ತಾಪಶೃಂಗಕ್ಕೆ ಇಂದು ತೆರೆ, ಇತ್ಯರ್ಥಗೊಳ್ಳದ ಕರಡು

ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ವಿಶ್ವ ಹವಾಮಾನ ಶೃಂಗ ಶುಕ್ರವಾರ ಮುಕ್ತಾಯವಾಗಲಿದೆ. ಅದಕ್ಕೆ...
ಪ್ರಕಾಶ ಜಾವಡೇಕರ್
ಪ್ರಕಾಶ ಜಾವಡೇಕರ್
Updated on
ಪ್ಯಾರಿಸ್: ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ವಿಶ್ವ ಹವಾಮಾನ ಶೃಂಗ ಶುಕ್ರವಾರ ಮುಕ್ತಾಯವಾಗಲಿದೆ. ಅದಕ್ಕೆ ಪೂರಕವಾಗಿ ಕರಡು ನಿರ್ಣಯ ಇನ್ನೂ ಅಂಗೀಕಾರವಾಗಿಲ್ಲ. ಈ ನಿಟ್ಟಿನಲ್ಲಿ ಭಾರತದ ಮಹತ್ವದ ಪಾತ್ರ ಮತ್ತೆ ಸಾಬೀತಾಗಿದೆ. 
ಅಭಿವೃದ್ಧಿಶೀಲ ದೇಶ ಭಾರತದ ಪಾತ್ರ ಮಹತ್ವದ್ದಾಗಿದ್ದು, ಹವಾಮಾನ ಕರಡು ಪ್ರಸ್ತಾಪಕ್ಕೆ ಪ್ರಮುಖ ಸದಸ್ಯ ದೇಶಗಳ ಒಪ್ಪಿಗೆ ಅನಿವಾರ್ಯವಾಗಿದೆ. ಮೋದಿ ಜೊತೆ ಒಬಾಮ ಮಾತಾಡುವುದಕ್ಕೆ ಮುನ್ನ ಭಾರತದ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಹಾಗೂ ಅಮೆರಿಕದ ಪರಿಸರ ಕಾರ್ಯದರ್ಶಿ ಜಾನ್ ಕೆರಿ ಪ್ಯಾರಿಸ್‍ನಲ್ಲಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. 
ಆದರೆ, ಹಲವಾರು ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಉಭಯ ನಾಯಕರು ಒಪ್ಪಂದಕ್ಕೆ ಬರಲು ವಿಫ ಲರಾದರು. ಮುಖ್ಯವಾಗಿ, ಬದಲಾದ ಪರಿಸ್ಥಿತಿಯಲ್ಲಿ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ಪದಗಳ ಅರ್ಥ ನಿಷ್ಕರ್ಷೆ, ಹವಾಮಾನ ಕ್ರಿಯಾ ಯೋಜನೆಗಳ ಉದ್ದೇಶಿತ ಪುನರ್‍ವಿಮರ್ಶೆ ಪ್ರಮಾಣೀಕರಣದ ಬಗ್ಗೆ ಒಮ್ಮತ ಮೂಡಲಿಲ್ಲ. 
ಭಾರತ ಮತ್ತು ಅಮೆರಿಕದ ಸಮ್ಮತಿ ಇಲ್ಲದೇ ಪ್ಯಾರಿಸ್ ಕರಡು ಒಪ್ಪಂದ ಅಂತಿಮಗೊಳ್ಳುವುದು ಅಸಾಧ್ಯ. ಅದರಲ್ಲೂ ಸ್ವಚ್ಛ ಇಂಧನ ಮೂಲಕ್ಕೆ ನೆರವು ಹಾಗೂ ಇಂಗಾಲ ಉತ್ಪಾದನೆ ಮೇಲೆ ಮಿತಿ ಹೇರಿಕೆ ವಿಷಯಗಳು ಉಭಯ ದೇಶಗಳ ಹಣಕಾಸು ಪರಿಸ್ಥಿತಿ ಮೇಲೆ ನೇರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಎರಡೂ ದೇಶಗಳು ತಮ್ಮ ನಿಲುವಿಗೆ ಪಟ್ಟು ಹಿಡಿದಿವೆ. 
ಸ್ವಚ್ಛ ಇಂಧನ ಮೂಲಕ್ಕೆ ನೆರವು ನೀಡುವುದಕ್ಕೆ ಅಮೆರಿಕದ ಉಭಯ ಸದನಗಳು ಹಾಗೂ ಹಲವಾರು ರಾಜ್ಯಗಳ ನೇರ ವಿರೋಧ ಇದೆ. ಮುಂದಿನ ವರ್ಷ ಅಧ್ಯಕ್ಷೀಯ ಅವಧಿ ಮುಗಿಸುತ್ತಿರುವ ಒಬಾಮ, ಅಮೆರಿಕದ ಹಿತಾಸಕ್ತಿ ಬಲಿಕೊಟ್ಟ ಅಧ್ಯಕ್ಷ ಎಂದು ಕರೆಸಿಕೊಳ್ಳಲು ಸಿದ್ಧರಿಲ್ಲ. ಅದೇ ಸಮಯದಲ್ಲಿ, ಸ್ವಚ್ಛ ಇಂಧನ ಮೂಲಕ್ಕೆ ನೆರವು ಪಡೆದುಕೊಳ್ಳದಿದ್ದರೆ, ಭಾರತ ಅಂಥ ತಂತ್ರಜ್ಞಾನವನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಬೇಕಾಗುತ್ತದೆ. 
ಹಾಗೆ ಮಾಡದೇ ಇಲ್ಲವೇ ಈಗಿರುವ ರೀತಿಯಲ್ಲೇ ಇಂಧನ ಮೂಲಗಳನ್ನು ಬಳಸಿದರೆ, ಜಾಗತಿಕ ಹವಾಮಾನ ನಿಧಿಗೆ ಹೆಚ್ಚು ದೇಣಿಗೆ (ದಂಡ) ಕೊಡಬೇಕಾಗುತ್ತದೆ. ಅದಕ್ಕೆ ಭಾರತ ಸಿದ್ಧವಿಲ್ಲ. ಹವಾಮಾನ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಒಮ್ಮತದ ಕರಡು ಎಲ್ಲರ ಬಯಕೆಯಾಗಿದ್ದರೂ, ಈ ಕಾರಣಗಳಿಗಾಗಿ ಪ್ಯಾರಿಸ್‍ನ ಹವಾಮಾನ ಕರಡು ಅಂತಿಮಗೊಳ್ಳುತ್ತಿಲ್ಲ. 
ಚೀನಾದಲ್ಲಿ ಮರುಕಳಿಸಿದ ನೀಲಾಕಾಶ ತೀವ್ರ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಮಾಲಿನ್ಯಕಾರಿ ಕಾರ್ಖಾನೆಗಳ ಬಂದ್ ಹಾಗೂ ಖಾಸಗಿ ಕಾರುಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಎರಡು ದಿನಗಳ ರೆಡ್ ಅಲರ್ಟ್ ಘೋಷಿಸಿದ ಪರಿಣಾಮ, ಗುರುವಾರ ಬೀಜಿಂಗ್ ಜನತೆಗೆ ಮತ್ತೆ ನೀಲಾಕಾಶ ಗೋಚರವಾಯಿತು. 
ಭರದಿಂದ ಬೀಸಿದ ಗಾಳಿಯೂ ಮಾಲಿನ್ಯಕಾರಿ ವಾಯುಮಂಡಲವನ್ನು ಚದುರಿಸುವ ಮೂಲಕ, ಸ್ವ ಚ್ಛ ಆಗಸ ದರ್ಶನ ಮಾಡಿಸಿತು. ಈ ಹಿನ್ನೆಲೆಯಲ್ಲಿ, ಅತಿ ತೀವ್ರ ವಾಯುಮಾಲಿನ್ಯ ಸೂಚಿಸುವ ರೆಡ್ ಅಲರ್ಟ್ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳುವ ನಿರೀಕ್ಷೆ ಇದೆ. ಸುಮಾರು 400ರಷ್ಟಿದ್ದ ಪಿಎಂ 2.5 ತೇಲುಕಣಗಳ ಪ್ರಮಾಣ ಈಗ 100ಕ್ಕೆ ಇಳಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com