ಬಾಂಗ್ಲಾ ಕ್ರಿಕೆಟಿಗ ಶಹಾದತ್ ಹುಸೇನ್ ಗೆ 14 ವರ್ಷ ಜೈಲು

ಮನೆ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ, ಮಾನಸಿಕ ಹಿಂಸೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟಿಗ ಶಹಾದತ್‌ ಹುಸೇನ್‌ ಜೈಲು ಭೀತಿ ಎದುರಿಸುತ್ತಿದ್ದಾರೆ.
ಬಾಂಗ್ಲಾ ಕ್ರಿಕೆಟಿಗ ಶಹಾದತ್ ಹುಸೇನ್ (ಸಂಗ್ರಹ ಚಿತ್ರ)
ಬಾಂಗ್ಲಾ ಕ್ರಿಕೆಟಿಗ ಶಹಾದತ್ ಹುಸೇನ್ (ಸಂಗ್ರಹ ಚಿತ್ರ)

ಢಾಕಾ: ಮನೆ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ, ಮಾನಸಿಕ ಹಿಂಸೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟಿಗ ಶಹಾದತ್‌ ಹುಸೇನ್‌ ಜೈಲು ಭೀತಿ  ಎದುರಿಸುತ್ತಿದ್ದಾರೆ.

ಶಹಾದತ್ ಹುಸೇನ್ ಮತ್ತು ಅವರ ಪತ್ನಿ ವಿರುದ್ಧ ಬಾಲಕಾರ್ಮಿಕ ಕಾಯ್ದೆಯಡಿ ದೈಹಿಕ ಹಿಂಸೆ, ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪ  ಸಾಬೀತಾದರೆ ದಂಪತಿಗೆ 14 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಬಾಲಕಿಯ ವೈದ್ಯಕೀಯ ವರದಿ ಹೊರಬಿದ್ದಿದ್ದು, ಬಾಲಕಿ ಮೇಲೆ ಹಲ್ಲೆ  ನಡೆದಿರುವುದು ನಿಜ ಎಂದು ವರದಿಯಿಂದ ದೃಢಪಟ್ಟಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ಶಫೀಕರ್ ರೆಹಮಾನ್, ಪೊಲೀಸ್ ತನಿಖೆಯಲ್ಲಿ ಶಹಾದತ್ ಹುಸೇನ್ ಮತ್ತು ಆವರ ಪತ್ನಿ ಬಾಲಕಿಗೆ ದೈಹಿಕ ಹಿಂಸೆ ನೀಡಿರುವುದು  ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಬಾಲಕಿಗೆ ಮಾನಸಿಕ ಹಿಂಸೆ, ಹಲ್ಲೆ
ಕಳೆದ ತಿಂಗಳು ಮನೆಕೆಲಸದ 13 ವರ್ಷದ ಹುಡುಗಿಯ ಮೇಲೆ ಹಲ್ಲೆ ಮತ್ತು ಮಾನಸಿಕ ಹಿಂಸೆ ನೀಡಿರುವ ಭಾರೀ ಆರೋಪ ಹುಸೇನ್‌ ಮತ್ತು ಅವರ ಪತ್ನಿಯ ಮೇಲೆ ಇತ್ತು. ಢಾಕಾದ  ಬೀದಿಯೊಂದರಲ್ಲಿ ಅಳುತ್ತ ನಿಂತಿದ್ದ ಬಾಲಕಿಯನ್ನು ಪತ್ರಕರ್ತರೊಬ್ಬರು ಪೊಲೀಸ್‌ ಠಾಣೆಗೆ ಕರೆತಂದು ದೂರು ನೀಡಿಸಿದ್ದರು. ವಿಚಾರಣೆ ವೇಳೆ ಕ್ರಿಕೆಟಿಗ ಮತ್ತು ಆತನ ಪತ್ನಿ ನೀಡಿರುವ ಕಿರುಕುಳ  ಮತ್ತು ಹಲ್ಲೆ ಬಗ್ಗೆ ಬಾಲಕಿ ಪೊಲೀಸರಿಗೆ ವಿವರಿಸಿದ್ದಾಳೆ. ಬಾಲಕಿಯನ್ನು ಹೆಚ್ಚಿನ ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ವೈದ್ಯರು ಕೂಡ ಆಕೆಯ ಮೇಲೆ ಹಲ್ಲೆ ನಡೆದಿರುವುದನ್ನು  ಖಚಿತಪಡಿಸಿದ್ದರು. ಹೀಗಾಗಿ ಪೊಲೀಸರು ಆರೋಪಿಗಳನ್ನು ಬಂಧಿಸುವ ನಿರ್ಧಾರಕ್ಕೆ ಬಂದಿದ್ದರು.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಶಹಾದತ್ ಅವರ ಪತ್ನಿ ನಾಪತ್ತೆಯಾಗಿದ್ದರು. ಬಳಿಕ ಶೋಧ ನಡೆಸಿದ್ದ ಪೊಲೀಸರು ಅವರನ್ನು ಬಂಧಿಸಿದ್ದರು. ಶಹದಾತ್ ಕೂಡ ಕೆಲಕಾಲ ತಲೆ  ಮರೆಸಿಕೊಂಡಿದ್ದರು. ಪೊಲೀಸರಿಂದ ಸಮನ್ಸ್ ಜಾರಿಯಾದ ಬಳಿಕ ತಾವಾಗಿಯೇ ಪೊಲೀಸರೆದುರು ಶರಣಾಗಿದ್ದರು. ಬಾಂಗ್ಲಾ ಪರ ಶಹಾದತ್‌  ಹುಸೇನ್ 38 ಟೆಸ್ಟ್‌ ಮತ್ತು 51 ಏಕದಿನ  ಪಂದ್ಯವನ್ನು ಆಡಿದ್ದಾರೆ. ಈಗ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಶಹಾದತ್‌ ಮೇಲೆ ನಿಷೇಧ ಹೇರಿದ್ದು, ಪ್ರಕರಣ ಇತ್ಯರ್ಥವಾಗುವ ತನಕ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದೂರವಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com