ಆನಂದಭಾಷ್ಪದ ಮುಖಕ್ಕೆ ಆಕ್ಸ್ಫರ್ಡ್ ಗೌರವ

ಮಾತಿಗಿಂತ ಮೌನ ಶಕ್ತಿಶಾಲಿ. ಹಾಗೆಯೆೀ ಇಂದಿನ ಡಿಜಿಟಲ್ ಯುಗದಲ್ಲಿ ಅಕ್ಷರಕ್ಕಿಂತ ಎಮೋಜಿಗಳು ಹೆಚ್ಚು ಪರಿಣಾಮಕಾರಿ. ಈ ಮಾತಿಗೀಗ ಅಧಿಕೃತ ಮಾನ್ಯತೆಯೂ ಸಿಕ್ಕಂತಾಗಿದೆ...
ಫೇಸ್ ವಿಥ್ ಟಿಯರ್ಸ್ ಆಫ್ ಜಾಯ್ ಎಮೋಜಿ (ಸಂಗ್ರಹ ಚಿತ್ರ)
ಫೇಸ್ ವಿಥ್ ಟಿಯರ್ಸ್ ಆಫ್ ಜಾಯ್ ಎಮೋಜಿ (ಸಂಗ್ರಹ ಚಿತ್ರ)

ಲಂಡನ್: ಮಾತಿಗಿಂತ ಮೌನ ಶಕ್ತಿಶಾಲಿ. ಹಾಗೆಯೆೀ ಇಂದಿನ ಡಿಜಿಟಲ್ ಯುಗದಲ್ಲಿ ಅಕ್ಷರಕ್ಕಿಂತ ಎಮೋಜಿಗಳು ಹೆಚ್ಚು ಪರಿಣಾಮಕಾರಿ. ಈ ಮಾತಿಗೀಗ ಅಧಿಕೃತ ಮಾನ್ಯತೆಯೂ  ಸಿಕ್ಕಂತಾಗಿದೆ.

ಪ್ರತಿಷ್ಠಿತ ಆಕ್ಸ್ ಫರ್ಡ್ ಡಿಕ್ಷನರಿ `ಕಣ್ಣಲ್ಲಿ ನೀರು ಬರೋ ರೀತಿ ನಗುವ ಸ್ಮೈಲೀ' ಗೊಂಬೆಯನ್ನು ವರ್ಷದ ಪದ ಎಂದು ಘೋಷಿಸಿದೆ. ನಾವು ನೀವೆಲ್ಲ ಪ್ರತಿದಿನ ವಾಟ್ಸ್ ಆ್ಯಪ್‍ನಲ್ಲಿ ಹರಿದಾಡುವ  ಜೋಕ್‍ಗಳಿಗೆ ಪ್ರತಿಕ್ರಿಯಿಸುವಾಗ ಬಳಸುವ ನೀಲಿ ಕಣ್ಣೀರಿನ ಹಲ್ಲಿಲ್ಲದ ಬಾಯಿಯ ಭರ್ಜರಿ ನಗುಮುಖದ ಸ್ಮೈಲಿಯೊಂದು ಇದೀಗ ಆಕ್ಸ್ ಫರ್ಡ್ ವರ್ಷದ ಪದ ಎಂಬ ಗೌರವಕ್ಕೆ ಪಾತ್ರವಾಗಿದೆ. ಆಧುನಿಕ ಜಗತ್ತಿನಲ್ಲಿ ಸಂವಹನ ಮತ್ತು ಭಾವಾಭಿವ್ಯಕ್ತಿಯ ರೀತಿರಿವಾಜುಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿರುವುದನ್ನು ಗಮನಿಸಿರುವ ಆಕ್ಸ್ ಫರ್ಡ್ ನಿಘಂಟು ತಾನೂ ಅದಕ್ಕೆ ಸರಿಸಾಟಿಯಾಗಿ ನಡೆಯಲು ನಿರ್ಧರಿಸಿ, ಸ್ಮೈಲಿಗಳನ್ನೂ ಪದವೆಂದು ಪರಿಗಣಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಇದಕ್ಕೆ ಮುನ್ನವೂ ಆಕ್ಸ್ ಫರ್ಡ್ ತನ್ನ ನಿಘಂಟಿಗೆ ಆಡುಭಾಷೆಯ ಪದಗಳನ್ನು, ಅತಿ ಉಪಯೋಗಿಸಲ್ಪಡುವ ಜನಪ್ರಿಯ ಪಡ್ಡೆನುಡಿಗಳನ್ನು ಸೇರಿಸಿಕೊಳ್ಳುವ ಮೂಲಕ ಜನಕ್ಕೆ  ಹತ್ತಿರವಾಗಲೆತ್ನಿಸಿತ್ತು. ಈ ದಿಸೆಯಲ್ಲಿ ಫೇಸ್ ವಿಥ್ ಟಿಯರ್ಸ್ ಆಫ್ ಜಾಯ್ ಎಂಬ ವ್ಯಾಖ್ಯಾನ ಕೊಟ್ಟು ಆ ಎಮೋಜಿಯನ್ನು 2015ರ ವರ್ಡ್ ಆಫ್ ದ ಇಯರ್ ಎಂದು ಆಯ್ಕೆ ಮಾಡಿದೆ.

ಸ್ಪರ್ಧೆಯಲ್ಲಿದ್ದ ಇತರ ಪದಗಳು: ಇನ್ನೂ ಕೆಲವು ವಿಶೇಷ ಎಮೋಜಿ ಹಾಗೂ ಪದಗಳು ಸ್ಪರ್ಧೆಯಲ್ಲಿದ್ದವು. ಆ್ಯಡ್‍ಬ್ಲಾಕರ್, ಡಾರ್ಕ್‍ವೆಬ್, ಲಂಬರ್‍ಸೆಕ್ಷುಯಲ್, ಆನ್ ಫ್ಲೀಕ್. ರೆಫ್ಯೂಜೀ, ಬ್ರೆಕ್ಸಿಟ್ ಮತ್ತು  ಶೇರಿಂಗ್ ಎಕಾನಮಿ ಎಂಬ ಪದಗಳು ಪಟ್ಟಿಯಲ್ಲಿದ್ದವಾದರೂ, ಫೇಸ್ ವಿಥ್ ಟಿಯರ್ಸ್ ಆಫ್ ಜಾಯ್ ಮುಂದೆ ನಿಲ್ಲಲಾಗಿಲ್ಲ.

ವೆಬ್ ಸಂಸ್ಕೃತಿಯ ಅಗಾಧ ವ್ಯಾಪ್ತಿಯ ಪ್ರಭಾವದಿಂದ 2012ರಲ್ಲಿ ಜಿಫ್, 2013ರಲ್ಲಿ ಸೆಲ್ಫಿ ಪದಗಳು ವರ್ಷದ ಪದಗಳಾಗಿ ಆಯ್ಕೆಯಾಗಿದ್ದವು. ಕಳೆದ ವರ್ಷ ವೇಪ್ ಎಂಬ ಪದ ಆಯ್ಕೆಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com