1500 ಇಸಿಸ್ ಉಗ್ರರ ಮಾರಣ ಹೋಮ ನಡೆಸಿದ "ಇರಾಕಿ ರ‍್ಯಾಂಬೋ"

ಇರಾಕ್ ನ ಓರ್ವ ಯೋಧ ಇದೀಗ ಭಯಾನಕ ಉಗ್ರ ಸಂಘಟನೆ ಇಸಿಸ್ ಸಂಘಟನೆಗೆ ತಲೆನೋವಾಗಿ ಪರಿಣಮಿಸಿದ್ದು, ಈ ವರೆಗೂ ಸುಮಾರು 1500 ಇಸಿಸ್ ಉಗ್ರರನ್ನು ಕೊಂದು ಹಾಕುವ ಮೂಲಕ ಸಾವಿನ ದೇವರಾಗಿದ್ದಾನೆ.
ಇಸಿಸ್ ಉಗ್ರರ ನಿರ್ನಾಮದ ಪಣ ತೊಟ್ಟಿರುವ ಇರಾಕಿ ರ‍್ಯಾಂಬೋ ಅಬು ಅಜ್ರೇಲ್ (ಚಿತ್ರಕೃಪೆ: ಯುನಿಲ್ಯಾಡ್)
ಇಸಿಸ್ ಉಗ್ರರ ನಿರ್ನಾಮದ ಪಣ ತೊಟ್ಟಿರುವ ಇರಾಕಿ ರ‍್ಯಾಂಬೋ ಅಬು ಅಜ್ರೇಲ್ (ಚಿತ್ರಕೃಪೆ: ಯುನಿಲ್ಯಾಡ್)
Updated on

ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ (ಇಸಿಸ್) ಬಹುಶಃ ಇತ್ತೀಚಿನ ದಿನಗಳಲ್ಲಿ ಈ ಹೆಸರನ್ನು ಕೇಳದವರಿಲ್ಲ. ಇರಾಕ್, ಸಿರಿಯಾ ಮತ್ತು ಲಿಬಿಯಾದಲ್ಲಿ ಪ್ರಭುತ್ವ ಸಾಧಿಸಿರುವ ಒಂದು  ಅಂತಾರಾಷ್ಟ್ರೀಯ ಉಗ್ರ ಸಂಘಟನೆ.

ಅದರಲ್ಲೂ ಪ್ಯಾರಿಸ್ ಮೇಲಿನ ಅವಳಿ ದಾಳಿಗಳ ಬಳಿಕ ಇಸಿಸ್ ಉಗ್ರ ಸಂಘಟನೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ತನ್ನ ಅತ್ಯಾಧುನಿಕ ಮತ್ತು ಬಲಾಢ್ಯ ಮಿಲಿಟರಿ ಶಕ್ತಿಯಿಂದಲೇ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕ, ಅಮೆರಿಕಕ್ಕೆ ಪೈಪೋಟಿ ನೀಡುತ್ತಿರುವ ರಷ್ಯಾ ದೇಶ ಸೇರಿದಂತೆ ವಿಶ್ವದ ನಾನಾ ದೇಶಗಳು ಈ ಉಗ್ರ ಸಂಘಟನೆ ವಿರುದ್ಧ  ಕೈ ಜೋಡಿಸಿ ಯುದ್ಧ ಮಾಡುವ ಮಟ್ಟಿಗೆ ಇಳಿದಿದೆ ಎಂದರೆ ಇಸಿಸ್ ನ ಕ್ರೌರ್ಯ ಮತ್ತು ಅದರ ಕುಖ್ಯಾತಿ ಎಷ್ಟಿದೆ ಎಂಬುದನ್ನು ಊಹಿಸಬಹುದು. ಆದರೆ ಇಂತಹ ಇಸಿಸ್ ಉಗ್ರ ಸಂಘಟನೆಗೇ ಇರಾಕ್ ನ  ಓರ್ವ ಯೋಧನನ್ನು ಕಂಡರೆ ಭಯವಾಗುತ್ತದೆ ಎಂದರೆ ನೀವು ನಂಬುವುದಿಲ್ಲ.

ಹೌದು..ಇಸಿಸ್ ವಿರುದ್ಧ ಹೋರಾಡುತ್ತಿರುವ ಇರಾಕ್ ನ ಕೆಲ ಸಾರ್ವಜನಿಕ ಸಂಘಟನೆಗಳ ಓರ್ವ ಯೋಧ ಇದೀಗ ಭಯಾನಕ ಉಗ್ರ ಸಂಘಟನೆಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಆ ಮೂಲಕ ಇರಾಕ್  ಪ್ರಜೆಗಳ ಪಾಲಿಗೆ ಸಾವಿನ ದೇವರು (ಡೆತ್ ಆಫ್ ಏಂಜೆಲ್-The Angel of Death) ಎಂಬ ಖ್ಯಾತಿಗಳಿಸಿದ್ದಾನೆ. ಶಿಯಾ ಮುಸ್ಲಿಂ ಸಂಘಟನೆ ದಿ ಇಮಾಮ್ ಅಲಿ ಬ್ರಿಗೇಡ್ ಸಂಘಟನೆಯ  ಮುಖ್ಯಸ್ಥ ಅಬು ಅಜ್ರೇಲ್ ಎಂಬಾತ ಇಸಿಸ್ ಉಗ್ರ ಸಂಘಟನೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ. ಇರಾಕ್ ಮತ್ತು ಸಿರಿಯಾದಲ್ಲಿ ಇಸಿಸ್ ಉಗ್ರ ಸಂಘಟನೆ ನಡೆಸುತ್ತಿರುವ ದೌರ್ಜನ್ಯಗಳನ್ನು  ವಿರೋಧಿಸಿ ಪ್ರತಿ ಹೋರಾಟಕ್ಕೆ ಅಬು ಅಜ್ರೇಲ್ ನಿಂತಿದ್ದು, ತನ್ನದೇ ಆದ ಒಂದು ಸೈನ್ಯವನ್ನೇ ಕಟ್ಟಿದ್ದಾನೆ. ಒಂದು ಅಂಕಿ ಅಂಶದ ಪ್ರಕಾರ ಈ ಅಬು ಅಜ್ರೇಲ್ ವಿವಿಧ ಪ್ರದೇಶಗಳಲ್ಲಿ ಇಸಿಸ್ ವಿರುದ್ಧ ನಡೆದ ಯುದ್ಧದಲ್ಲಿ ಸುಮಾರು 1500ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.

ಹೀಗಾಗಿಯೇ ಈತನನ್ನು ಇರಾಕ್ ನಲ್ಲಿ  ಪ್ರಜೆಗಳು ಇರಾಕಿ ರ‍್ಯಾಂಬೋ ಎಂದೇ ಕರೆಯುತ್ತಾರೆ. ಇರಾಕ್ ನಲ್ಲಿ ಈತನ ಖ್ಯಾತಿ ಎಷ್ಟಿದೆ ಎಂದರೆ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ  ಈತನ ಹೆಸರಿನಲ್ಲಿರುವ ಪೇಜ್ ಗೆ ಸುಮಾರು 50 ಸಾವಿರ ಫಾಲೋವರ್ಸ್ ಗಳಿದ್ದಾರೆ. ಇರಾಕ್ ನಲ್ಲಿ ನಿರಾಶ್ರಿತರಾಗಿರುವ ಶಿಯಾ ಮುಸ್ಲಿಮರ ಪಾಲಿಗೆ ಈ ಇರಾಕಿ ರ‍್ಯಾಂಬೋ ಇದೀಗ ಐಕಾನ್ ಆಗಿದ್ದು, ಸಾಕಷ್ಟು ಯುವಕರು ಈತನ  ದಿ ಇಮಾಮ್ ಅಲಿ ಬ್ರಿಗೇಡ್ ಸಂಘಟನೆಯನ್ನು ಸೇರಲು ಉತ್ಸುಕರಾಗಿದ್ದಾರೆ.

ಇರಾಕ್, ಸಿರಿಯಾ, ಲಿಬಿಯಾದಲ್ಲಿ ಪ್ರಭುತ್ವ ಸಾಧಿಸಿರುವ ಇಸಿಸ್ ಉಗ್ರರನ್ನು ಶತಾಯಗತಾಯ ಹೆಡೆಮುರಿ ಕಟ್ಟುವಂತೆ ಮಾಡುತ್ತೇನೆ ಎಂದು ಶಪಥ ಮಾಡಿರುವ ಅಬು ಅಜ್ರೇಲ್, ಕಳೆದ ಮಾರ್ಚ್ ತಿಂಗಳಿನಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ. ವಿಡಿಯೋದಲ್ಲಿ ಸೌದಿ ಅರೇಬಿಯಾ ವಿರುದ್ಧ ತೀವ್ರ ಕಿಡಿಕಾರಿದ್ದ ಅಬು ಅಜ್ರೇಲ್, ಇಸಿಸ್ ಸಂಘಟನೆಗೆ ಸೌದಿ ಅರೇಬಿಯಾದ ಕೃಪಾಕಟಾಕ್ಷವಿದ್ದು,  ಇದೇ ಕಾರಣಕ್ಕಾಗಿ ಅಮಾಯಕ ಶಿಯಾ ಮುಸ್ಲಿಮರ ಮೇಲೆ ವಾಯುದಾಳಿ ನಡೆಸುತ್ತಿದೆ. ಸೌದಿ ಅರೇಬಿಯಾದ ಈ ದೌರ್ಜನ್ಯವನ್ನು ನಾವು ಸಹಿಸಿಕೊಳ್ಳುವುದಿಲ್ಲ. ಸೌದಿ ಅರೇಬಿಯಾಗಾಗಿ ನಾವು ಬರುತ್ತಿದ್ದೇವೆ. ನಮ್ಮಂತೆ ಯೆಮೆನ್, ಇರಾಕ್, ಸಿರಿಯಾ ಮುಂತಾದ ಪ್ರದೇಶಗಳಲ್ಲಿರುವ ಶಿಯಾ ನಿರಾಶ್ರಿತರು ಒಗ್ಗೂಡಿದ್ದು, ನಿಮ್ಮ ನಾಶ ಖಂಡಿತ ಎಂದು ಸೌದಿ ಅರೇಬಿಯಾಗೆ ಖಡಕ್ ಎಚ್ಚರಿಕೆ ಕೂಡ ನೀಡಿದ್ದಾನೆ.

ಇನ್ನು ಉಗ್ರರ ವಿರುದ್ಧ ಹೋರಾಡುತ್ತಿರುವ ನಿಮ್ಮನ್ನು ಯಾರಾದರೂ ಕೊಂದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಬು ಅಜ್ರೇಲ್, ನಾನಾಗಲೇ ಸಾವಿಗೆ ಸಿದ್ಧನಾಗಿದ್ದೇನೆ. ಪ್ರಸ್ತುತ ನನ್ನ ಗುರಿ ಏನಿದ್ದರೂ ನಿರಾಶ್ರಿತರಾಗಿರುವ ನನ್ನ ಶಿಯಾ ಬಾಂಧವರಿಗೆ ಉತ್ತಮ ಭವಿಷ್ಯ ನೀಡುವುದು ಮತ್ತು ನಮ್ಮ ಸಹೋದರರ ಮೇಲೆ ದೌರ್ಜನ್ಯ ನಡೆಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸರ್ವನಾಶ ಮಾಡುವುದೇ  ಆಗಿದೆ ಎಂದು ಹೇಳುತ್ತಾನೆ.

ಕುತೂಹಲಕಾರಿ ವೇಷಭೂಷಣದಿಂದ ಜನರನ್ನು ಸೆಳೆಯುತ್ತಿರುವ ಅಬು ಅಜ್ರೇಲ್
ಇನ್ನು ಈ ಇರಾಕಿ ರ‍್ಯಾಂಬೋನ ವೇಷಭೂಷಣ ಕೂಡ ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿದ್ದು, ಸದಾ ಕಾಲ ಕೈಯಲ್ಲಿ ಒಂದು ಅತ್ಯಾಧುನಿಕ ಮೆಷಿನ್ ಗನ್, ಯೋಧನ ಸಮವಸ್ತ್ರ, ಅದರಲ್ಲಿ ಒಂದಷ್ಟು ಗ್ರೆನೇಡ್ ಗಳು, ಬೂಟ್ ನಲ್ಲಿ ಪಿಸ್ತೂಲ್ ಮತ್ತು ಅತ್ಯಾಧುನಿಕ ಗನ್ ಗಳಿರುತ್ತವೆ. ಇನ್ನು ಸೊಂಟದಲ್ಲಿ ಗನ್ ಮತ್ತು ಮೆಷಿನ್ ಗನ್ ಗೆ ಬಳಸಲಾಗುವ ಬುಲೆಟ್ ಮ್ಯಾಗಜಿನ್ ಗಳ ಸರಣಿ ಮತ್ತು ಎಡಗೈಯಲ್ಲಿ ಹರಿತವಾದ ಕೊಡಲಿ ಈತನ ಬಳಿ ಸಾದಾಕಾಲ ವಿರುತ್ತದೆ.

ಹೀಗಾಗಿಯೇ ಇರಾಕ್ ನ ಶಿಯಾ ಮುಸ್ಲಿಂ ಪ್ರಜೆಗಳು ಈತನನ್ನು ಸಾವಿನ ದೇವರು (ಡೆತ್ ಆಫ್ ಎಂಜೆಲ್) ಎಂದು ಕರೆಯುತ್ತಾರೆ. ಒಂದು ಮೂಲದ ಪ್ರಕಾರ ಈ ಅಬು ಅಜ್ರೇಲ್ ವಿಶ್ವವಿದ್ಯಾಲಯದ ಪ್ರಧ್ಯಾಪಕನಾದ್ದನಂತೆ. ಅಲ್ಲದೆ ಈತ ಟೀಕ್ವೊಂಡೊ ಸಮರ ಕಲೆಯ ಚಾಂಪಿಯನ್ ಕೂಡ ಆಗಿದ್ದ ಎಂದು ಹೇಳಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಇಸಿಸ್ ಉಗ್ರ ಸಂಘಟನೆಯ ವಿರುದ್ಧ ವಿಶ್ವ ಸಮುದಾಯವನ್ನು ಎತ್ತಿಕಟ್ಟಲು ಇರಾಕ್ ಸರ್ಕಾರದ ಸೃಷ್ಟಿಯೇ ಈ ಅಬು ಅಜ್ರೇಲ್ ಎಂದೂ ಕೂಡ ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com