ಆನ್‌ಲೈನ್ ನಲ್ಲಿ ಸಹಾಯ ಪಡೆಯುವುದು ಹೇಗೆ?

ದೈಹಿಕ ಮತ್ತು ಲೈಂಗಿಕ ವಿಷಯಗಳ ಬಗ್ಗೆ ಇರುವ ಕುತೂಹಲದಿಂದಲೇ ಇಲ್ಲಿ ಆ ವಿಷಯಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಯುತ್ತದೆ. ಲೈಂಗಿಕ ಆಸಕ್ತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅದೇನೇ ಸಮಸ್ಯೆ ಅಥವಾ ಸಂಶಯಗಳಿದ್ದರೂ ಮೊದಲು ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡುತ್ತೇವೆ. ಅದೇನು ಬೇಕೋ ಎಲ್ಲವೂ ಗೂಗಲ್ ನಲ್ಲಿ ಸಿಗುತ್ತದೆ! ತಲೆ ನೋವಾದರೆ ಏನು ಮಾಡಬೇಕು? ಎಂಬಲ್ಲಿಂದ ಹಿಡಿದು ಶಾಲಾ ಕಾಲೇಜಿನ ಪ್ರಾಜೆಕ್ಟ್ ವರ್ಕ್, ಅಡುಗೆಯಿಂದ ದಾಂಪತ್ಯದವರೆಗೆ ಎಲ್ಲ ರೀತಿಯ ಸಲಹೆ ಸೂಚನೆಗಳಿಗೂ ಆನ್‌ಲೈನ್‌ನ ಮೊರೆ ಹೋಗುವ ಕಾಲವಿದು. ಯಾವುದೇ ರೀತಿಯ ಸಂದೇಹ, ಸಲಹೆಗಳಿಗಾಗಿ ನಾವು ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಇಂಜಿನ್‌ನ ಮೊರೆ ಹೋದಾಗ ನಮ್ಮ ಕೀವರ್ಡ್‌ಗೆ ಅನುಸಾರವಾಗಿ ಹಲವಾರು ವೆಬ್ ಪುಟಗಳು ತೆರೆದುಕೊಳ್ಳುತ್ತವೆ. ಅವುಗಳಲ್ಲಿ ನಮಗೆ ಅಗತ್ಯವಾದುವುಗಳೂ ಅನಗತ್ಯವಾದ ವಿಷಯಗಳೂ ಇರಬಹುದು. ನಮಗೆ ಯಾವುದು ಬೇಕು ಯಾವುದು ಬೇಡ ಎಂಬ ನಿರ್ಧಾರ ಮಾತ್ರ ನಮ್ಮದೇ. ಹೀಗೆ ಕೀವರ್ಡ್‌ಗಳನ್ನು ಬಳಸಿ ವಿಷಯಗಳ ಬಗ್ಗೆ ಜಾಲಾಡುವುದು ಹೇಗೆ? ಅಥವಾ ನಮಗೆ ಅಗತ್ಯವಾದ ಸಹಾಯಗಳನ್ನು ಪಡೆಯುವುದು ಹೇಗೆ? ಎಂಬುದನ್ನು ನೋಡೋಣ.
ಕೀವರ್ಡ್ ಮುಖ್ಯ
ಅಂತರ್ಜಾಲದಲ್ಲಿ ಯಾವುದೇ ವಿಷಯಗಳನ್ನು ಹುಡುಕಬೇಕಾದರೆ ಕೀವರ್ಡ್ ಮುಖ್ಯ. ಉದಾಹರಣೆಗೆ ಮೊಡವೆ ಹೋಗಲಾಡಿಸಲು ಏನು ಮಾಡಬೇಕು? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅಲ್ಲಿ ಮೊಡವೆ, ಪರಿಹಾರ ಎಂಬ ಕೀವರ್ಡ್ ಗಳನ್ನು ಬಳಸಬೇಕು. ಸರ್ಚ್ ಬಾರ್ ನಲ್ಲಿ ಒಂದಿಡೀ ಪ್ರಶ್ನೆಯನ್ನು ಟೈಪ್ ಮಾಡುವ ಬದಲು ಅದರಲ್ಲಿರುವ ಪ್ರಮುಖ ಕೀವರ್ಡ್‌ಗಳನ್ನು ಮಾತ್ರ ಸರ್ಚ್ ಮಾಡಬೇಕು.  ನಾವು ಟೈಪ್ ಮಾಡಿದ ಪದದಲ್ಲಿ ಅಕ್ಷರ ತಪ್ಪು (ಸ್ಪೆಲ್ ಮಿಸ್ಟೇಕ್) ಇದ್ದರೆ ಗೂಗಲ್ ಸರಿಯಾದ ಪದವನ್ನು ನಮಗೆ ಸಜೆಸ್ಟ್ ಮಾಡುತ್ತದೆ. ಕೆಲವೊಂದು ಪದಗಳು ಒಂದೇ ಒಂದು ಸ್ಪೆಲ್ಲಿಂಗ್ ನಿಂದ ಬೇರೆ ಅರ್ಥವನ್ನು ನೀಡುವಂತವುಗಳಿರುತ್ತವೆ. ಅಂಥಾ ಪದಗಳಿದ್ದರೆ ಅವುಗಳ ಅರ್ಥವನ್ನು ಗ್ರಹಿಸಿದ ನಂತರ ವಿಷಯದ ಹುಡುಕಾಟ ನಡೆಸಬೇಕು. 
ಆನ್‌ಲೈನ್ ಸಹಾಯ ಬಯಸುವವರಲ್ಲಿ ಯುವ ಜನರೇ ಹೆಚ್ಚು!
ಸಮೀಕ್ಷೆಯೊಂದರ ಪ್ರಕಾರ ಹದಿಹರೆಯದ ಮಂದಿಯೇ ಸಹಾಯಕಕ್ಕಾಗಿ ಆನ್‌ಲೈನ್‌ನ ಮೊರೆಹೋಗುತ್ತಾರೆ. ಹದಿಹರೆಯದವರಲ್ಲಿ ಶೇ. 57ರಷ್ಟು ಜನ ತಮ್ಮ ಸಮಸ್ಯೆಗಳಿಗೆ ಸಾಮಾಜಿಕ ತಾಣದಲ್ಲಿ ಪರಿಹಾರವನ್ನು ಹುಡುಕುತ್ತಾರೆ ಅಂತಿದೆ ಸಮೀಕ್ಷೆ. ಕೆಲವೊಂದು ವಿಷಯಗಳನ್ನು ಹೆತ್ತವರಲ್ಲಿ ಅಥವಾ ಶಿಕ್ಷಕರಲ್ಲಿ ಕೇಳಲು ಮುಜುಗರವೆನಿಸಿದಾಗ, ಇನ್ನೂ ಕೆಲವು ವಿಷಯಗಳ ಬಗ್ಗೆ ವಯೋಸಹಜ ಕುತೂಹಲ ಹುಟ್ಟಿದಾಗ ಹದಿಹರೆಯದವರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. 
ಆರೋಗ್ಯದ ಬಗ್ಗೆಯೇ ಹುಡುಕಾಟ ಜಾಸ್ತಿ!
ಪುಟ್ಟದೊಂದು ತಲೆನೋವು ಬಂದರೆ ಸಾಕು, ಯಾವೆಲ್ಲಾ ಕಾರಣದಿಂದ ತಲೆ ನೋವು ಬರುತ್ತದೆ, ನನಗೆ ಯಾಕೆ ಬಂತು? ಆ ನೋವು ಇನ್ಯಾವುದಾದರೂ ರೋಗದ ಮುನ್ಸೂಚನೆಯೇ? ಎಂದು ಗಾಬರಿ ಪಡುವವರಿದ್ದಾರೆ. ಇಂಥವರು ತಲೆನೋವಿನ ಬಗ್ಗೆ ಸಿಕ್ಕಾಪಟ್ಟೆ ಹುಡುಕಾಟ ನಡೆಸಿ ಕೊನೆಗೆ ತಮ್ಮದೇ ಆದ ನಿರ್ಧಾರಕ್ಕೆ ಬಂದು ಇನ್ನೇನೋ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ರೋಗದ ಬಗ್ಗೆ ಮಾಹಿತಿ, ಕಾರಣಗಳನ್ನು ಹುಡುಕುವ ಜತೆಗೆ ಸ್ವಯಂ ಚಿಕಿತ್ಸೆಗೂ ಮುಂದಾಗಿ ಪ್ರಾಣಕ್ಕೇ ಹಾನಿ ಮಾಡಿಕೊಳ್ಳುವವರೂ ಇದ್ದಾರೆ. ಅಷ್ಟೇ ಅಲ್ಲದೆ ತನ್ನಂತೆಯೇ ಸಮಸ್ಯೆಗೊಳಗಾಗಿರುವ ವ್ಯಕ್ತಿಯ ಅನುಭವಗಳು ಅಲ್ಲಿ ದಾಖಲಾಗಿದ್ದರೆ ಅವುಗಳನ್ನು ಓದುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಮಾನಸಿಕ ಸಮಸ್ಯೆಗಳ ಬಗ್ಗೆಯೇ ಹೆಚ್ಚಿನ ಹುಡುಕಾಟಗಳು ನಡೆಯುತ್ತಿದ್ದು, ಜನರು ಪಾಸಿಟಿವ್ ವಿಷಯಗಳಿಗಿಂತ ಹೆಚ್ಚು ನೆಗೆಟಿವ್ ವಿಷಯಗಳಿಗೆ ಆಕರ್ಷಿತರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾರೆ ಅಂತಾರೆ ತಜ್ಞರು.
ಲೈಂಗಿಕ ವಿಷಯಗಳ ಬಗ್ಗೆ ಕುತೂಹಲ ಜಾಸ್ತಿ 
ದೈಹಿಕ ಮತ್ತು ಲೈಂಗಿಕ ವಿಷಯಗಳ ಬಗ್ಗೆ ಇರುವ ಕುತೂಹಲದಿಂದಲೇ ಇಲ್ಲಿ ಆ ವಿಷಯಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಯುತ್ತದೆ. ಲೈಂಗಿಕ ಆಸಕ್ತಿ, ಸಮಸ್ಯೆ, ಸಾಮರ್ಥ್ಯದಿಂದ ಹಿಡಿದು ಅನುಭವಗಳ ಬಗ್ಗೆ ಇಲ್ಲಿ ಮಾಹಿತಿ ದೊರೆಯುವುದಲ್ಲದೆ, ಅದರ ಬಗೆಗಿನ ಚರ್ಚೆಗಳೂ ನಡೆಯುತ್ತವೆ. ಸೆಕ್ಸ್, ವಿರುದ್ಧ ಲಿಂಗಗಳ ಬಗೆಗಿನ ಆಕರ್ಷಣೆ ಮತ್ತು ಕುತೂಹಲಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯುವಜನಾಂಗ ಹೆಚ್ಚು ಆಸಕ್ತಿ ವಹಿಸಿ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಇಂಥಾ ಹುಡುಕಾಟಗಳಲ್ಲಿ ಸಿಕ್ಕ ಮಾಹಿತಿಯನ್ನು ಬಳಸಿ ತಪ್ಪು ಹಾದಿ ಹಿಡಿಯುವವರ ಸಂಖ್ಯೆಯೂ ಕಮ್ಮಿ ಇಲ್ಲ. ಆನ್‌ಲೈನ್ ನಲ್ಲಿ ಹೇಳುವ ಮತ್ತು ತೋರಿಸುವ ಎಲ್ಲ ವಿಷಯಗಳನ್ನು ಅದೇ ರೀತಿಯಲ್ಲಿ ಅನುಷ್ಠಾನಗೊಳಿಸುವವರೂ ಇದ್ದಾರೆ. ಆದರೆ ನೆನಪಿಡಿ, ಅಲ್ಲಿ ತೋರಿಸುವ ಕೆಲವೊಂದು ವಿಷಯಗಳಲ್ಲಿ ರೋಚಕತೆ ತುಂಬಲು ಮತ್ತು ಜನರನ್ನು ಆಕರ್ಷಿಸುವುದಕ್ಕಾಗಿ 'ಕ್ಯಾಮೆರಾ ವರ್ಕ್‌'ಗಳನ್ನು ಮಾಡಲಾಗುತ್ತದೆ. ಇಂಥಾ ಸೋಗಿನ  ಮಾಯೆ ಮತ್ತು ವಾಸ್ತವದ ಬಗೆಗಿನ ಅಂತರವನ್ನು ಅರ್ಥ ಮಾಡಿಕೊಳ್ಳಿ.
ಸಮಾನ ಮನಸ್ಕರ ವೇದಿಕೆ
ಆನ್‌ಲೈನ್‌ನಲ್ಲಿ ಹಲವಾರು ವೇದಿಕೆ ( ಫೋರಂ)ಗಳಿವೆ.  ಈ ವೇದಿಕೆಗಳಲ್ಲಿ ಸಮಾನ ಮನಸ್ಕರ ಜತೆ ಸಂವಹನ ನಡೆಸುವ ಮೂಲಕ ಕೆಲವೊಂದು ಸಂದೇಹ ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇಂಥಾ ವೇದಿಕೆಗಳನ್ನು ಆಯ್ಕೆ ಮಾಡುವಾಗಲೂ ಹೆಚ್ಚಿನ ಜಾಗ್ರತೆ ವಹಿಸಬೇಕು. ಆನ್‌ಲೈನ್‌ನಲ್ಲಿ ವ್ಯಕ್ತಿಗಳು ಮುಖಾಮುಖಿಯಾಗದೇ ಇದ್ದರೂ ಕೆಲವೊಂದು ಮೋಸದಾಟಗಳು ಇಲ್ಲಿಯೂ ನಡೆಯುತ್ತವೆ. ಇಂಥಾ ವೇದಿಕೆಗಳಲ್ಲಿ ಯಾವ ವಿಷಯವನ್ನು ಹಂಚಿಕೊಳ್ಳಬೇಕು, ಯಾವುದನ್ನು ಹಂಚಿಕೊಳ್ಳಬಾರದು ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಪ್ರತಿಯೊಬ್ಬ ವ್ಯಕ್ತಿಯನ್ನೂ ಕಣ್ಣು ಮುಚ್ಚಿ ನಂಬುವ ನಿಲುವುಗಳಂತೂ ಬೇಡವೇ ಬೇಡ.
ಇನ್ನು ಆಯಾ ಭಾಷೆಗಳಿಗೆ, ಪ್ರದೇಶದ ಜನರಿಗಾಗಿಯೂ ಹಲವಾರು ವೇದಿಕೆಗಳು ಇದ್ದೇ ಇರುತ್ತವೆ. ಅಂಗವೈಕಲ್ಯತೆ ಇರುವವರಿಗೂ ಅವರದ್ದೇ ಆದ ಆನ್‌ಲೈನ್ ಸಮುದಾಯಗಳು ಇಲ್ಲಿವೆ. ಯಾವುದೇ ಸಮುದಾಯದಲ್ಲಿ ತೊಡಗಿಸಿಕೊಳ್ಳುವ ಮುನ್ನ ಆ ಸಮುದಾಯದ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡು, ಅದು ಸೇಫ್ ಆಗಿದೆ..ಇದರಿಂದ ನಮಗೆ ಪ್ರಯೋಜನವುಂಟಾಗಬಹುದು ಎಂಬುದನ್ನು ಅರಿತ ನಂತರವೇ ಆ ಸಮುದಾಯ ಅಥವಾ ವೇದಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಸಾಮಾಜಿಕ ತಾಣಗಳು ಸಕ್ರಿಯವಾಗಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ತಾಣಗಳಲ್ಲೇ ಇಂಥಾ ವೇದಿಕೆಗಳು ಸಾಕಷ್ಟು ಇವೆ. ಇಲ್ಲಿಯೂ ನಮಗೆ ಆಸಕ್ತಿಯಿರುವ ವಿಷಯಗಳ ಗುಂಪು ಅಥವಾ ವೇದಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ  ಜ್ಞಾನ ಮತ್ತು ಕಲಿಕೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
-ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com