ಟರ್ಕಿ ಹೊಡೆದುರುಳಿಸಿದ ರಷ್ಯಾ ಯುದ್ಧ ವಿಮಾನದ ಓರ್ವ ಪೈಲಟ್ ಸಾವು, ಮತ್ತೋರ್ವ ನಾಪತ್ತೆ
ಬೈರುತ್: ಟರ್ಕಿ ಸೇನೆ ಹೊಡೆದುರುಳಿಸಿದ ರಷ್ಯಾ ಯುದ್ಧ ವಿಮಾನದ ಓರ್ವ ಪೈಲಟ್ ಸಾವಿಗೀಡಾಗಿದ್ದು, ಮತ್ತೋರ್ವ ಪೈಲಟ್ ನಾಪತ್ತೆಯಾಗಿದ್ದಾನೆ ಎಂದು ಸಿರಿಯಾ ಸೇನಾ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ವಾಯುಗಡಿಯನ್ನು ಉಲ್ಲಂಘನೆ ಮಾಡಿ ರಷ್ಯಾದ ಯುದ್ಧ ವಿಮಾನ ಟರ್ಕಿ ವಾಯುಗಡಿಯಲ್ಲಿ ಹಾರಾಟ ಮಾಡುತ್ತಿದೆ ಎಂದು ಆರೋಪಿಸಿ ಟರ್ಕಿ ಸೇನೆ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿತ್ತಾದರೂ, ಇದೀಗ ಬಂದ ವರದಿಗಳ ಪ್ರಕಾರ ಓರ್ವ ಪೈಲಟ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸಿರಿಯಾ ಸೇನಾ ಮೂಲಗಳ ಪ್ರಕಾರ ಟರ್ಕಿ ಸೇನೆಯ ಕ್ಷಿಪಣಿ ಯುದ್ಧ ವಿಮಾನಕ್ಕೆ ತಾಗುತ್ತಿದ್ದಂತೆಯೇ ಇಬ್ಬರೂ ಪೈಲಟ್ ಗಳು ವಿಮಾನದಿಂದ ಹೊರಬರುವಲ್ಲಿ ಯಶಸ್ವಿಯಾದರು. ಪ್ಯಾರಾಚೂಟ್ ಸಹಾಯದಿಂದ ಹೊರಬಂದ ಇಬ್ಬರು ಪೈಲಟ್ ಗಳ ಪೈಕಿ ಓರ್ವ ಪೈಲಟ್ ಕೆಳಗೆ ಬರುತ್ತಿದ್ದಂತೆಯೇ ಬಂಡುಕೋರರು ಗುಂಡಿನ ದಾಳಿ ನಡೆಸಿ ಆತನನ್ನು ಕೊಂದು ಹಾಕಿದ್ದಾರೆ. ಆದರೆ ಮತ್ತೋರ್ವ ಪೈಲಟ್ ನಾಪತ್ತೆಯಾಗಿದ್ದು, ಆತನ ಕುರಿತು ಈ ವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸಿರಿಯಾದ ಸೇನಾ ಮೂಲಗಳು ತಿಳಿಸಿವೆ.
ಪ್ರಸ್ತುತ ಮೃತ ರಷ್ಯಾ ಯೋಧನ ಮೃತ ದೇಹ ಬಂಡುಕೋರರ ವಶದಲ್ಲಿದ್ದು, ಶವವನ್ನು ಬಂಡುಕೋರರ ನಿಯಂತ್ರಣ ಕೊಠಡಿಗೆ ರವಾನಿಸಲಾಗಿದೆ. ಮತ್ತು ನಾಪತ್ತೆಯಾಗಿರುವ ಮತ್ತೋರ್ವ ಪೈಲಟ್ ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಬಂಡುಕೋರರ ನಾಯಕ ಒಮರ್ ಜಬ್ಲಾವಿ ತಿಳಿಸಿದ್ದಾರೆ. ಘಟನೆಯನ್ನು ವಿಶ್ವ ಸಮುದಾಯ ಗಂಭೀರವಾಗಿ ಪರಿಗಣಿಸಿದ್ದು, ಇಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ನ್ಯಾಟೋ ಪಡೆಗಳ ಸೇನಾಧಿಕಾರಿಗಳು ತುರ್ತು ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ