ಆನ್ ಲೈನ್ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳುವುದು ಹೇಗೆ?

ಮಕ್ಕಳು ಯಾವ ರೀತಿಯ ವೆಬ್ ಸೈಟ್ ಗಳನ್ನು ಓಪನ್ ಮಾಡುತ್ತಾರೆ ಎಂಬುದರ ಮೇಲೆ ಹೆತ್ತವರು ನಿಗಾ ಇಡಲೇ ಬೇಕು. ಅಷ್ಟೇ ಅಲ್ಲ, ಕೆಲವೊಂದು ವೆಬ್ ಸೈಟ್ ಗಳನ್ನು ಮಕ್ಕಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಈಗಿನ ಕಾಲದ ಪುಟ್ಟ ಮಕ್ಕಳಿಗೂ  ಕಂಪ್ಯೂಟರ್ ,  ಸ್ಮಾರ್ಟ್  ಫೋನ್  ಆಪರೇಟ್ ಮಾಡುವುದು ಹೇಗೆ ಅಂತ ಗೊತ್ತಿದೆ. ಇಂಟರ್ ನೆಟ್  ಬಳಕೆಯೂ ಅವರಿಗೆ  ಸಲೀಸು. ಶಾಲಾ ಪಠ್ಯಕ್ಕೆ ಸಂಬಂಧಪಟ್ಟ ವಿಷಯಗಳೇ ಇರಲಿ, ಪಠ್ಯೇತರ ವಿಷಯಗಳೇ ಇರಲಿ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದರೆ ಸರ್ಚ್ ಇಂಜಿನ್ ಗಳ ಮೊರೆ ಹೋಗಲೇ ಬೇಕು. ಅಂದಹಾಗೆ  ಇಂಟರ್ ನೆಟ್ ಸಂಪರ್ಕವೊಂದಿದ್ದರೆ ಸಾಕು, ಜಗತ್ತೇ ಕೈಗೆಟಕುವಂತಿರುತ್ತದೆ. ಮಾಹಿತಿ, ಮನರಂಜನೆ, ಆಟ ಅದೇನು ಬೇಕೋ ಎಲ್ಲವೂ ಇಂಟರ್ ನೆಟ್  ನಲ್ಲಿ ಲಭ್ಯವಿರುವಾಗ  ಮಕ್ಕಳು ತಮಗೆ ಅರಿವಲ್ಲದೆಯೇ ಕೆಲವು ಮೋಸದಾಟಗಳಿಗೆ ಬಲಿಯಾಗಬಹುದು. ಇತ್ತೀಚೆಗೆ ಮಕ್ಕಳು ಇಂಟರ್ ನೆಟ್ ಅಡಿಕ್ಷನ್ ಗೆ ಒಳಗಾಗುತ್ತಿದ್ದು, ಅಪಾಯದ ಸೂಚನೆ ಎಂದೇ ಹೇಳ ಬಹುದು.

ಇದು ತಂತ್ರಜ್ಞಾನದ ಯುಗ, ಇಂಟರ್ ನೆಟ್  ಸೌಲಭ್ಯವಿಲ್ಲದೇ ಹೋದರೆ ಕೂಪ ಮಂಡೂಕದಂತಿರಬೇಕಾದ ಪರಿಸ್ಥಿತಿ. ಆದರೆ ಎಲ್ಲವನ್ನೂ ಪಡೆದುಕೊಳ್ಳುವ ಹಪಾಹಪಿಯಲ್ಲಿ ಎಷ್ಟೋ ಬಾರಿ ಎಡವಟ್ಟುಗಳು ಸಂಭವಿಸುತ್ತವೆ. ಚಿಕ್ಕ ಮಕ್ಕಳು ಇಂಟರ್ ನೆಟ್ ಬಳಸುವುದು ತಪ್ಪೇನಲ್ಲ, ಆದರೆ ಅದು ನಿಯಂತ್ರಣಕ್ಕೆ ಅತೀತವಾದರೆ ಅಥವಾ ಅಲ್ಲಿನ ಸರಿ ತಪ್ಪುಗಳ ಬಗ್ಗೆ ಗೊತ್ತಿಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ  ಕಳೆದ ಸಂಚಿಕೆಯಲ್ಲಿ ಇಂಟರ್ ನೆಟ್ ನಲ್ಲಿ ಮಾಹಿತಿ ಶೇರ್ ಮಾಡುವುದರ ಬಗ್ಗೆ ವಿವರಿಸಿಯಾಗಿದೆ.  ಆದಾಗ್ಯೂ, ಇಂಟರ್ ನೆಟ್ ಬಳಕೆದಾರರಲ್ಲಿ ಬಹುಪಾಲು ಯುವ ಜನಾಂಗದ್ದೇ ಆಗಿದ್ದರೂ, ಪುಟ್ಟ ಮಕ್ಕಳೂ ಇಲ್ಲಿ ಅಷ್ಟೇ ಆ್ಯಕ್ಟಿವ್  ಆಗಿದ್ದಾರೆ. ಇಂಥಾ ಪುಟ್ಟ ಮಕ್ಕಳಿಗೆ  ಇಂಟರ್ ನೆಟ್ ಸುರಕ್ಷತೆಯ ಬಗ್ಗೆ ಮನವರಿಕೆ ಮಾಡುವುದು ಹೇಗೆ ? 

ಇಂಟರ್ ನೆಟ್  ಸುರಕ್ಷತೆಯ ಪಾಠ ಮನೆಯಿಂದಲೇ ಶುರುವಾಗಲಿ

ಮಕ್ಕಳು ಯಾವ ರೀತಿಯ  ವೆಬ್ ಸೈಟ್ ಗಳನ್ನು ಓಪನ್ ಮಾಡುತ್ತಾರೆ ಎಂಬುದರ ಮೇಲೆ ಹೆತ್ತವರು ನಿಗಾ ಇಡಲೇ ಬೇಕು.  ಅಷ್ಟೇ ಅಲ್ಲ, ಕೆಲವೊಂದು ವೆಬ್ ಸೈಟ್ ಗಳನ್ನು ಮಕ್ಕಳು ಓಪನ್ ಮಾಡದಂತೆ ನಿರ್ಬಂಧ ವಿಧಿಸಬೇಕು.  ಮಕ್ಕಳು ಇಂಟರ್ ನೆಟ್ ನಲ್ಲಿ ಯಾವ ಮಾಹಿತಿಯನ್ನು ಹುಡುಕುತ್ತಿದ್ದಾರೆ, ಅವರು ಆನ್ ಲೈನ್ ನಲ್ಲಿ ಎಷ್ಟು ಆಕ್ಟಿವ್ ಆಗಿದ್ದಾರೆ ಎಂಬುದನ್ನು ಮಕ್ಕಳಿಂದಲೇ ಕೇಳಿ ಅರಿತುಕೊಳ್ಳಿ
ಯಾವ ವಿಷಯಗಳನ್ನು ಶೇರ್ ಮಾಡಬೇಕು, ಹೇಗೆ ಮಾಡಬೇಕು ಅವುಗಳ ಒಳಿತು ಕೆಡುಕುಗಳ ಬಗ್ಗೆ  ಮಕ್ಕಳ ಜತೆಗೆ ಮಾತು ಮಾತಿನಲ್ಲೇ ವಿವರಿಸಿಬಿಡಿ.  ಇಂಟರ್ ನೆಟ್ ಸುರಕ್ಷತೆಯ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ, ಪದೇ ಪದೇ ಮಾತನಾಡುತ್ತಿರಿ.

ನಿರಂತರ ಉಪದೇಶ ಕಿರಿಕಿರಿ ಅನಿಸಬಹುದು. ಆದ್ದರಿಂದ ಇತರ ವಿಷಯಗಳನ್ನು ಮಾತನಾಡುವಾಗ ಅದರೆಡೆಗೆ ಕೆಲವು ವೆಬ್ ಸೈಟ್ ಮತ್ತು ಆ್ಯಪ್  ಗಳ ಬಗ್ಗೆ ಸ್ಥೂಲವಾದ ಪರಿಚಯವನ್ನು ನೀಡಿ.

ವೆಬ್ ಸೈಟ್  ಮತ್ತು ಆ್ಯಪ್ ಗಳ ಬಳಕೆ ಬಗ್ಗೆ 
ಮಕ್ಕಳಲ್ಲಿ ಯಾವ ವಿಷಯವನ್ನು ಮಾತನಾಡಬೇಕು, ಯಾವ ವಿಷಯವನ್ನು ಮಾತನಾಡಬಾರದು ಎಂಬುದರ ಬಗ್ಗೆ ಸ್ಪಷ್ಟವಾದ ಅಭಿಪ್ರಾಯ ಹೊಂದಿದ ನಂತರವೇ ವೆಬ್ ಸೈಟ್ ಮತ್ತು ಆ್ಯಪ್ ಗಳ ಬಗ್ಗೆ ಮಾತುಕತೆ  ಆರಂಭಿಸಬೇಕು. ಮೊದಲಿಗೆ  ಮಕ್ಕಳು ಯಾವ ವೆಬ್ ಸೈಟ್ ಮತ್ತು ಆ್ಯಪ್ ಗಳನ್ನು ಇಷ್ಟ ಪಡುತ್ತಾರೆ ಎಂಬುದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳಿ. ಅನಂತರ  ಅವರು ಬಳಸುತ್ತಿರುವ ವೆಬ್ ಸೈಟ್ ಗಳು ಅಥವಾ ಆ್ಯಪ್ ಗಳು ಹೇಗೆ ಉಪಯುಕ್ತವಾಗಿದೆ ಎಂಬುದನ್ನು ವಿವರಿಸಿ ಹೇಳಿ. ಒಂದು ವೇಳೆ ಮಕ್ಕಳು ಬಳಸುವ ವೆಬ್ ಸೈಟ್  ಸುರಕ್ಷಿತವಲ್ಲದೇ ಇದ್ದರೆ, ಆ ವೆಬ್ ಸೈಟ್ ನ್ನು ಯಾಕೆ ಬಳಸಬಾರದು ಎಂಬುದನ್ನು ವಿವರಿಸಿ ಹೇಳಿ. ಇಲ್ಲಿ ಬರೀ ಉಪದೇಶ ಮಾತ್ರವಲ್ಲ, ಸರಿ ತಪ್ಪುಗಳ ಬಗ್ಗೆ ಹೇಳುವಾಗ ಮಕ್ಕಳ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡಿ.  ಇಂಥಾ ವೆಬ್ ಸೈಟ್ ನ ಬಳಕೆ ಮಾಡಬಾರದು ಎಂದು ಹೇಳಿದಾಗ ಮೊದಲಿಗೆ ಮಕ್ಕಳು ಒಪ್ಪದೇ ಇರಬಹುದು. ಅವರೇನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಿದ ನಂತರ ಆ ವೆಬ್ ಸೈಟ್ ನ ನೆಗೆಟಿವ್ ಅಂಶಗಳ ಬಗ್ಗೆ ಮಾತನಾಡಿ ಮಕ್ಕಳಿಗೆ ಅರ್ಥವಾಗುವಂತೆ ಮಾಡಿ. 
ಆನ್ ಲೈನ್ ಬಳಕೆ ಮಾಡುವಾಗ ಅವರಿಗೆ ಆಗಿರುವ ಅನುಭವಗಳ ಬಗ್ಗೆಯೂ ಮಾತನಾಡುವಂತೆ ಪ್ರೇರೇಪಿಸಿ. ಕೆಲವೊಂದು ಸಾರಿ, ಆನ್ ಲೈನ್ ನಲ್ಲಿ ಮಕ್ಕಳ ಮನಸ್ಸಿಗೆ ನೋವಾಗುವಂತ ಯಾವುದೇ ಘಟನೆ ನಡೆದಿರುತ್ತದೆ. ಕೆಲವೊಂದು ಮುಜುಗರದ ಸಂಗತಿಗಳು  ಇಲ್ಲವೇ ಭಯ ಹುಟ್ಟಿಸುವ ಅನುಭವಗಳೂ ಆಗಿರುತ್ತವೆ. ಇಂಥಾ ಸೆನ್ಸಿಬಲ್ ವಿಷಯಗಳ ಬಗ್ಗೆ ಹೆಚ್ಚಿನ ಗಮನವಹಿಸಿ.ಅನುಚಿತವಾದ ಅನುಭವಗಳೇನಾದರೂ ಆಗಿದ್ದರೆ ಅದನ್ನು ಹಿರಿಯರ ಗಮನಕ್ಕೆ ತರುವಂತೆ ಹೇಳಿ. ಇಷ್ಟೇ ಅಲ್ಲದೆ, ಕೆಲವೊಂದು ಸೈಟ್ ಗಳನ್ನು , ಕಾಮೆಂಟ್ ಗಳನ್ನು ರಿಪೋರ್ಟ್ ಅಥವಾ ಬ್ಲಾಕ್ ಮಾಡುವುದನ್ನೂ ಹೇಳಿಕೊಡಿ. ಆನ್ ಲೈನ್ ನಲ್ಲಿ  ಪರಿಹಾಸ್ಯಕ್ಕೀಡಾಗಿದ್ದರೆ ಆ ನೋವಿನಿಂದ ಹೊರಗೆ ಬರಲು ಮಕ್ಕಳಿಗೆ ಧೈರ್ಯ ನೀಡಿ.


ಸಾಮಾಜಿಕ ತಾಣಗಳ ಬಳಕೆ
ಸಾಮಾಜಿಕ ತಾಣಗಳನ್ನು ಯಾವ ರೀತಿ ಬಳಸಬೇಕೆಂಬುದನ್ನು ಮಕ್ಕಳಿಗೆ ವಿವರಿಸಿ ಹೇಳಿ.
ಅಲ್ಲಿರುವ ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಸಂಬಂಧವನ್ನು ಬಯಸುವುದರ ಬಗ್ಗೆ ಮತ್ತು ವೈಯಕ್ತಿಕ ಮಾಹಿತಿಗಳನ್ನು ಶೇರ್ ಮಾಡುವುದರಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಿ.
ಮಕ್ಕಳಿಗೆ ಉಪದೇಶ  ನೀಡುವುದಷ್ಟೇ ಅಲ್ಲ, ಮಕ್ಕಳ ಮುಂದೆ ಹಿರಿಯರು ಏನು ಮಾಡುತ್ತಾರೋ ಮಕ್ಕಳೂ ಅದನ್ನೇ ಅನುಕರಿಸುತ್ತಾರೆ. ಆದರ ಕಾರಣ ಇಂಟರ್ ನೆಟ್  ಬಳಕೆಯ ವಿಷಯ ಬಂದಾಗಲೂ ಮಕ್ಕಳ ಮುಂದೆ ಯಾವ ವೆಬ್ ಸೈಟ್  ಓಪನ್ ಮಾಡಬೇಕು ಎಂಬುದರ ಬಗ್ಗೆಯೂ ಜಾಗರೂಕರಾಗಿರಬೇಕು.

ಆನ್ ಲೈನ್ ನಲ್ಲಿ ಸೇಫ್ ಆಗಿರುವುದು ಹೇಗೆ?
ಅಪರಿಚತ ವ್ಯಕ್ತಿಗಳ ಜತೆ ಇಮೇಲ್ ಐಡಿ, ಫೋನ್ ನಂಬರ್, ಮನೆ ವಿಳಾಸ ಅಥವಾ ಶಾಲೆಯ ವಿವರಗಳನ್ನು ಶೇರ್ ಮಾಡಬೇಡಿ ಎಂಬುದನ್ನು ಹೇಳಿ ಕೊಡಿ 

ಯೂಸರ್ ನೇಮ್ ಗಳನ್ನು ಆಯ್ಕೆ ಮಾಡುವಾಗಲೂ ಅಷ್ಟೇ, ಅವು ವೈಯಕ್ತಿಕ ಮಾಹಿತಿಗಳ ಸುಳಿವು ನೀಡುವಂತಿರಬಾರದು ಮತ್ತು ಪಾಸ್ ವರ್ಡ್ ಗಳನ್ನು ಕ್ರಿಯೇಟ್ ಮಾಡುವಾಗ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಹೇಳಿ ಕೊಡಿ

ಯಾವ ರೀತಿಯ ಫೋಟೋ. ಮಾಹಿತಿಗಳನ್ನ ಆನ್ ಲೈನ್ ನಲ್ಲಿ ಶೇರ್ ಮಾಡಬೇಕು, ಯಾವುದನ್ನು ಮಾಡಬಾರದು ಮಾಡಿದರೆ ಏನಾಗುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿ. 

ಮಕ್ಕಳಲ್ಲಿ ನಾವು ಎಷ್ಟು ಮುಚ್ಚಿಡುತ್ತಿದ್ದೇವೋ ಅಂಥಾ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಇದ್ದೇ ಇರುತ್ತದೆ.  ರೋಚಕ ವಿಷಯಗಳು,  ಚಿತ್ರಗಳು ಅವರನ್ನು ಆಕರ್ಷಿಸುವುದು ಸಹಜ. ಇಂಥಾ ವಿಷಯಗಳು ಬಂದಾಗ ಸಂಯಮದಿಂದ ಅರನ್ನು ಸಂಭಾಳಿಸಿ. ಮಕ್ಕಳು ಯಾವ ವಿಷಯವನ್ನು ಹೆಚ್ಚು ಇಷ್ಟಪಡುತ್ತಾರೆ, ಯಾವುದರ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇರಿಸಿ, ಸೂಕ್ತ ಸಲಹೆಗಳನ್ನು ನೀಡಿ.
-ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com