

ಢಾಕಾ: ಅಮ್ಮನ ಗರ್ಭದಲ್ಲಿರುವಾಗ ಅಮ್ಮನ ಹೊಟ್ಟೆಗೇ ಗುಂಡು ತಗಲಿತ್ತು. ಆದರೆ ಹೊಟ್ಟೆಯಲ್ಲಿದ್ದ ಪಾಪು ಪವಾಡ ಸದೃಶವಾಗಿ ಬದುಕುಳಿದಿದೆ.
ಬಾಂಗ್ಲಾದೇಶದ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಮಗು ಜನಿಸಿದ್ದು, ಮಗುವಿಗೆ ಸುರಯ್ಯಾ ಎಂದು ಹೆಸರಿಡಲಾಗಿದೆ.
ಅಮ್ಮನ ಹೊಟ್ಟೆ ಹೊಕ್ಕ ಗುಂಡು ಸುರಯ್ಯಾಳ ಕೈಗೆ ತಾಕಿ, ಕಣ್ಣಿಗೂ ಗಾಯವನ್ನುಂಟು ಮಾಡಿತ್ತು. ಮಗು ಬದುಕುಳಿಯಲ್ಲ ಎಂಬ ಭಯವಿದ್ದರೂ, 23 ದಿನಗಳ ನಂತರ ಸುರಯ್ಯಾ ಪವಾಡ ಸದೃಶ ಎಂಬಂತೆ ಕಣ್ಣು ತೆರೆದಿದ್ದಾಳೆ. ಕಳೆದ 23 ದಿನಗಳಿಂದ ಸುರಯ್ಯಾಳನ್ನು ಐಸಿಯುನಲ್ಲೇ ಇಟ್ಟು ನಿಗಾ ವಹಿಸಲಾಗಿತ್ತು.
ಬಾಂಗ್ಲಾದೇಶದಲ್ಲಿ ರಾಜಕೀಯ ಪಕ್ಷಗಳ ನಡುವಿನ ಸಂಘರ್ಷ ನಡೆಯುತ್ತಿದ್ದ ವೇಳೆ ನಜ್ಮಾ ಬೇಗಂ ಎಂಬಾಕೆಯ ಹೊಟ್ಟೆಗೆ ಗುಂಡು ತಾಗಿತ್ತು. ನಜ್ಮಾ ಆಗ ಎಂಟು ತಿಂಗಳ ಗರ್ಭಿಣಿ. ತಕ್ಷಣವೇ ನಜ್ಮಾಳನ್ನು ತುರ್ತು ಸಿಸೇರಿಯನ್ ಗೊಳಪಡಿಸಿ ಮಗುವನ್ನು ಹೊರ ತೆಗೆಯಲಾಗಿತ್ತು. ಆ ಶಸ್ತ್ರಕ್ರಿಯೆ ಮೂರು ಗಂಟೆಗಳ ಕಾಲ ನಡೆದಿತ್ತು. ಆದರೆ ಮಗು ಬದುಕುಳಿಯುವ ಬಗ್ಗೆ ವೈದ್ಯರಿಗೂ ಧೈರ್ಯವಿರಲಿಲ್ಲ. ತೀವ್ರ ನಿಗಾ ಘಟಕದಲ್ಲಿ ಮಗುವನ್ನು ಇರಿಸಿ, ಇದೀಗ 23 ದಿನಗಳ ನಂತರ ಮಗು ಸುರಯ್ಯಾ ಪ್ರಾಣಾಪಾಯದಿಂದ ಪಾರಾಗಿ ಎಲ್ಲರ ಖುಷಿಗೆ ಕಾರಣಳಾಗಿದ್ದಾಳೆ.