ ನಮ್ಮ ನಿಯಂತ್ರಣವು ಹೋದಂತೆ ಬದಿಗೆ ಚಲಿಸಬಹುದು.

ಸ್ಟೀರಿಂಗ್ ಅನ್ನು ನೇರವಾಗಿ ಹಿಡಿದುಕೊಂಡು ಎಕ್ಸಲೇಟರ್ ಮೇಲಿನ ನಿಮ್ಮ ಪಾದವನ್ನು ಕ್ರಮೇಣ ಸರಾಗಗೊಳಿಸಿ. ನೀವು ಗಾಡಿಯನ್ನು ನಿಧಾನಗೊಳಿಸಿದಾಗ, ನಿಮ್ಮ ಚಕ್ರಗಳು ಗ್ರಿಪ್ ಪಡೆದುಕೊಳ್ಳುವುದನ್ನು ನೀವು ಗಮನಿಸಬಹುದು ಮತ್ತು ಆಗ ನೀವು ಗಾಡಿಯ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯುತ್ತೀರಿ. ಸ್ಟೀರಿಂಗ್ ನ ನಿಧಾನ ಮತ್ತು ಸ್ಥಿರ ಚಲನೆಯನ್ನು ಮಾಡಿ ಮತ್ತು ನಿಮ್ಮ ಬ್ರೇಕ್‌ಗಳನ್ನು ನಿಧಾನವಾಗಿ ಬಳಸಿ. ನಿಮ್ಮ ಕಾರು ಕ್ರೂಸ್ ನಿಯಂತ್ರಣ (ಬಾಹ್ಯ ಹಸ್ತಕ್ಷೇಪವಿಲ್ಲದೆ ಚಾಲಕ ನಿಗದಿಪಡಿಸಿದ ವೇಗವನ್ನು ನಿಖರವಾಗಿ ನಿರ್ವಹಿಸುವ ವ್ಯವಸ್ಥೆ)ವನ್ನು ಹೊಂದಿದ್ದರೆ, ತೇವಾಂಶದ ಸ್ಥಿತಿಯಲ್ಲಿ ಚಾಲನೆ ಮಾಡುವಾಗ ಇದನ್ನು ಸ್ವಿಚ್ ಆಫ್ ಮಾಡಿ.

ಇಂಧನ, ಆಹಾರ ಮತ್ತು ಸುರಕ್ಷತಾ ಕಿಟ್

ಮಳೆಗಾಲದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಇದರರ್ಥ, ಸಾಕಷ್ಟು ಇಂಧನ ಇರಬೇಕು. ಸ್ವಲ್ಪ ನೀರು ಮತ್ತು ಆಹಾರವನ್ನು ಮುಂಜಾಗ್ರತಾ ಕ್ರಮವಾಗಿ ಇಟ್ಟುಕೊಂಡಿರಿ.. ಪ್ರಮುಖವಾಗಿ ಟೈರ್ ಪಂಕ್ಚರ್ ಕಿಟ್, ಟವೆಲ್, ಟಾರ್ಚ್ ಇತ್ಯಾದಿಗಳು ಸಹ ಸೂಕ್ತ ಸಮಯದಲ್ಲಿ ಕೆಲಸಕ್ಕೆ ಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com