ಮನೆ ಮುಂದೆ ಹಾಕುವ ಶುಭ ಸೂಚಕ ರಂಗೋಲಿ

ಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭದ ಸಂಕೇತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭದ ಸಂಕೇತ. ರಂಗೋಲಿ ಇಲ್ಲದ ಮನೆ ಅಂದರೆ ಅದು ಅಶುಭ ಎಂಬ ನಂಬಿಕೆ. ಹಿಂದೆಲ್ಲಾ ರಂಗೋಲಿಯಿಲ್ಲದ ಮನೆಗೆ ಸಾಧು ಸಂತರು ಭೇಟಿ ನೀಡುತ್ತಿರಲಿಲ್ಲವಂತೆ. ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ.

ಗೃಹಿಣಿ ಮುಂಜಾನೆ ಸ್ನಾನ ಮಾಡಿ, ಎಲ್ಲಕ್ಕಿಂತ ಮೊದಲು ಮಾಡುವ ಕೆಲಸವೇ ಮನೆಯ ಮುಂದಿನ ಬಾಗಿಲು ಸಾರಿಸಿ ರಂಗೋಲಿ ಇಡುವುದು. ರಂಗೋಲಿ ಇಟ್ಟ ನಂತರ ತುಳಸಿ ಪೂಜೆ ಮಾಡಿಯೇ ಉಳಿದ ಕೆಲಸಗಳಿಗೆ ಕೈ ಹಾಕುವ ಸಂಪ್ರದಾಯ. ಶುಭ ಕಾರ್ಯಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಮನೆಯ ಮುಂದೆ ವಿಶೇಷವಾಗಿ ರಂಗೋಲಿ ಹಾಕುವುದೇ ಒಂದು ಸಂಭ್ರಮ. ರಂಗೋಲಿಯನ್ನು, ರಂಗೋಲಿ ಪುಡಿ, ಅಕ್ಕಿ ಹಿಟ್ಟು, ಹೂವು ಮುಂತಾದವುಗಳಿಂದ ಹಾಕಲಾಗುತ್ತದೆ

ರಂಗೋಲಿಗೆ ಸುಮಾರು 5000 ವರ್ಷಗಳ ಇತಿಹಾಸವಿದೆ. ಸಿಂಧೂ ನಾಗರಿಕತೆಯ ಸಂದರ್ಭದಲ್ಲಿಯೂ ಅಲ್ಲಿಯ ಜನರಿಗೆ ರಂಗೋಲಿ ಕಲೆ ಗೊತ್ತಿತ್ತು. ಅವರು ಸಹ ಮುಂಜಾನೆ ಮನೆಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿ ಹಾಕುವ ಸಂಸ್ಕೃತಿ ರೂಢಿಯಲ್ಲಿತ್ತು. ಆ ಕಾಲದಿಂದಲೇ ರಂಗೋಲಿ ಕಲೆ ಭಾರತೀಯ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿದೆ.

ರಂಗೋಲಿ ನಮ್ಮ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಕನ್ಯಾಕುಮಾರಿಯಿಂದ ಹಿಡಿದು, ಹಿಮಾಲಯದವರೆಗಿನ ವಿವಿಧ ಹಿಂದೂ ಸಂಸ್ಕೃತಿಗಳಲ್ಲಿಯೂ ರಂಗೋಲಿ ಬಿಡಿಸಲಾಗುತ್ತದೆ. ಬಹಳಷ್ಟು ಬುಡಕಟ್ಟು ಜನಾಂಗಗಳಲ್ಲಿ ಅತ್ಯಂತ ಅಪರೂಪದ ರಂಗೋಲಿಗಳು ಇಂದಿಗೂ ಜೀವಂತವಾಗಿವೆ.  ಕೆಲವು ಕಡೆ ವಿಶೇಷವಾಗಿ ಗೋಡೆಯ ಮೇಲೆ ರಂಗೋಲಿ ಬಿಡಿಸಲಾಗುತ್ತದೆ.

ಕೇರಳದಲ್ಲಿ ನಡೆಯುವ ಓಣಂ ಹಬ್ಬಕ್ಕೆ ವಿಶೇಷವಾಗಿ ಹೂವುಗಳಿಂದ ಮಾಡಿದ ಪೂಕಳಂ ನಿಂದ ಸ್ವಾಗತಿಸುತ್ತಾರೆ.  ಓಣಂ ಎಂದರೆ ಅಂದು ವಾಮನನನ್ನು ಹೂವುಗಳ ರಂಗೋಲಿ ಮಾಡಿ ಸ್ವಾಗತ ಕೋರುವ ಹಬ್ಬವಾಗಿ ವಿಶೇಷತೆ ಪಡೆದಿದೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷವಾಗಿ ದೇವಾನು ದೇವತೆಗಳನ್ನು ಸ್ವಾಗತಿಸುವ, ಮನೆಗೆ ಬರಮಾಡಿಕೊಳ್ಳುವ ಸಲುವಾಗಿ ರಂಗೋಲಿಯಿಂದ ಮನೆಯನ್ನು ಅಲಂಕರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಈ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಿ ರಂಗೋಲಿಯ ಮಹತ್ವ ಸಾರಬೇಕಾದ ಅನಿವಾರ್ಯತೆ ಎದುರಾಗಿದೆ.


- ಶಿಲ್ಪ.ಡಿ ಚಕ್ಕೆರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com