ಅರಳುತಿರು ಜೀವದ Gayಳೆಯಾ...

ಇದೊಂದು ಡಿಫರೆಂಟ್ ಆಗಿರುವ ಲವ್ ಸ್ಟೋರಿ. ಇವರಿಬ್ಬರೂ ಪ್ರೀತಿಸಿದರು, ಮದುವೆಯೂ ಆದರು. ಅದರಲ್ಲೇನಿದೆ ವಿಶೇಷ ಎಂದು ನೀವು ಕೇಳ ಬಹುದು...
ಅಮಿತ್ -ಸಮೀರ್ (ಚಿತ್ರಕೃಪೆ: ಬಾಲಿವುಡ್‌ಶಾದೀಸ್ ಡಾಟ್ ಕಾಂ)
ಅಮಿತ್ -ಸಮೀರ್ (ಚಿತ್ರಕೃಪೆ: ಬಾಲಿವುಡ್‌ಶಾದೀಸ್ ಡಾಟ್ ಕಾಂ)

ಇದೊಂದು ಡಿಫರೆಂಟ್ ಆಗಿರುವ ಲವ್ ಸ್ಟೋರಿ. ಇವರಿಬ್ಬರೂ ಪ್ರೀತಿಸಿದರು, ಮದುವೆಯೂ ಆದರು. ಅದರಲ್ಲೇನಿದೆ ವಿಶೇಷ ಎಂದು ನೀವು ಕೇಳ ಬಹುದು. ವಿಶೇಷ ಉಂಟು ಮಾರಾಯ್ರೆ... ಇವರಿಬ್ಬರೂ ಯುವಕರು. ಈ ಇಬ್ಬರು ಯುವಕರು ಪರಸ್ಪರ ಪ್ರೀತಿಸಿ ಮದುವೆಯಾಗಿ ಈಗ ಜತೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಹುಬ್ಬೇರಿಸಬೇಡಿ...ಇದು ಸಲಿಂಗಕಾಮಿಗಳ ಪ್ರಣಯ ಕಥೆ, ಪರಿಣಯದ ಕಥೆಯೂ...

ಸಮೀರ್ ಸಮುದ್ರ ಮತ್ತು ಅಮಿತ್ ಗೋಖಲೆ ಎಂಬ ಈ ಯುವಕರೇ ಸಮಾಜದ ಕಟ್ಟುಪಾಡುಗಳನ್ನು ಮೀರಿ ಮದುವೆಯಾದ ಜೋಡಿಗಳು.

ಅವತ್ತೊಂದು ದಿನ ಅಮಿತ್ 'ಗೇಬಾಂಬೆ' ಎಂಬ ವೆಬ್ ಸೈಟ್ ನಲ್ಲಿ ತಾನು ಗೆಳೆಯನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಬರೆದುಕೊಂಡಿದ್ದ. ಇದನ್ನು ನೋಡಿದ ಸಮೀರ್ ಅಮಿತ್ ಗೆ ಸಂದೇಶ ಕಳುಹಿಸಿದ. ಅಲ್ಲಿಂದ ಇವರ ಗೆಳೆತನ ಆರಂಭವಾಯಿತು. ಆಮೇಲೆ ತಾವಿಬ್ಬರೂ ಪರಸ್ಪರ ತುಂಬಾ ಹಚ್ಚಿಕೊಂಡಿದ್ದೀವಿ. ಇನ್ನು ಬೇರೆಯಾಗಲು ಸಾಧ್ಯವಿಲ್ಲ ಎಂಬುದು ಗೊತ್ತಾಯಿತು. 5-6 ತಿಂಗಳಿನ ಗೆಳೆತನ ಪ್ರೀತಿಗೆ ಬದಲಾಗಿತ್ತು. ತಾವು ಗೆಳೆತನದಿಂದ ಇನ್ನೊಂದು ಹಂತಕ್ಕೆ ಹೋಗುತ್ತಿದ್ದೇವೆ ಎಂದು ಗೊತ್ತಾದಾಗ ಅದನ್ನು ಸ್ವೀಕರಿಸಲು ಇಬ್ಬರೂ ತಯಾರಾಗಿದ್ದರು.

ನಾವ್ಯಾವಾಗ ಪ್ರೀತಿಯಲ್ಲಿ ಬಿದ್ದೆವು ಎಂಬುದೇ ನಮಗೆ ಗೊತ್ತಾಗಲಿಲ್ಲ ಎನ್ನುತ್ತಾರೆ ಸಮೀರ್. ಅಮಿತ್ ನನ್ನನ್ನು ಹೊರಗಡೆ ಕರೆದುಕೊಂಡು ಹೋಗಿದ್ದರು. ಅದು ತುಂಬಾ ರೊಮ್ಯಾಂಟಿಕ್ ಆಗಿತ್ತು. ಆವಾಗ ಅಮಿತ್ ಕ್ಲಿವೆಲ್ಯಾಂಡ್‌ನಲ್ಲಿ ವಿದ್ಯಾರ್ಥಿಯಾಗಿದ್ದ. ಮೆಕ್ಸಿಕನ್ ರೆಸ್ಟೋರೆಂಟ್ ನಲ್ಲಿ ಡೇಟ್ ಫಿಕ್ಸ್ ಮಾಡಿದ್ದು, ಸಮೀರ್ ಗಾಗಿ ಕ್ಯೂಟ್ ಆಗಿರುವ ಇ ಇನ್ವಿಟೇಶನ್ ನ್ನು ಅಮಿತ್ ರೆಡಿ ಮಾಡಿದ್ದ. ಮಾತ್ರವಲ್ಲದೆ ತನ್ನ ಸಂಗಾತಿ ಸಮೀರ್ ಗಾಗಿ ಕಾರ್ಡ್ ಮತ್ತು ಹೂಗುಚ್ಛವನ್ನೂ ಅಮಿತ್ ತಂದಿದ್ದ. ಅವನ ಪ್ರೀತಿ ಮತ್ತು ವಾತ್ಸಲ್ಯ ನೋಡಿ ನಾನು ಫಿದಾ ಆಗಿ ಬಿಟ್ಟೆ ಎಂದು ತಮ್ಮ ಫಸ್ಟ್ ಡೇಟ್ ಬಗ್ಗೆ ಸಮೀರ್ ಹೇಳ್ತಾನೆ.


ಸಮೀರ್‌ನ್ನು ಪ್ರೀತಿಯಿಂದ ಲಾಡು ಎಂದು ಕರೆಯುವ ಅಮಿತ್‌ಗೆ ಸಮೀರ್ ಬಗ್ಗೆ ಹೇಳಲು ಸಾಕಷ್ಟಿವೆ.  ಆತನ ಮುದ್ದಾದ ನಗು, ಚೆಂದದ ಕಣ್ಣು ಮತ್ತು ತುಂಟಾಟಿಕೆ ನನಗೆ ಬಹಳ ಇಷ್ಟವಾಯ್ತ. ಆತ ನನ್ನ ಒಳ್ಳೆಯ ಗೆಳೆಯ ಮತ್ತು ಸಲಹೆಗಾರ. ಇನ್ನೊಬ್ಬರಿಗೆ ಸಹಾಯ ಮಾಡಲು ಆತ ಸದಾ ಮುಂದಿರುತ್ತಾನೆ.

ಸಮೀರ್ ಬಗ್ಗೆ ಅಮಿತ್ ಗೂ ಹೇಳಲು ಸಾಕಷ್ಟು ವಿಷಯಗಳಿವೆ. ಅವನೊಬ್ಬ ತುಂಬಾ ವಿನಯವಂತ ವ್ಯಕ್ತಿ ಮಾತ್ರವಲ್ಲದೆ ನನ್ನ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾನೆ. ಜೀವನೋತ್ಸಹ  ತುಂಬಿ ತುಳುಕುತ್ತಿರುವ ಅವನು ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಲು ನಾಚಿಕೊಳ್ಳುವುದಿಲ್ಲ.


ನಾವಿಬ್ಬರೂ ಜತೆಯಾಗಿ ವಾಸಿಸತೊಡಗಿದರೂ, ಮದುವೆಯಾಗುವುದು ಅಷ್ಟು ಸುಲಭದ ವಿಷಯವಾಗಿರಲಿಲ್ಲ. ಮನೆಯವರು ಈ ವಿಷಯ ತಿಳಿದಾಗ ಜರ್ಜರಿತರಾಗಿಬಿಟ್ಟರು. ಅವರ ಮನವೊಲಿಸಿ ಮದುವೆಯಾಗಬೇಕಾದರೆ 3-4 ವರ್ಷಗಳೇ ಬೇಕಾಯಿತು.

ನಮ್ಮ ಸಂಬಂಧ ಬಗ್ಗೆ ಹಾಗೂ ಮುಂದೇನಾಗುತ್ತದೆ ಎಂಬುದು ನಮಗೆ ಗೊತ್ತಿತ್ತು  ಭಾರತೀಯ ಕುಟುಂಬದಲ್ಲಿ ಸಲಿಂಗಿಗಳನ್ನು ಯಾವ ರೀತಿ ನೋಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿತ್ತು. ನಮ್ಮ ವಿಷಯ ಹೇಳಿದಾಗ, ಸಮೀರ್ ನ ಮನೆಯವರು ಮೊದಲಿಗೆ ಬೇಸರ ವ್ಯಕ್ತ ಪಡಿಸಿದರೂ ಆಮೇಲೆ ಎಲ್ಲವನ್ನೂ ಅರ್ಥ ಮಾಡಿಕೊಂಡರು. ಸಮೀರ್ ನ ಸಹೋದರಿ ಮತ್ತು ಆಕೆಯ ಗಂಡ ನಮ್ಮ ಬೆಂಬಲಕ್ಕೆ ನಿಂತರು. ಆದರೆ ನನ್ನ ಮನೆಯಲ್ಲಿ ಹಾಗಿರಲಿಲ್ಲ. ಅವರು ಅತ್ತು ಕರೆದು ಈ ಸಂಬಂಧದ ಬೇಡವೇ ಬೇಡ ಎಂದು ನಿರಾಕರಿಸಿದರು. ಅಲ್ಲಿ ಯಾರೊಬ್ಬರೂ ನನ್ನ ಪರವಾಗಿ ಮಾತಾಡುವವರಾಗಲೀ, ಬೆಂಬಲ ನೀಡುವವರಾಗಲೀ ಇರಲಿಲ್ಲ. ಆವಾಗ ಸಮೀರ್ ನನ್ನ ಮನೆಯವರಿಗೆ ವಿಷಯವನ್ನು ವಿವರಿಸಿದ. ಸಲಿಂಗಕಾಮವೆನ್ನುವುದು ತಪ್ಪೇನಲ್ಲ, ಅದೆಲ್ಲಾ ಸಾಮಾನ್ಯ ವಿಷಯಗಳೇ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ಮನಶಾಸ್ತ್ರಜ್ಞರ ಸಹಾಯವನ್ನೂ ನೀಡಿದ. ಹೀಗೆ ನಮ್ಮ ಮನೆಯವರು ನಮ್ಮ ಮದುವೆಗೆ ಒಪ್ಪಿಗೆ ನೀಡಲು 3-4 ತೆಗೆದುಕೊಂಡರು ಎನ್ನುತ್ತಾರೆ ಅಮಿತ್ .

ಏಪ್ರಿಲ್ 21, 2009 ಅಂದು ಸಮೀರ್ ನ ಹುಟ್ಟು ಹಬ್ಬ. ಅದೇ ದಿನ ಅಮಿತ್ ಸಮೀರ್ ನ್ನು ಮದುವೆ ಪ್ರೊಪೋಸ್ ಮಾಡಿಬಿಟ್ಟ. ಸಮೀರ್ ಹೂಂ ಅಂದ. ಮದುವೆ ತಯಾರಿಗೆ ಒಂದು ವರ್ಷ ತೆಗೆದುಕೊಂಡೆವು. ಕುಟುಂಬದ ಸದಸ್ಯರು ಮತ್ತು ಆಪ್ತರು ಸೇರಿ ಮಹಾರಾಷ್ಟ್ರದ ಸಂಪ್ರದಾಯ ಪ್ರಕಾರ ಸೆಪ್ಟೆಂಬರ್ 18, 2010ರಂದು ಇಂಡಿಯಾನಾ, ಕೊಲಂಬಸ್ ನಲ್ಲಿ ನಮ್ಮ ಮದುವೆ ಮಾಡಿದರು. ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾದದ್ದೂ ಇಲ್ಲಿಯೇ. ಆದ್ದರಿಂದ ಈ ಜಾಗ ನಮಗೆ ತುಂಬಾ ವಿಶೇಷವಾಗಿತ್ತು. ನಮ್ಮ ಮದುವೆಯಲ್ಲಿ ಕುಟುಂಬದ ಸದಸ್ಯರು, ಸಹೋದ್ಯೋಗಿಗಳು ಹಾಗು ಗೆಳೆಯರು ಸೇರಿದಂತೆ ಒಟ್ಟು 60-70 ಮಂದಿ ಭಾಗವಹಿಸಿದ್ದರು.

ನಮ್ಮಿಬ್ಬರ ಮದುವೆ...ಅದು ನಮ್ಮ ಜೀವನದಲ್ಲಿನ ಅತೀ ಮಧುರವಾದ ಗಳಿಗೆ ಎಂದು ಸಮೀರ್ ಹೇಳಿದರೆ, ನಾನು ಪ್ರೀತಿಸಿದವನನ್ನೇ ನಾನು ಮದುವೆಯಾಗಿದ್ದೀನಿ. ನಾನು ತುಂಬಾ ಅದೃಷ್ಟವಂತ ಎಂದು ಅಮಿತ್ ಖುಷಿಯನ್ನು ವ್ಯಕ್ತ ಪಡಿಸುತ್ತಾರೆ.

ಈ ಹಿಂದೆಯೂ ಜತೆಯಾಗಿದ್ದ ಸಮೀರ್ ಅಮಿತ್ ಜೀವನ ಮದುವೆಯಾದ ನಂತರವೂ ಹಾಗೇ ಮುಂದುವರಿದಿದೆ. ಇಬ್ಬರೂ ಮನೆಯ ಕೆಲಸಗಳನ್ನು ಹಂಚಿಕೊಳ್ಳುತ್ತಾರೆ. ಮದುವೆಯಾದ ಗಂಡ ಹೆಂಡತಿ ಹೇಗೆ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೋ ಅದೇ ರೀತಿಯಲ್ಲಿ ಇಬ್ಬರೂ ಜವಾಬ್ದಾರಿಗಳನ್ನು ಹಂಚಿಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

2010ರಲ್ಲಿ ಸಮೀರ್ ಮತ್ತು ಅಮಿತ್ ಮದುವೆಯಾದಾಗ ಸಲಿಂಗ ವಿವಾಹ ಇಂಡಿಯಾನಾದಲ್ಲಿ ನಿಷೇಧಕ್ಕೊಳಪಟ್ಟಿತ್ತು. ಇದಾಗಿ ನಾಲ್ಕು ವರ್ಷಗಳ ನಂತರ ಇಂಡಿಯಾನಾದಲ್ಲಿ ಸಲಿಂಗ ವಿವಾಹಕ್ಕೆ ಗ್ರೀನ್ ಸಿಗ್ನಲ್ ದೊರಕಿತು. ಸಮೀರ್ ಅಮಿತ್ ಕೂಡಿ ಬಾಳುವುದಕ್ಕಾಗಿ  ಜೂನ್ 15, 2014ರಂದು ಪೆನಿಸ್ಲೇವಿಯಾ ಪಿಟ್ಸ್‌ಬರ್ಗ್‌ನಲ್ಲಿ ಮತ್ತೊಮ್ಮೆ ವಿವಾಹವಾಗಿ, ಕಾನೂನು ರೀತಿಯಲ್ಲಿ ದಂಪತಿಗಳಾದರು.

11 ವರ್ಷ ಜತೆಯಾಗಿದ್ದುಕೊಂಡು ಅನಂತರ ಭಾರತದ ಸಂಪ್ರದಾಯದಂತೆ ಹೆತ್ತವರ ಮುಂದೆ ಮದುವೆಯಾಗಿದ್ದ ಈ ಜೋಡಿ, ಆಮೇಲೆ ಕಾನೂನು ರೀತಿಯಲ್ಲಿ ಮದುವೆಯಾಗಿ ಒಂದಾದರು.

ಭಾರತದಲ್ಲಿ ಇದ್ಯಾವುದು ಸಾಧ್ಯವಿಲ್ಲ ಎಂದು ಹೇಳುವಾಗ, ನಮ್ಮ ಹೆತ್ತವರಿಗೆ ಸಲಿಂಗಕಾಮದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯ ಇದೆ ಎಂದು ಹೇಳುತ್ತಾರೆ ಈ ಜೋಡಿ.

ತಮ್ಮಂತೆಯೇ ಇರುವ ಸಲಿಂಗಕಾಮಿಗಳಿಗೆ ಏನು ಹೇಳಲು ಬಯಸುತ್ತೀರಾ? ಎಂದು ಇವರಲ್ಲಿ ಕೇಳಿದಾಗ ನಿಮ್ಮ ಪ್ರೀತಿಯ ಮೇಲೆ ಹಾಗ ಪ್ರೀತಿಯ ಶಕ್ತಿ ಮೇಲೆ ನಂಬಿಕೆ ಇಡಿ. ಯಾವತ್ತೂ ಸೋಲೊಪ್ಪಿ ಹಿಂದೆ ಸರಿಯಬೇಡಿ. ಇಬ್ಬರ ನಡುವಿನ ಪ್ರೀತಿ ಜತೆಗೆ ಗೌರವ, ಸಂವಹನ ಇದ್ದರೆ  ಎಲ್ಲವನ್ನೂ ಜಯಿಸಬಹುದು ಎಂಬುದು ಸಮೀರ್ ಮಾತು.

ನಮ್ಮ ಮನಸ್ಸಲ್ಲಿರುವ ಹಳೇ ನಂಬಿಕೆಗಳನ್ನು ಬಿಟ್ಟು ಬದುಕು ಹೇಗಿದೆಯೋ ಅದನ್ನು ನಾವು ಸ್ವೀಕರಿಸಬೇಕು. ಇನ್ನೊಬ್ಬರ ಮಾತು ಕೇಳುವ ಮುನ್ನ ನಾವು ನಮ್ಮ ಹೃದಯದ ಮಾತು ಕೇಳಬೇಕು ಅಂತಾರೆ ಅಮಿತ್.

ಅಮೆರಿಕದಲ್ಲಿ ನೆಲೆಸಿರುವ ಈ ಜೋಡಿಗೆ ಮುಂದೊಂದು ದಿನ ಭಾರತದಲ್ಲಿಯೂ ಸಲಿಂಗ ವಿವಾಹಕ್ಕೆ ಅಪ್ಪಣೆ ದೊರೆಯಬಹುದು ಎಂಬ ವಿಶ್ವಾಸವಿದೆ. ಕಾಮಸೂತ್ರದ ರಚನೆ ಭಾರತದಲ್ಲಾಗಿದ್ದರೂ, ಕಾಮ, ಸಲಿಂಗಕಾಮದ ಬಗ್ಗೆ ಮಾತಾಡಲು ಜನ ಹಿಂದೇಟು ಹಾಕುತ್ತಾರೆ. ಭಾರತದ ಸಂಸ್ಕೃತಿಯಲ್ಲಿ ಅದೆಷ್ಟೋ ಬದಲಾವಣೆಗಳು ಬಂದಿವೆ. ಮುಂಬರುವ ದಿನಗಳಲ್ಲಿ ಸಲಿಂಗ ವಿವಾಹವನ್ನೂ ನಮ್ಮ ಸಂಸ್ಕೃತಿ ಸ್ವೀಕರಿಸಲು ತಯಾರಾಗಬಹುದು ಎಂದು ಅಮಿತ್ -ಸಮೀರ್ ಜೋಡಿ ವಿಶ್ವಾಸ ವ್ಯಕ್ತ ಪಡಿಸುತ್ತಾರೆ.







ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com