
ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರವಾಸಿಗರು ಕೊಡಗು, ಚಿಕ್ಕಮಗಳೂರು ಅಥವಾ ಊಟಿಯಂತಹ ಗಿರಿಧಾಮಗಳತ್ತ ಮುಖ ಮಾಡುವುದು ಸಾಮಾನ್ಯ. ಆದರೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ದಿನಗಳಲ್ಲಿ ಗಿರಿಧಾಮಗಳಲ್ಲಿ ವಿಪರೀತ ಜನದಟ್ಟಣೆ, ಟ್ರಾಫಿಕ್ ಜಾಮ್ ಮತ್ತು ಭೂಕುಸಿತದ ಭೀತಿ ಹೆಚ್ಚಾಗುತ್ತಿದೆ.
ಹೀಗಾಗಿ ಈ ಬಾರಿಯ ಮಳೆಗಾಲದಲ್ಲಿ ನಿಮ್ಮ ಪ್ರವಾಸದ ಅನುಭವವನ್ನು ವಿಭಿನ್ನವಾಗಿಸಲು ಮತ್ತು ಪ್ರಶಾಂತತೆಯನ್ನು ಸವಿಯಲು ಗಿರಿಧಾಮಗಳ ಬದಲಿಗೆ ಭಾರತದ ಭವ್ಯ ಐತಿಹಾಸಿಕ ಪರಂಪರೆಯ ತಾಣಗಳಿಗೆ (Heritage Towns) ಭೇಟಿ ನೀಡುವುದಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ.
ಮಳೆಯ ಹನಿಗಳು ಬಿದ್ದಾಗ ಪ್ರಾಚೀನ ಕಲ್ಲಿನ ಸ್ಮಾರಕಗಳು ಗಾಢವಾದ ಬಣ್ಣಕ್ಕೆ ತಿರುಗುತ್ತವೆ, ಐತಿಹಾಸಿಕ ಕಲ್ಯಾಣಿಗಳು ಮಳೆ ನೀರಿನಿಂದ ತುಂಬಿ ತುಳುಕುತ್ತವೆ ಮತ್ತು ಮಂಜಿನ ಮುಸುಕಿನಲ್ಲಿ ಕೋಟೆಗಳು ಹೊಸ ಕಳೆಯನ್ನು ಪಡೆದುಕೊಳ್ಳುತ್ತವೆ.
ಇತಿಹಾಸ, ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಸ್ಥಳೀಯ ಪರಂಪರೆಯನ್ನು ಒಂದೇ ಪ್ರವಾಸದಲ್ಲಿ ಅನುಭವಿಸಲು ಬಯಸುವವರಿಗೆ ಈ ತಾಣಗಳು ಮಳೆಗಾಲದಲ್ಲಿ ಅತ್ಯುತ್ತಮ ಆಯ್ಕೆಯಾಗಿವೆ. ಈ ಮಳೆಗಾಲದಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಮುಖ ಐತಿಹಾಸಿಕ ತಾಣಗಳ ವಿವರ ಇಲ್ಲಿದೆ..
ನಮ್ಮ ಹೆಮ್ಮೆಯ ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಮಳೆಗಾಲದಲ್ಲಿ ಸ್ವರ್ಗದಂತೆ ಕಂಗೊಳಿಸುತ್ತದೆ. ಇಲ್ಲಿನ ಕೆಂಪು ಮರಳುಗಲ್ಲಿನ (Sandstone) ಗುಹಾಂತರ ದೇವಾಲಯಗಳು ಮಳೆಗೆ ಗಾಢ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಇವೆಲ್ಲಕ್ಕಿಂತ ಮಿಗಿಲಾಗಿ, ಬಾದಾಮಿಯ ಅಗಸ್ತ್ಯ ತೀರ್ಥ ಕೆರೆ ಸಂಪೂರ್ಣವಾಗಿ ತುಂಬಿದಾಗ, ಅದರ ಹಿನ್ನೆಲೆಯಲ್ಲಿರುವ ಭೂತನಾಥ ದೇವಾಲಯದ ದೃಶ್ಯ ಕಣ್ಣಿಗೆ ಹಬ್ಬವನ್ನು ನೀಡುತ್ತದೆ.
ಮಳೆಯ ಸಮಯದಲ್ಲಿ ಇಲ್ಲಿನ ಸುತ್ತಮುತ್ತಲಿನ ಬಂಡೆಗಳಿಂದ ಸಣ್ಣ ಸಣ್ಣ ಜಲಪಾತಗಳು ಧುಮ್ಮಿಕ್ಕುತ್ತವೆ. ಹತ್ತಿರದಲ್ಲೇ ಇರುವ ಐಹೊಳೆ ಮತ್ತು ಯುನೆಸ್ಕೋ ಪರಂಪರೆಯ ತಾಣವಾದ ಪಟ್ಟದಕಲ್ಲಿನ ಶಿಲ್ಪಕಲೆಗಳು ಹಸಿರು ಹುಲ್ಲುಹಾಸಿನ ನಡುವೆ ಅದ್ಭುತವಾಗಿ ಕಾಣುತ್ತವೆ.
ಇತಿಹಾಸದಲ್ಲಿ 'ಸಿಟಿ ಆಫ್ ಜಾಯ್' (ಆನಂದದ ನಗರಿ) ಎಂದೇ ಪ್ರಸಿದ್ಧಿಯಾಗಿದ್ದ ಮಾಂಡು, ಸಮುದ್ರ ಮಟ್ಟದಿಂದ ಎತ್ತರದ ಪ್ರಸ್ಥಭೂಮಿಯ ಮೇಲಿರುವ ಒಂದು ಸುಂದರ ಕೋಟೆ ನಗರಿ. ಮಳೆಗಾಲದಲ್ಲಿ ಈ ಇಡೀ ಪ್ರದೇಶವು ದಟ್ಟವಾದ ಮಂಜಿನಿಂದ ಆವೃತವಾಗಿರುತ್ತದೆ.
ರಾಜ ಬಾಜ್ ಬಹದ್ದೂರ್ ಮತ್ತು ರಾಣಿ ರೂಪಮತಿಯ ಪ್ರೇಮ ಕಥೆಗೆ ಸಾಕ್ಷಿಯಾದ ಇಲ್ಲಿನ ಅರಮನೆಗಳು, ಜಹಾಜ್ ಮಹಲ್ (ಹಡಗಿನ ಆಕಾರದ ಅರಮನೆ) ಮತ್ತು ಪ್ರಾಚೀನ ಕೆರೆಗಳು ಮಳೆಗಾಲದಲ್ಲಿ ರೋಮ್ಯಾಂಟಿಕ್ ರೂಪವನ್ನು ಪಡೆದುಕೊಳ್ಳುತ್ತವೆ.
ರಾಜಸ್ಥಾನ ಎಂದರೆ ಕೇವಲ ಏರು ಬಿಸಿಲಿನ ಮರುಭೂಮಿ ಮಾತ್ರವಲ್ಲ. ಅರಾವಳಿ ಬೆಟ್ಟಗಳ ಕಣಿವೆಯಲ್ಲಿ ಅಡಗಿರುವ ಬುಂದಿ ಎಂಬ ಸಣ್ಣ ಪಟ್ಟಣ ಮಳೆಗಾಲದಲ್ಲಿ ಜೀವದಳೆದುಕೊಳ್ಳುತ್ತದೆ. ಬುಂದಿ ತನ್ನ ಐತಿಹಾಸಿಕ ಮತ್ತು ಸುಂದರವಾದ ಕಲ್ಯಾಣಿಗಳಿಗೆ (Stepwells/Baoris) ಹೆಸರುವಾಸಿ.
ಮಳೆಗಾಲದಲ್ಲಿ ಈ ಕಲ್ಯಾಣಿಗಳು ನೀರಿನಿಂದ ತುಂಬುತ್ತವೆ. ಇಲ್ಲಿನ ತಾರಾಗಢ್ ಕೋಟೆ ಮತ್ತು ಗಾರ್ ಅರಮನೆಯಲ್ಲಿರುವ ಸುಂದರವಾದ ಭಿತ್ತಿಚಿತ್ರಗಳು (Wall Paintings) ಮಳೆಯ ವಾತಾವರಣದಲ್ಲಿ ವೀಕ್ಷಿಸಲು ಅತ್ಯಂತ ಆಕರ್ಷಕವಾಗಿರುತ್ತವೆ.
ಬೆತ್ವಾ ನದಿಯ ದಂಡೆಯ ಮೇಲಿರುವ ಓರ್ಚಾ ಪಟ್ಟಣವು ಬುಂದೇಲ ರಾಜರ ಭವ್ಯ ಇತಿಹಾಸವನ್ನು ಸಾರುತ್ತದೆ. ಮಳೆಗಾಲದಲ್ಲಿ ಬೆತ್ವಾ ನದಿಯು ತುಂಬಿ ಹರಿಯುವಾಗ, ನದಿಯ ದಂಡೆಯ ಮೇಲಿರುವ ಎತ್ತರದ ಛತ್ರಿಗಳು (ರಾಜಮನೆತನದ ಸಮಾಧಿಗಳು), ಜಹಾಂಗೀರ್ ಮಹಲ್ ಮತ್ತು ರಾಮರಾಜ ದೇವಾಲಯಗಳು ಮೂಡಿ ಬರುವ ಮೋಡಗಳ ಹಿನ್ನೆಲೆಯಲ್ಲಿ ಗಂಭೀರವಾಗಿ ಮತ್ತು ರಾಜಾಪ್ರಭುತ್ವದ ವೈಭವವನ್ನು ನೆನಪಿಸುವಂತೆ ಕಾಣುತ್ತವೆ. ಸುತ್ತಲಿನ ಅರಣ್ಯ ಪ್ರದೇಶವು ಸಂಪೂರ್ಣವಾಗಿ ಹಸಿರಾಗುವುದರಿಂದ ಪ್ರಕೃತಿ ಮತ್ತು ಇತಿಹಾಸದ ಅಪರೂಪದ ಸಂಗಮ ಇಲ್ಲಿದೆ.
ಮಳೆಗಾಲದಲ್ಲಿ ಕಲೆ ಮತ್ತು ಪರಂಪರೆಯ ಸೊಬಗನ್ನು ಅನುಭವಿಸಲು ಬಿಷ್ಣುಪುರ ಅತ್ಯುತ್ತಮ ತಾಣವಾಗಿದೆ. ಕಲೆ ಮತ್ತು ಸಂಸ್ಕೃತಿಯನ್ನು ಇಷ್ಟಪಡುವವರಿಗೆ ಬಿಷ್ಣುಪುರ ಅತ್ಯುತ್ತಮ ಆಯ್ಕೆ. ಮಲ್ಲ ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣವು 17 ಮತ್ತು 18ನೇ ಶತಮಾನದ ವಿಶಿಷ್ಟ ಟೆರಾಕೋಟಾ (ಸುಟ್ಟಮಣ್ಣಿನ) ದೇವಾಲಯಗಳಿಗೆ ಜಗತ್ಪ್ರಸಿದ್ಧಿಯಾಗಿದೆ.
ಮಳೆಯ ನೀರು ಬಿದ್ದಾಗ ಇಲ್ಲಿನ ಮಣ್ಣಿನ ಇಟ್ಟಿಗೆಗಳು ಗಾಢವಾದ ಬಣ್ಣವನ್ನು ಪಡೆದುಕೊಳ್ಳುತ್ತವೆ, ಇದರಿಂದ ದೇವಾಲಯಗಳ ಗೋಡೆಗಳ ಮೇಲಿರುವ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಕೆತ್ತನೆಗಳು ಅತ್ಯಂತ ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಎದ್ದು ಕಾಣುತ್ತವೆ.
ಇದರ ಜೊತೆಗೆ ಬಲುಚಾರಿ ರೇಷ್ಮೆ ಸೀರೆಗಳ ನೇಯ್ಗೆ ಹಾಗೂ ಟೆರಾಕೋಟಾ ಕರಕುಶಲ ವಸ್ತುಗಳ ತಯಾರಿಕೆಯನ್ನು ಹತ್ತಿರದಿಂದ ನೋಡುವ ಅವಕಾಶವೂ ಪ್ರವಾಸಿಗರಿಗೆ ಸಿಗುತ್ತದೆ.
ನಿಮಗೆ ಸಮುದ್ರ ತೀರದ ಜೊತೆಗೆ ವಸಾಹತುಶಾಹಿ ಇತಿಹಾಸದ ಅನುಭವ ಬೇಕಿದ್ದರೆ ಪಾಂಡಿಚೇರಿಗೆ ಭೇಟಿ ನೀಡಬಹುದು. ಇಲ್ಲಿನ ಫ್ರೆಂಚ್ ಕ್ವಾರ್ಟರ್ಸ್‌ನಲ್ಲಿರುವ ಹಳದಿ ಮತ್ತು ಬಿಳಿ ಬಣ್ಣದ ಪ್ರಾಚೀನ ಕಟ್ಟಡಗಳು ಮಳೆಯಲ್ಲಿ ತೊಯ್ದಾಗ ಫ್ರಾನ್ಸ್ ದೇಶದ ಬೀದಿಗಳಲ್ಲಿ ನೆಡೆದಾಡಿದ ಅನುಭವ ನೀಡುತ್ತವೆ. ಮಳೆಗಾಲದ ತಂಗಾಳಿಯಲ್ಲಿ ಇಲ್ಲಿನ ಪ್ರಶಾಂತವಾದ ಕೆಫೆಗಳಲ್ಲಿ ಕುಳಿತು ಕಾಫಿ ಸವಿಯುವುದು ಮತ್ತು ರಾಕ್ ಬೀಚ್‌ನ ಪ್ರೊಮೆನೇಡ್ ರಸ್ತೆಯಲ್ಲಿ ಹೆಜ್ಜೆ ಹಾಕುವುದು ವಿಶಿಷ್ಟ ಅನುಭವ.
ಮಳೆಗಾಲದಲ್ಲಿ ವಿಭಿನ್ನ ರೀತಿಯ ಪಾರಂಪರಿಕ ಪ್ರವಾಸವನ್ನು ಬಯಸುವವರಿಗೆ ಚೆಟ್ಟಿನಾಡು ಅತ್ಯುತ್ತಮ ತಾಣವಾಗಿದೆ. ನಾಟುಕೊಟ್ಟೈ ಚೆಟ್ಟಿಯಾರ್ ಸಮುದಾಯ ನಿರ್ಮಿಸಿರುವ ಭವ್ಯ ಅರಮನೆಗಳು ಬರ್ಮಾ ತೇಗದ ಮರ, ಇಟಾಲಿಯನ್ ಮಾರ್ಬಲ್ ಮತ್ತು ಬೆಲ್ಜಿಯನ್ ಗಾಜಿನಂತಹ ಅಮೂಲ್ಯ ವಸ್ತುಗಳಿಂದ ನಿರ್ಮಾಣಗೊಂಡಿವೆ.
ಮಳೆಗಾಲದಲ್ಲಿ ಇಲ್ಲಿನ ಉಷ್ಣಾಂಶ ಕಡಿಮೆಯಾಗುವುದರಿಂದ ಈ ಪಾರಂಪರಿಕ ಗ್ರಾಮಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುವುದು ಹೆಚ್ಚು ಆರಾಮದಾಯಕವಾಗಿರುತ್ತದೆ. ಜೊತೆಗೆ ವಿಶ್ವಪ್ರಸಿದ್ಧ ಚೆಟ್ಟಿನಾಡು ಪಾಕಶೈಲಿಯ ಖಾರ ಮತ್ತು ಸುವಾಸನೆಯ ಭಕ್ಷ್ಯಗಳನ್ನು ಸವಿಯುವ ಅನುಭವವೂ ಮರೆಯಲಾಗದಂತಿರುತ್ತದೆ.
ಮಳೆಗಾಲದ ಪ್ರವಾಸ ಎಂದರೆ ಕೇವಲ ಹಿಲ್‌ಸ್ಟೇಷನ್‌ಗಳು ಅಥವಾ ಜಲಪಾತಗಳಷ್ಟೇ ಅಲ್ಲ. ಭಾರತದ ಈ ಐತಿಹಾಸಿಕ ನಗರಗಳು ಮಳೆಯ ಸ್ಪರ್ಶದಿಂದ ಇನ್ನಷ್ಟು ಜೀವಂತವಾಗಿ ಕಂಗೊಳಿಸುತ್ತವೆ. ಪ್ರಕೃತಿಯ ಸೊಬಗಿನ ಜೊತೆಗೆ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ವೈಭವವನ್ನು ಅನುಭವಿಸಲು ಬಯಸುವವರು ಈ ಮಳೆಗಾಲದಲ್ಲಿ ಮಾಂಡು, ಬಿಷ್ಣುಪುರ, ಬುಂದಿ ಮತ್ತು ಚೆಟ್ಟಿನಾಡನ್ನು ತಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.