ಜಾಣೆಯರಿಗಾಗಿ....

`ಜಾಣೆಯಾಗಿರು ನನ್ನ ಮಲ್ಲಿಗೆ... ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ.....' - ಚಿಕ್ಕವಳಿದ್ದಾಗ ರೇಡಿಯೋದಲ್ಲಿ ಈ ಹಾಡು...
ಸಾಮಾಜಿಕ ಜಾಲ ತಾಣದಲ್ಲಿ ಮಹಿಳೆ
ಸಾಮಾಜಿಕ ಜಾಲ ತಾಣದಲ್ಲಿ ಮಹಿಳೆ

`ಜಾಣೆಯಾಗಿರು ನನ್ನ ಮಲ್ಲಿಗೆ... ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ.....' - ಚಿಕ್ಕವಳಿದ್ದಾಗ ರೇಡಿಯೋದಲ್ಲಿ ಈ ಹಾಡು ಆಗಾಗ ಕೇಳಿ ಬರುತ್ತಿತ್ತು. ಪಿ.ಸುಶೀಲಾ ಅವರ ಕಂಠದಲ್ಲಿದ್ದ ಈ ಸುಶ್ರಾವ್ಯ ಹಾಡನ್ನು ಬಹುವಾಗಿ ಮೆಚ್ಚಿದ್ದೆ, ಈಗಲೂ ಇಷ್ಟವೇ. ಆದರೆ ಅಂದು, ಆ ಕಾಲಕ್ಕೆ ತಕ್ಕಂತೇ ಸರ್ವರೂ ಅರ್ಥೈಸಿಕೊಂಡಿದ್ದಕೊಂಡಿದ್ದ ಈ ಹಾಡಿನ ಒಳಾರ್ಥ ಮೊದ ಮೊದಲು ಅಷ್ಟು ಅರ್ಥವಾಗದಿದ್ದರೂ, ಕ್ರಮೇಣ ಹೈಸ್ಕೂಲು ಮೆಟ್ಟಲು ಹತ್ತುವಾಗ ಸ್ಪಷ್ಟವಾಗುತ್ತಾ ಹೋಗಿ ಕಿರಿಕಿರಿ ಅನಿಸತೊಡಗಿತ್ತು. ಒಬ್ಬಳೇ ಜಾಸ್ತಿ ಹೊತ್ತು ಅಂಗಳದಲ್ಲಿ ಕೂತಿರಬೇಡ, ಸಹಪಾಠಿಯ ಜೊತೆ ಒಂಟಿಯಾಗಿ ಚರ್ಚೆ ಬೇಡ, ಒಂಟಿಯಾಗಿ ಹೆಣ್ಣು ರಾತ್ರಿ ಹೊತ್ತು ತಿರುಗೋದು ಅಪಾಯಕಾರಿ, ಹೆಣ್ಣು ಕಟ್ಟೆಚ್ಚರದಲ್ಲಿರಬೇಕು... ಇತ್ಯಾದಿ ನಿಯಮಗಳನ್ನು, ಆದೇಶಗಳನ್ನು, ಆಜ್ಞೆಗಳನ್ನು ಅಜ್ಜ, ಅಜ್ಜಿ, ಹೆತ್ತವರು, ಹಿರಿಯರೆಲ್ಲಾ ಬೆಳೆಯುತ್ತಿರುವ, ಹರೆಯದ ಹಣ್ಮಕ್ಕಳಿಗೆ ಹಾಕುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ್ದೆ. ಓಹೋ, ಹೆಣ್ಣಾಗಿ ಹುಟ್ಟಿರೋದಕ್ಕಾಗಿ ಇಷ್ಟೆಲ್ಲಾ ಬೇಡಿಗಳೇ? ಜಾಣೆಯಾಗೋದು ಅವಳ ಹಕ್ಕು ಮಾತ್ರವೇ? ಆಕೆಗೆ ತೊಂದರೆ ಆಗದಂತೇ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳೋದು ಗಂಡುಮಕ್ಕಳ ಜಾಣ್ಮೆಯಾಕಾಗಬಾರದು? ಈ ಎಲ್ಲಾ ಚಿಂತನೆಗಳನ್ನು, ಸವಾಲು ಹಾಗೂ ತಾಕಲಾಟಗಳನ್ನು ಪದವಿಪೂರ್ವ ಕಾಲೇಜಿನ ನನ್ನ ಡಿಬೇಟಿನಲ್ಲಿ ಮಾಡಿ ಪ್ರೈಸ್ಗಿಟ್ಟಿಸಿದ್ದರೂ, ಸ್ಪಷ್ಟ, ಚೊಕ್ಕ ಉತ್ತರಗಳು ಮಾತ್ರ ಅಂದು ಸಿಕ್ಕಿರಲಿಲ್ಲ!

21ನೇ ಶತಮಾನಕ್ಕೆ ಕಾಲಿರಿಸಿದ್ದರೂ, ನಾವು ಅಂದರೆ ಮಹಿಳೆಯರು ಮಾತ್ರ ಜಾಣ್ಮೆಯನ್ನು ಕಲಿತಷ್ಟೂ ಸಾಕಾಗುತ್ತಿಲ್ಲ ಅನ್ನೋದೇ ವಿಷಾದದ ವಿಷಯ. ಇದರರ್ಥ ಎಲ್ಲಾ ಗಂಡಸರೂ ಅವಳನ್ನು ಶೋಷಿಸಲೋಸುಗವೇ ಇದ್ದವರು ಎಂದೋ, ಬಹು ಪಾಲು ಗಂಡಸರು ಅವಳನ್ನು ದಮನಿಸುತ್ತಿದ್ದಾರೆಂದೋ ಅಲ್ಲವೇ ಅಲ್ಲಾ! ಕೊಲ್ಲುವ, ಅಪಮಾನಿಸುವ ಮನಸುಗಳು, ಕೈಗಳು ನೂರಿದ್ದರೆ, ಕಾಪಿಡುವಂಥವು, ಸಮ್ಮಾನಿಸುವಂಥವು ಸಾವಿರವಿವೆ. ಆದರೆ ದಿನೇ ದಿನೇ ಹೆಚ್ಚುತ್ತಿರುವ ಅತ್ಯಾಚಾರ, ಮಾನಸಿಕ ಕಿರುಕುಳಗಳ ಪ್ರಕರಣಗಳು ಸಮಾಜವನ್ನು ತತ್ತರಿಸುವೆಂತೆ ಮಾಡುತ್ತಿವೆ. ಹಾಗಾಗಿ ಇಂದು, ಈ ಹೊತ್ತೂ, ತನ್ನನ್ನು ತಾನು ಕಾಪಾಡಿಕೊಳ್ಳಲು, ತನ್ನಂಥವರ ಮಾನ-ಅಭಿಮಾನಗಳನ್ನು ಕಾಪಿಡಲು ಬೇಕಾದಂಥ ಜಾಣ್ಮೆಯನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಿರುವ ಅನಿವಾರ್ಯತೆ ಮಹಿಳೆಗಿದೆ. ಕಾಲ ಬದಲಾದಂತೇ ಅವಳನ್ನು ಶೋಷಿಸುವ ಕೈಗಳೂ ಬದಲಾಗಿವೆ ಮತ್ತು ಈ ಕೈಗಳಲ್ಲಿ ಹೆಣ್ಣು-ಗಂಡೆಂಬ ಬೇಧವೇ ಇಲ್ಲವಾಗಿರುವುದು ದೊಡ್ಡ ದುರಂತ. ಇಂದಿನ ಯುಗದಲ್ಲಿ ಇರುವುದು ಸಬಲ ಮತ್ತು ದುರ್ಬಲ ಅನ್ನೋ ಎರಡೇ ಗುಂಪು. ಹೆಣ್ಣಿರಲಿ, ಗಂಡಿರಲಿ ಸಬಲರು ಗೆಲ್ಲುತ್ತಾರೆ, ದುರ್ಬಲರು ಕುಸಿಯುತ್ತಾರೆ. ಇಲ್ಲಿ ದೈಹಿಕ ಬಲಾಢ್ಯತೆಗಿಂತ ಮಾನಸಿಕ ಸದೃಢತೆ, ಆತ್ಮವಿಶ್ವಾಸದ ಕುರಿತೇ ಹೇಳುತ್ತಿದ್ದೇನೆ. ಹೆಣ್ಣು ಮಾನಸಿಕವಾಗಿ ಅದೆಷ್ಟು ಸಶಕ್ತಳೆಂದರೆ ಇದರಿಂದ ಆಕೆ ತನ್ನ ಪ್ರಕೃತಿದತ್ತವಾದ ಸಹಜ ಸುಕೋಮಲ ದೈಹಿಕ ದುರ್ಬಲತೆಯನ್ನೂ ಮೆಟ್ಟಿನಿಲ್ಲಬಲ್ಲಳು. ಅಂಥದ್ದರಲ್ಲಿ ಇನ್ನೂ ತಾನು ನಿರ್ಬಲಳು, ಹೋರಾಡಲಾರೆ, ತನ್ನಿಂದಾಗದು ಎಂಬ ಸ್ವ ಮರುಕದಿಂದ, ಕುಬ್ಜತೆಯಿಂದ ಸಂಪೂರ್ಣ ಹೊರಬರುವ ಜಾಣ್ಮೆ ಅವಳದ್ದಾಗಿದೆ. ಹೌದು.. "ಜಾಣೆಯಾಗಿರು ನನ್ನ ಮಲ್ಲಿಗೆ.." ಹಾಡು ಇಂದೂ ಪ್ರಸ್ತುತವೇ ಆಗಿದೆ... ಆದರೆ ಹೊಸಾರ್ಥದಲ್ಲಿ. ಗಂಡಿಂದ ಅಥವಾ ಆಕೆಯನ್ನು ತುಳಿಯಲೆತ್ನಿಸುತ್ತಿರುವವರಿಂದ ಕಾಪಾಡಿಕೊಳ್ಳಲು, ಅವರಿಂದ ದೂರವಿದ್ದೋ, ಮನೆಯೊಳಗೇ ಹೆದರಿ ಕುಳಿತೋ ಜಾಣ್ಮೆ ತೋರುವ ಕಾಲ ಇದಲ್ಲಾ. ಇಂದು ಎಲ್ಲಾ ರೀತಿಯಲ್ಲೂ ತನ್ನನ್ನು ತಾನು ಸಬಲಗೊಳಿಸಿಕೊಂಡು, ಸ್ಥೈರ್ಯ, ಧೈರ್ಯಗಳಿಂದ ಎದುರಾಗುವ ಎಡರು ತೊಡರುಗಳ ನಿವಾರಿಸಿಕೊಳ್ಳುತ್ತಾ, ತುಳಿಯಲೆತ್ನಿಸಿದಾಗೆಲ್ಲಾ ಪುಟಿ ಪುಟಿದು ಜಿಗಿವಂಥ ಜಾಣ್ಮೆಯನ್ನು ಆಕೆ ರೂಢಿಸಿಕೊಳ್ಳಬೇಕಾಗಿದೆ.

ಬೆಳಕು ಮಂದವಾದಷ್ಟೂ ಕತ್ತಲು ಪ್ರಕಾಶಗೊಳ್ಳುತ್ತದೆ. ಈಗ ಶೋಷಿಸುವ ಕೈಗಳೂ ಜಾಣ್ಮೆಯನ್ನು ಹೆಚ್ಚಾಗಿಸಿಕೊಂಡಂತಿವೆ. ತಾಂತ್ರಿಕತೆ ಬೆಳೆದಂತೇ ಅದರಿಂದೆಷ್ಟು ಉಪಯೋಗಗಳಾಗಿವೆಯೋ ಅಷ್ಟೇ ಕೆಡುಕುಗಳೂ ಅದರೆ ಬೆನ್ನು ಬೆನ್ನಿಗೆ ಹುಟ್ಟಿಕೊಂಡಿವೆ. ಈಗೀಗ ಸಾಮಾಜಿಕ ಜಾಲ ತಾಣಗಳು ಧನಾತ್ಮಕತೆಯನ್ನು ತುಂಬುವುದಕ್ಕಿಂತ ಹೆಚ್ಚಾಗಿ ಋಣಾತ್ಮಕತೆಯನ್ನು ಹೆಚ್ಚಿಸುವಂತಿವೆ. ಮಹಿಳೆಯರ ಜೊತೆ ಅಶ್ಲೀಲವಾಗಿ ಸಂಭಾಷಣೆಗಿಳಿದು, ಅವಳನ್ನು ಮಾನಸಿಕವಾಗಿ ಹಿಂಸಿಸಿ, ಜರ್ಜರಿತಗೊಳಿಸುವ ಮುಖವಾಡಗಳು, ಮುಖೇಡಿಗಳು ಜಾಸ್ತಿಯಾಗುತ್ತಿದ್ದಾರೆ. ಫೇಕ್ ಮುಖಗೋಡೆಯ (ಫೇಸ್ಬುಕ್) ಪ್ರೊಫೈಲ್ ತೆರೆದುಕೊಂಡು, ಇಲ್ಲಾ ತನ್ನದೇ ಸಭ್ಯ ಮುಖವನ್ನು ಎದುರಿಗೆ ತೋರಿಸುತ್ತಾ, ಅಮಾಯಕ ಹೆಣ್ಮಕ್ಕಳನ್ನು, ಹದಿಹರೆಯದ ಹುಡುಗಿಯರನ್ನು ನಯವಾಗಿ ಬಲೆಗೆ ಕೆಡವಿಕೊಂಡು ಅಂತರ್ಜಾಲದಲ್ಲೇ ತಮ್ಮ ತೀಟೆ ತೀರಿಸಿಕೊಳ್ಳುವ ವ್ಯಗ್ರ, ಕೊಳಕು ಮನಸುಗಳು ನಾಯಿಕೊಡೆಗಳಂತೇ ಎದ್ದಿವೆ. ಇಂಥವರ ವಾಸನೆ ಮೊದಲೇ ಅಡರಿ, ಎಚ್ಚೆತ್ತುಕೊಳ್ಳುವ ಮನಸ್ಸುಗಳು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಿ, ಬ್ಲಾಕ್ ಮಾಡಿ, ನಿರುಮ್ಮಳವಾಗುತ್ತವೆ. ಆದರೆ ಅರಿಯದ ಮನಸುಗಳು ಸುಳಿಯೊಳಗೇ ಕೊಚ್ಚಿ ಹೋಗಿ ಒಮ್ಮೊಮ್ಮೆ ಭೇಟಿಯೂ ಆಗಲು ಹೋಗಿ ಅತಿ ದೊಡ್ಡ ಮೋಸಕ್ಕೆ ಒಳಗಾಗುತ್ತವೆ. ನಮ್ಮ ಅಂದರೆ ಹಣ್ಮಕ್ಕಳ ಜಾಣ್ಮೆ ಬೇಕಾಗುವುದೇ ಇಲ್ಲಿ. ಸಾಮಾಜಿಕ ಜಾಲ ತಾಣಗಳಲ್ಲಿ ವ್ಯವಹರಿಸುವಾಗ ಸಾಕಷ್ಟು ಜಾಗೃತೆ ವಹಿಸಬೇಕಾದ್ದು ಪ್ರಥಮ ಆದ್ಯತೆಯಾಗಿದೆ. (ಗಂಡು ಮಕ್ಕಳು ಇದರಲ್ಲಿ ಮೋಸ ಹೋಗರು ಎಂದು ಹೇಳುತ್ತಿಲ್ಲಾ.. ಆದರೆ ಇಂಥಹ ಘಟನಾವಳಿಗಳ ಅನುಪಾತ ತೆಗೆದುಕೊಂಡರೆ ಹೆಣ್ಮಕ್ಕಳ ಮೇಲಾಗುವ ದುರಂತಗಳೇ ಹೆಚ್ಚು.)

ಮಹಿಳೆಯನ್ನು ಮಹಿಳೆಯೇ ಶೋಷಿಸುವ ಅದೆಷ್ಟೋ ಪ್ರಕರಣಗಳೂ ಸಾಕಷ್ಟಿವೆ. ಮೊತ್ತ ಮೊದಲು ನಮ್ಮ ನಮ್ಮಲ್ಲೇ ಸಹೃದಯತೆ, ಸಹಮತ, ಸಹಕಾರ ಉಂಟಾಗದೇ ಸಮಸ್ಯೆಯ ನಿವಾರಣೆ ಕಷ್ಟ ಸಾಧ್ಯ. ಹೆಣ್ಣಿನ ಚಾರಿತ್ರ್ಯ ಎಂದರೆ ಬಟ್ಟೆಯಂತೇ... ಮುಳ್ಳು ಅದರ ಮೇಲೆ ಬಿದ್ದರೂ, ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ... ಎಂಬ ಹಳೆಯಕಾಲದ ಅರ್ಧಂಬರ್ಧ ಹೇಳಿಕೆಗಳನ್ನು ಪರಿಷ್ಕರಿಸಬೇಕಾಗಿದೆ. ಆಕೆಯನ್ನು ಚುಚ್ಚಿ, ಘಾಸಿಗೊಳಿಸಿ, ಹಿಂಸಿಸಲೆತ್ನಿಸುವ ಮುಳ್ಳುಗಳನ್ನು ಎಲ್ಲಾ ಸಹೃದಯರೂ ಒಟ್ಟುಗೂಡಿ ದೃಢ ನಿಶ್ಚಯದಿಂದ ಚಾಣಾಕ್ಯನಂತೇ ಬುಡ ಸಮೇತು ಕಿತ್ತು, ಬೆಂಕಿಯಿತ್ತು ಸುಟ್ಟು ಬಿಡುವ ಪಣತೊಡಬೇಕಾಗಿದೆ. ನಮ್ಮ ಜಾಣ್ಮೆ, ಬರುವ ಪರಿಸ್ಥಿಯನ್ನು ಎದುರಿಸುವುದರಲ್ಲಿ ಹಾಗೂ ಬಿಗಡಾಯಿಸಿದ ಪರಿಸ್ಥಿಯನ್ನು ನಿಭಾಯಿಸುವುದರಲ್ಲಿದೆ. ಚಾರಿತ್ರ್ಯವೆನ್ನೋದು ಸಿಕ್ಕ ಸಿಕ್ಕವರೆಲ್ಲಾ ಹರಿವಂತ ಬಟ್ಟೆಯಂತೂ ಅಲ್ಲಾ. ಅದು ಮನಃಸಾಕ್ಷಿಗೆ ಸಂಬಂಧಿಸಿದ್ದು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಮನೋಭಾವದಿಂದ ಹೊರಬಂದು, ತನ್ನ ನೋವಿಗೆ ಕಾರಣೀಭೂತರಾದವರಿಗೆ ಪ್ರತಿಘಾತ ಕೊಡುವ ನಿಟ್ಟಿನಲ್ಲಿ ಹೆಣ್ಣು ಜಾಣ್ಮೆ ಮೆರೆಯಬೇಕಾಗಿದೆ. ಪ್ರಕೃತಿ-ಪುರುಷ ಸೇರಿದಾಗಲೇ ಸೃಷ್ಟಿ, ಸಮಷ್ಟಿ. ಅಂತೆಯೇ ಹೆಣ್ಣಿನ, ಹೆಣ್ಮನಸ್ಸಿನ ಎಲ್ಲರ ಮಾನ, ಅಭಿಮಾನಗಳ ರಕ್ಷಣೆಗೆ ಸರ್ವರೂ ಒಗ್ಗೂಡಬೇಕು. ಮಹಿಳೆ `ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾ ಶಕ್ತಿ ಸ್ವರೂಪಿಣಿ'ಯಾಗಬೇಕು. ಆಗಲೇ ಮುಂದೊಂದು ದಿನ ಈ ಏಕದಿನ ಪ್ರದರ್ಶನವಾಗಷ್ಟೇ ಉಳಿದಿಹ `ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಯಂಥ ಕಾರ್ಯಕ್ರಮಗಳು ಇಲ್ಲವಾಗಿಬಿಡುವಂಥ ಸಾಮರಸ್ಯತೆ, ಸ್ವಾಸ್ಥ್ಯ ಸಮಾಜದಲ್ಲಿ, ವಿಶ್ವದಲ್ಲಿ ಮೂಡಿಬರಬಲ್ಲುದು. ಅಂಥದ್ದೊಂದು ಸುದಿನದ ಕನಸಿನೊಡನೆ, ಆಶಯದೊಡನೆ, ಎಲ್ಲಾ ಮಹಿಳೆಯರಿಗೂ, ಹೆಣ್ಮಕ್ಕಳಿಗೂ, ಹೆಣ್ಮಕ್ಕಳ ಪ್ರತಿ ಗೌರವ ಆದರ ತೋರಿ ಅವರ ಅಭಿವೃದ್ಧಿಯನ್ನು ಹಾರೈಸುವೆ ಪುರುಷರಿಗೂ `ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಯ ಹಾರ್ದಿಕ  ಶುಭಾಶಯಗಳು.

-ತೇಜಸ್ವಿನಿ ಹೆಗಡೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com