ಮದುವೆ ಎಲ್ಲ ಪ್ರಶ್ನೆಗಳಿಗೆ ಉತ್ತರ, ಹೌದಾ?

ಹಾಗಾದರೆ ಮದುವೆಯೇ ಎಲ್ಲದಕ್ಕೂ ಪರಿಹಾರವೆ? ಉತ್ತರ ಫಿಫ್ಟಿ- ಫಿಫ್ಟಿ. ಕೆಲವರಿಗೆ ಮದುವೆ ಆದ ಮೇಲೆ ಜೀವನ ಒಳ್ಳೆಯ ರೀತಿಯಲ್ಲಿ....
ದಾಂಪತ್ಯ
ದಾಂಪತ್ಯ

ಅಡ್ನಾಡಿಯಾಗಿರುವ ಮಗನಿಗೊಂದು ಮದುವೆ ಮಾಡಿಸಿ ಎಲ್ಲ ಸರಿಹೋಗುತ್ತೆ. ಮಗಳಿಗೆ ಬೇಗ ಮದುವೆ ಮಾಡಿಸಿ ಬಿಡಿ ಎಲ್ಲ ಸರಿ ಹೋಗುತ್ತೆ. ಸಾಧಾರಣವಾಗಿ ಭಾರತೀಯ ಕುಟುಂಬಗಳಲ್ಲಿ ಕೇಳಿ ಬರುವ ಮಾತಿದು. ಹಾಗಾದರೆ ಮದುವೆಯೇ ಎಲ್ಲದಕ್ಕೂ ಪರಿಹಾರವೆ? ಉತ್ತರ ಫಿಫ್ಟಿ- ಫಿಫ್ಟಿ. ಕೆಲವರಿಗೆ ಮದುವೆ ಆದ ಮೇಲೆ ಜೀವನ ಒಳ್ಳೆಯ ರೀತಿಯಲ್ಲಿ ಸಾಗಿದರೆ, ಇನ್ನು ಕೆಲವರಿಗೆ ಮದುವೆ ಗಂಟಲಲ್ಲಿ ಸಿಕ್ಕ ಮುಳ್ಳಿನಂತಾಗಿರುತ್ತದೆ. ಮದುವೆ ಆಗದವರಿಗೆ ಮದುವೆ ಬಗ್ಗೆ ಕುತೂಹಲವಿದ್ದರೆ ಮದುವೆ ಆದವರಿಗೆ ಆ ಕುತೂಹಲ ಏನಾಗಿತ್ತು? ಎಂಬುದನ್ನು ಪುನರ್‌ವಿಮರ್ಶೆ ಮಾಡಿಕೊಳ್ಳುವ ಸಮಯ!. ಹಾಗಾದರೆ ಮದುವೆ ಎಲ್ಲದಕ್ಕೂ ಉತ್ತರವಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಮದುವೆ ಆಗಲೇ ಬೇಕು. ಅನುಭವ ಎಲ್ಲವನ್ನೂ ಕಲಿಸುತ್ತದೆ ಎಂದು ಹೇಳುವಾಗಲೇ ಮದುವೆ-ದಾಂಪತ್ಯದ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳಿಗೆ ತೆರೆ ಎಳೆಯಬೇಕಾಗಿದೆ.

ಎಲ್ಲ ಪ್ರಶ್ನೆಗಳಿಗೆ ಉತ್ತರ ಮದುವೆ
:  ಎಲ್ಲದಕ್ಕೂ ಮದುವೆಯೇ ಉತ್ತರ ಎಂಬುದು ನಾವು ಚಿಕ್ಕಂದಿನಿಂದ ಕೇಳಿ ಬಂದಿರುವ ಹಿರಿಯರ ಮಾತು. ಎಲ್ಲರ ಜೀವನದಲ್ಲಿ ಇದು ವರ್ಕೌಟ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ ಹೊಸ ಸಂಗಾತಿ ಸಿಕ್ಕಾಗ ಜೀವನದ ರೀತಿ ನೀತಿಗಳು ಬದಲಾಗುತ್ತದೆ. ಬದುಕಿಗೆ ಹೊಸ ಹೆಣ್ಣಿನ ಆಗಮನ , ಗಂಡನ ಸಾನಿಧ್ಯ ಜೀವನದಲ್ಲಿ ಖುಷಿ ತಂದುಕೊಡುತ್ತದೆ . ಖುಷಿಯನ್ನು ಅನುಭವಿಸುವ ರೀತಿ ನೀತಿಗಳು ಬದಲಾಗುತ್ತದೆ. ಹಾಗಂತ ಕಷ್ಟಗಳೆದುರಾದರೆ ಹೆಣ್ಣಿನ ಕಾಲ್ಗುಣ ಸರಿಯಿಲ್ಲ ಎಂದು ದೂಷಿಸುವುದು ಸಲ್ಲ. ಜೀವನದಲ್ಲಿ ಕಷ್ಟ ಸುಖಗಳು ಬಂದೇ ಬರುತ್ತವೆ. ಒಬ್ಬರು ನಮ್ಮ ಜೀವನಕ್ಕೆ ಬಂದ ಕೂಡಲೇ ಕಷ್ಟ ಶುರುವಾಯಿತು ಎಂದರೆ ಅದು ಕಾಕತಾಳೀಯವಷ್ಟೇ. ಕಷ್ಟಕ್ಕೂ ಆ ವ್ಯಕ್ತಿಯ ಆಗಮನಕ್ಕೂ ಯಾವುದೇ ಸಂಬಂಧವಿಲ್ಲ. ಕಷ್ಟ ಸುಖಗಳು ಕ್ಷಣಿಕ, ಅವುಗಳನ್ನು ಹಂಚಿಕೊಂಡು ಬಾಳುವುದನ್ನು ಮದುವೆ ಎಂಬ ವ್ಯವಸ್ಥೆ ಕಲಿಸುತ್ತದೆಯೇ ಹೊರತು ನಮ್ಮೆಲ್ಲ ಸಮಸ್ಯೆಗಳ ಉತ್ತರವಲ್ಲ.

ಒಂದು ಒಂದು ಕೂಡಿದರೆ: 'ಎರಡು ದೇಹ ಒಂದು ಮನಸ್ಸು ' ಇದು ರೊಮ್ಯಾಂಟಿಕ್ ಮಂತ್ರ. ಹೆಣ್ಣು ಗಂಡು ಜತೆ ಸೇರಿ ಆ ಸಂಬಂಧವನ್ನು ಪ್ರೀತಿಯಿಂದ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರಲ್ಲ..ಈ ಪ್ರಯತ್ನವೇ ಸಂಬಂಧಗಳನ್ನು ಗಟ್ಟಿ ಮಾಡುತ್ತದೆ. ಎಲ್ಲರನ್ನೂ ಸಂತೋಷವಾಗಿರಿಸಿಕೊಳ್ಳಲು ನಮ್ಮ ಸಂತೋಷವನ್ನು ಕಳೆದುಕೊಳ್ಳಲೇ ಬೇಕು ಎಂಬ ಕಲ್ಪನೆಯನ್ನು ಬಿಟ್ಟು ನಮ್ಮ ಖುಷಿಯೂ ಅವರ ಖುಷಿಯಾಗಿರಲಿ, ಅವರ ಖುಷಿಯಲ್ಲಿ ನಮ್ಮ ಖುಷಿ ಕಂಡುಕೊಳ್ಳೋಣ ಎಂಬ ಧೋರಣೆ ಇದ್ದರೆ ಎಲ್ಲವೂ ಖುಷಿ ನೀಡುವ ಗಳಿಗೆಗಳೇ ಆಗಿರುತ್ತದೆ.

ಪ್ರತಿದಿನವೂ ಹೊಸತು: ಮೊದ ಮೊದಲಿಗೆ ಸುಂದರವಾಗಿ ಕಾಣಿಸಿಕೊಂಡಿದ್ದ ಸಂಗಾತಿ ವರುಷಗಳು ಉರುಳಿದಂತೆ ಆಕರ್ಷಣೀಯವಾಗಿ ಕಾಣಿಸಲ್ಲ. ಸಂಗಾತಿಯತ್ತ ಶರೀರದಲ್ಲಾಗುವ ಬದಲಾವಣೆಯಿಂದಾಗಿ ಶಾರೀರಿಕ ಆಕರ್ಷಣೆ ಕಡಿಮೆಯಾಗಬಹುದು. ಇದು ಸಹಜ. ಶಾರೀರಿಕ ಸುಖ ಕೊಟ್ಟರೆ ಮಾತ್ರ ಅಲ್ಲಿ ಪ್ರೀತಿ ಇರುತ್ತೆ ಎಂಬುದು ತಪ್ಪು ಕಲ್ಪನೆ. ಸಿನಿಮಾಗಳಲ್ಲಿ ತೋರಿಸುವಂತೆ ಸಂಗಾತಿಯನ್ನು ಒಲಿಸಿಕೊಳ್ಳಲು ಮಾದಕ ಬಟ್ಟೆ ತೊಟ್ಟು ಡ್ಯಾನ್ಸ್ ಮಾಡಬೇಕಾಗಿಲ್ಲ. ನಿಮ್ಮೊಳಗಿನ ಮುಗ್ಧತೆ, ನೇರವಂತಿಕೆ ಹಾಗೂ ಸಮಯ ಪರಿಪಾಲನೆ ಎಲ್ಲವೂ ಸಂಗಾತಿಯನ್ನು ಆಕರ್ಷಿಸುವ ಗುಣಗಳೇ. ಪ್ರೀತಿ ಮನಸ್ಸಿನಿಂದ ಹುಟ್ಟಬೇಕು, ಆ ಪ್ರೀತಿಯನ್ನು ವ್ಯಕ್ತ ಪಡಿಸುವ ರೀತಿಯೂ ಗೊತ್ತಿರಬೇಕು. ಈ ಪ್ರೀತಿಯೇ ಪ್ರತಿದಿನ ಹೊಸತನವನ್ನು ಕೊಡುತ್ತದೆ.


ಯಾಕಾಗಿ ನಿನ್ನನ್ನು ಮದುವೆಯಾದೆನೋ? : ಹನಿಮೂನ್ ಮುಗಿದ ಮೇಲೆ ಎಲ್ಲವೂ ಮಾಮೂಲಿ. ಮದುವೆಯಾದ ಹೊಸತರಲ್ಲಿ ಸಂಗಾತಿ ಮಾಡಿದ್ದು ಎಲ್ಲವೂ ಸರಿ, ಅವಳ ನಗು, ಅವನ ಪರ್ಸನಾಲಿಟಿ ನನಗಿಷ್ಟ ಎಂದು ಹೇಳುವ ದಂಪತಿಗಳು ವರ್ಷಗಳು ಕಳೆದಂತೆ ಜಗಳವಾಡಲು ಶುರು ಮಾಡುತ್ತಾರೆ. ಮೊದ ಮೊದಲಿಗೆ ಪುಟ್ಟ ಜಗಳಗಳು ಆಮೇಲೆ ಮಹಾಯುದ್ಧಗಳಾಗಿ ಬದಲಾಗುತ್ತವೆ. ಇಷ್ಟೆಲ್ಲ ಜಗಳಗಳಾಗುವಾಗಲೇ ಯಾಕಾಗಿ ನಿನ್ನನ್ನು ಮದುವೆಯಾದೆನೋ ? ಎಂಬ ಮಾತು ಬರುತ್ತದೆ. ಇದೆಲ್ಲ ಸಾಮಾನ್ಯ. ಈ ಪ್ರಶ್ನೆಯ ಜೀವನಕ್ಕೆ ಇನ್ನೊಂದು ತಿರುವು ಸಿಗುತ್ತದೆ. ಮದುವೆಯ ಈ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡುವುದು ಹೇಗೆ? ಇನ್ನಷ್ಟು ಹೊಂದಾಣಿಕೆಯಿಂದ ಇರುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಘಟ್ಟ ಇದು.


ಐ ಹೇಟ್ ಯೂ: ಅಲ್ಲಿಯವರೆ ಚಿನ್ನಾ, ಮುದ್ದು, ಬಂಗಾರ ಎಂದು ಮುದ್ದಿಸಿದ ಸಂಗಾತಿ ಜಗಳವಾಡಿದ ನಂತರ ಐ ಹೇಟ್ ಯೂ ಅಂದು ಬಿಟ್ಟರೆ? ಇದಕ್ಕಿಂತ ಬೇಜಾರಿನ ಸಂಗತಿ ಏನಿದೆ?ಒಂದು ವೇಳೆ ನೀವು ಈ ಮಾತನ್ನು ನಿಮ್ಮ ಸಂಗಾತಿಗೆ ಹೇಳಿದ್ದರೆ...ನೀವು ಪ್ರೀತಿ ಮಾಡಿದ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಪ್ರೀತಿಯನ್ನು ಸ್ವೀಕರಿಸಿ, ನಿಮಗೆ ಪ್ರೀತಿ ಕೊಟ್ಟದ್ದು ಇದೇ ಸಂಗಾತಿಯಲ್ಲವೆ? ಆ ಸಂಗಾತಿಯನ್ನು ಅಷ್ಟು ಬೇಗ ದ್ವೇಷಿಸಲು ನಿಮ್ಮಿಂದ ಹೇಗೆ ಸಾಧ್ಯವಾಯಿತು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋಗಿ..ಮುಂದೆಂದೂ ನೀವು ಈ ವಾಕ್ಯವನ್ನು ಬಳಸುವುದಿಲ್ಲ.

ಪರಸ್ಪರ ಗೌರವ ಇರಲಿ:  ದಾಂಪತ್ಯದಲ್ಲಿ ಪ್ರೀತಿಯೊಂದಿದ್ದರೆ ಸಾಲದು. ಪರಸ್ಪರ ಗೌರವವೂ ಇರಬೇಕು. ಇಲ್ಲಿ ಹೆಣ್ಣು ಮತ್ತು ಗಂಡು ಸರಿ ಸಮಾನರು. ಯಾವಾಗ ನಾನು ಗಂಡು ನಾನೇ ಮೇಲು ಅಥವಾ ನಾನು ಹೆಣ್ಣು ನಾನು ಏನು ಬೇಕಾದರೂ ಮಾಡಬಲ್ಲೆ ಎಂಬ ದರ್ಪ ಬಂದು ಬಿಡುತ್ತೋ ಅಲ್ಲಿ ದಾಂಪತ್ಯ ಹಾಳಾಗಿಬಿಡುತ್ತದೆ. ನಿಮ್ಮ ಗಂಡನಿಗೆ ಯಾವುದು ಇಷ್ಟವೋ ಅಥವಾ ಹೆಂಡತಿಗೆ ಯಾವುದು ಇಷ್ಟವೋ ಅದನ್ನರಿತು ಬಾಳಿ. ತಪ್ಪಾದಾಗ ಪ್ರೀತಿಯಿಂದಲೇ ಅದನ್ನು ಹೇಳಿ, ತಿದ್ದಿಕೊಳ್ಳಲು ಅವಕಾಶ ಕೊಡಿ. ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದಕ್ಕಿಂತ ಖುಷಿ ಬೇರೇನಿದೆ ಹೇಳಿ?

ಮಕ್ಕಳ ಖುಷಿಯೂ ಇರಲಿ: ಸುಖ ದಾಂಪತ್ಯ ಎಂದರೆ ಅಲ್ಲಿ ಮಕ್ಕಳಿರಬೇಕು. ಒಂದು ಮಗುವಾಗಿ ಬಿಟ್ಟರೆ ಸಾಕು ಎಲ್ಲ ಸಮಸ್ಯೆಯೂ ಪರಿಹಾರ ಆಗುತ್ತೆ ಎಂಬುದನ್ನು ನಾವು ಕೇಳಿದ್ದೇವೆ. ಸಮಸ್ಯೆ ಪರಿಹಾರಕ್ಕಾಗಿ ಮಕ್ಕಳು ಮಾಡಿಕೊಳ್ಳುವುದು ಬೇಡ. ಮಕ್ಕಳು ಪ್ರೀತಿಯ ಸಂಕೇತವಾಗಿರಲಿ. ದಾಂಪತ್ಯದಲ್ಲಿ ಪ್ರೀತಿ ಮಾತ್ರವಲ್ಲ ದೈಹಿಕ ಸುಖವೂ ಮುಖ್ಯ.


-ಅಂಜಲಿ




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com