ಕ್ಯಾನ್ಸರ್ ಪೀಡಿತೆಗೆ ಮನೆಯಲ್ಲೇ ಪಾಠ

ಪೇಟನ್ ವಾಲ್ಟನ್ ಎಂಬ ಪುಟ್ಟ ಹುಡುಗಿಯ ಬದಲು ಈ ರೋಬೋಟ್ ಬಂದು ಕ್ಲಾಸಿನಲ್ಲಿ ಕೂರುತ್ತದೆ. ನೂರಾರು ಕಿಲೋಮೀಟರ್ ದೂರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ಈ ರೋಬೋಟ್ ಮೂಲಕ ತನ್ನ ತರಗತಿಯ ಪಾಠಗಳನ್ನೆಲ್ಲ ಕೇಳಿಸಿಕೊಳ್ಳುತ್ತಾಳೆ...
ಕ್ಯಾನ್ಸರ್ ಪೀಡಿತ ಬಾಲಕಿ ಪೇಟನ್ ವಾಲ್ಟನ್ (ಸಂಗ್ರಹ ಚಿತ್ರ)
ಕ್ಯಾನ್ಸರ್ ಪೀಡಿತ ಬಾಲಕಿ ಪೇಟನ್ ವಾಲ್ಟನ್ (ಸಂಗ್ರಹ ಚಿತ್ರ)
Updated on

ನ್ಯೂಯಾರ್ಕ್: ಪೇಟನ್ ವಾಲ್ಟನ್ ಎಂಬ ಪುಟ್ಟ ಹುಡುಗಿಯ ಬದಲು ಈ ರೋಬೋಟ್ ಬಂದು ಕ್ಲಾಸಿನಲ್ಲಿ ಕೂರುತ್ತದೆ. ನೂರಾರು ಕಿಲೋಮೀಟರ್ ದೂರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ಈ ರೋಬೋಟ್ ಮೂಲಕ ತನ್ನ ತರಗತಿಯ ಪಾಠಗಳನ್ನೆಲ್ಲ ಕೇಳಿಸಿಕೊಳ್ಳುತ್ತಾಳೆ. ಕ್ಲಾಸಿನ ಚಟುವಟಿಕೆಗಳಲ್ಲೆಲ್ಲ ಭಾಗವಹಿಸುತ್ತಾಳೆ.

ಗಂಬಿsೀರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಬಾಳಿಗೆ ಬೆಳಕಾಗಬಲ್ಲ ಈ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಅಮೆರಿಕದ ಮೆರಿಲ್ಯಾಂಡ್‍ನಲ್ಲಿ ಕಂಡುಬಂದದ್ದು. ಪೇಟನ್‍ಗೀಗ 10 ವರ್ಷ. ನೀಲಿ ಕಂಗಳ ಈ ಹುಡುಗಿಗೆ ವಿಚಿತ್ರ ಬಗೆಯ ಕ್ಯಾನ್ಸರ್. ನ್ಯೂಯಾರ್ಕ್‍ನ ಆಸ್ಪತ್ರೆಯಲ್ಲಿ ಆಕೆಗೆ ವಿಕಿರಣ ಥೆರಪಿ ನಡೆಯುತ್ತದೆ. ಅಲ್ಲಿಂದ 250 ಮೈಲು (402 ಕಿಮೀ) ದೂರದ ಮೆರಿಲ್ಯಾಂಡ್‍ನಲ್ಲಿ ಆಕೆಯ ತರಗತಿಗಳು ನಡೆಯುತ್ತವೆ. ಥೆರಪಿ ಇದ್ದ ಸಮಯ ಹೊರತುಪಡಿಸಿ ಉಳಿದಂತೆ ತರಗತಿಗಳನ್ನು ಆಕೆ ತಪ್ಪಿಸುವುದಿಲ್ಲ. ಕಾರಣ ಈ ರೋಬೋಟ್. ಇದರ ಅಡ್ಡ ಹೆಸರು ಪಿಎವಿಎಸ್. ಉರುಳುವ ಗಾಲಿಯ ಮೇಲೆ ನಿಲ್ಲಿಸಿದ 15 ಪೌಂಡ್ ತೂಕದ ಈ ರೋಬೋಟ್‍ನ ತುದಿಗೆ ಐಪ್ಯಾಡ್ ತೆರೆಯಿದೆ.

ಅದರ ಮೂಲಕ ಆಕೆ ತರಗತಿಯಲ್ಲಿ ನಡೆಯುವುದನ್ನೆಲ್ಲ ನೋಡಿ ಅದಕ್ಕೆ ಸ್ಪಂದಿಸುತ್ತಾಳೆ. ಐದನೇ ತರಗತಿಯ ಈಕೆಗೆ ಗಣಿತ ಮತ್ತು ವಿಜ್ಞಾನ ಅಂದರೆ ಪ್ರೀತಿ. ಮಾರಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತ ಆಸ್ಪತ್ರೆ ಕೋಣೆಯಲ್ಲಿ ಮಲಗಿದ್ದರೂ ಈಕೆ ತನ್ನ ಗೆಳೆಯರ, ಕುಟುಂಬದ ಜತೆ ಸಂಪರ್ಕ ಕಡಿದುಕೊಂಡಿಲ್ಲ. ಈಕೆಯ ಅನುಭವಗಳು ಈಗ ಅಧ್ಯಯನಕ್ಕೆ ವಸ್ತುವಾಗಿದೆ. ಇಲ್ಲಿ ಈ ತಂತ್ರಜ್ಞಾನ ಪೈಲಟ್ ಪ್ರೊಗ್ರಾಮ್ ಆಗಿದೆ. ಮೆರಿಲ್ಯಾಂಡ್‍ನಲ್ಲಿ ಈ ಬಗೆಯ ತಂತ್ರಜ್ಞಾನ ಹೊಸದಾಗಿದ್ದು, ಇತರೆಡೆಯೂ ಇದನ್ನು ಅಳವಡಿಸಲು ಅಧಿಕಾರಿಗಳು ಆಸಕ್ತಿ ತೋರಿಸಿದ್ದಾರೆ.

ಶಾಲೆಯಿಂದ ಹೊರಗುಳಿಯುವ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಇದರಿಂದ ಅಗಾಧ ಸಾಧ್ಯತೆಗಳಂತೂ ಇವೆ ಎಂದು `ದ ವಾಷಿಂಗ್ಟನ್ ಪೆÇೀಸ್ಟ್' ವರದಿ ಮಾಡಿದೆ. ಪೂಲ್ಸ್‍ವಿಲ್ಲೆ ಪ್ರಾಥಮಿಕ ಶಾಲೆಯಲ್ಲಿರುವ ಎಲ್ಲರಿಗೂ ಪೇಟನ್‍ಳ ಈ ರೋಬೋಟ್ ಬಗ್ಗೆ ಗೊತ್ತಿದೆ. ರೋಬೋಟ್ ಹಾದುಬರುವಾಗ ಆಕೆಯ ಗೆಳತಿಯರು ಅಲ್ಲಿಂದಲೇ ಕೈಸನ್ನೆ ಮಾಡುತ್ತಾರೆ. ಪೇಟನ್ ಳ ತಾಯಿ ಹೇಳುವಂತೆ, ಏಕಾಂತ ಮುರಿದು ಸಮಾಜದೊಂದಿಗೆ ಬೆರೆಯಲು ಅದು ಆಕೆಗೆ ಸಾಧನವಾಗಿದೆ. ಇದನ್ನು ತಯಾರಿಸಿದ ಡಬಲ್ ರೊಬೋಟಿಕ್ಸ್ ಎಂಬ ಸಂಸ್ಥೆ 2012ರಿಂದೀಚೆಗೆ ಇಂಥ 5 ಸಾವಿರ ಯಂತ್ರಗಳನ್ನು ಮಾರಿದೆ. ಹೆಚ್ಚಾಗಿ ಇವು ಉದ್ಯಮ ವಲಯದಲ್ಲಿ ಬಳಕೆಯಾಗಿವೆ.

ಲಾಂಗ್ ಐಲ್ಯಾಂಡ್‍ನಲ್ಲಿ ಒಬ್ಬ 9ನೇ ತರಗತಿಯ ಹುಡುಗನಿಗೆ ತುರ್ತು ಚಿಕಿತ್ಸೆ ಆದಾಗ ಆತನ ಜಾಗದಲ್ಲಿ ಈ ರೋಬೋಟ್ ಬಂದು ತರಗತಿಗೆ ಕೂತಿತ್ತು. ಮೆರಿಲ್ಯಾಂಡ್ ರೋಬೋಟಿಕ್ಸ್ ಕೇಂದ್ರದ ನಿರ್ದೇಶಕ ಸತ್ಯೇಂದ್ರ ಗುಪ್ತಾ, ಈ ತಂತ್ರಜ್ಞಾನ ಶಾಲೆಗಳಲ್ಲಿ ಪರಿಚಿತವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಪೇಟನ್‍ಗೆ ಪಶುವೈದ್ಯೆಯಾಗುವ ಆಸೆಯಿದೆ. ಈಕೆಗೆ ಇತ್ತೀಚೆಗೆ ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡು ಕೆಲವೇ ದಿನದಲ್ಲಿ ಹೊಟ್ಟೆಯಲ್ಲಿ ಉಬ್ಬು ಕಾಣಿಸಿಕೊಂಡಿತು. ನಂತರ ಅದು ಯಕೃತ್ತಿನ ಕ್ಯಾನ್ಸರ್ ಗಡ್ಡೆ ಎನ್ನುವುದು ಗೊತ್ತಾಯಿತು. ಈಕೆ ಬದುಕುಳಿಯುವ ಅದೃಷ್ಟ ಶೇ.3ರಿಂದ ಶೇ.50ರಷ್ಟಿದೆ.

`ಆಕೆ ಎಷ್ಟು ದಿನ ಬದುಕುತ್ತಾಳೋ ಗೊತ್ತಿಲ್ಲ. ಬದುಕಿದ್ದಷ್ಟು ಕಾಲ ಸಂಪೂರ್ಣವಾಗಿ ಸಹಜವಾಗಿ ಬದುಕಲಿ ಎಂಬ ಆಸೆ' ಎನ್ನುತ್ತಾಳೆ ಆಕೆಯ ತಾಯಿ. ಪೇಟನ್ ಯಾವಾಗಲೂ ತರಗತಿಯಲ್ಲಿ ಫಸ್ಟ್ ಗ್ರೇಡ್ ಪಡೆಯುತ್ತಾಳೆ. ಈ ರೋಬೋಟ್ ಮೂಲಕ ವಿಡಿಯೋ ಕಾನ್ಫರೆನ್ಸಿಂಗ್, ಲೆಕ್ಚರರ್ ಮೇಲೆ ಝೂಮ್ ಮಾಡುವುದು, ಟೀಚರ್ ಕ್ಲಾಸಿನಲ್ಲಿ ತಿರುಗಾಡುವಾಗ ತಾನೂ ಕುತ್ತಿಗೆ ತಿರುಗಿಸುವುದು ಸಾಧ್ಯ. ಪೂಲ್ಸ್‍ವಿಲ್ಲೆಯ ಜನ ಹಣ ಕೂಡಿಸಿ ಈ ಕುಟುಂಬ ಈ ತಂತ್ರಜ್ಞಾನವನ್ನು ಪಡೆಯಲು ನೆರವಾಗಿದ್ದಾರೆ. ಕ್ಲಾಸಿನಲ್ಲಿ ಮಕ್ಕಳಿಗೆ ಲೆಕ್ಕ ನೀಡುವ ಟೀಚರ್, ಯಾರು ಬಿಡಿಸಿದಿರೆಂದು ಕೇಳುತ್ತಾರೆ. 250 ಮೈಲಿಯಾಚೆಯಿಂದ ಪೇಟನ್ ತಕ್ಷಣ ಕೈ ಎತ್ತುತ್ತಾಳೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com