
ಡಮಾಸ್ಕಸ್: ಗಲಭೆ ಪೀಡಿತ ಸಿರಿಯಾದ ಡಮಾಸ್ಕಸ್ ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಮೇಲೆ ಮಂಗಳವಾರ ಮಧ್ಯಾಹ್ನ 2 ರಾಕೆಟ್ ದಾಳಿಯಾಗಿದ್ದು, ಸಾವು-ನೋವಿನ ಕುರಿತು ಮಾಹಿತಿ ತಿಳಿದುಬಂದಿಲ್ಲ.
ಇಸಿಸ್ ಉಗ್ರರ ಕಪಿ ಮುಷ್ಠಿಯಲ್ಲಿ ನಲುಗುತ್ತಿರುವ ಸಿರಿಯಾ ಬೆಂಬಲಕ್ಕೆ ನಿಂತಿರುವ ರಷ್ಯಾ ಉಗ್ರರ ನೆಲೆಗಳ ಮೇಲೆ ಕಳೆದ ಒಂದು ವಾರದಿಂದ ವಾಯುದಾಳಿ ನಡೆಸುತ್ತಿದ್ದು, ನೂರಾರು ಉಗ್ರರು ಸಾವಿಗೀಡಾಗಿದ್ದಾರೆ. ಸಿರಿಯಾದಲ್ಲಿ ರಷ್ಯಾದ ವಾಯುದಾಳಿ ಮುಂದುವರೆದಿರುವಂತೆಯೇ ಇಂದು ಡಮಾಸ್ಕಸ್ ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿದ್ದು, ಶಂಕಿತ ಉಗ್ರರು ಕಚೇರಿ 2 ಸುತ್ತು ರಾಕೆಟ್ ದಾಳಿ ನಡೆಸಿದ್ದಾರೆ.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆಯೇ ರಷ್ಯಾ ರಾಯಭಾರ ಕಚೇರಿ ಸುತ್ತಮುತ್ತ ನೂರಾರು ಸಿರಿಯಾ ನಾಗರೀಕರು ಸೇರಿ, ರಷ್ಯಾ ಬಾವುಟಗಳನ್ನು ಹಾರಿಸುವ ಮೂಲಕ ರಷ್ಯಾ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಲ್ಲದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನು ಡಮಾಸ್ಕಸ್ ನಲ್ಲಿರುವ ಸಿರಿಯಾ ಮಾನವ ಹಕ್ಕು ವೀಕ್ಷಣಾ ಸಂಘಟನೆ ಹೇಳಿರುವಂತೆ ಇಸಿಸ್ ಉಗ್ರರ ಉಪಟಳ ಹೆಚ್ಚಾಗಿರುವ ಡಮಾಸ್ಕಸ್ ನ ಪೂರ್ವವಲಯದಿಂದಲೇ ರಾಕೆಟ್ ಅನ್ನು ಉಡಾಯಿಸಲಾಗಿದೆ ಎಂದು ತಿಳಿದುಬಂದಿದೆ. ಆದರೂ ಈ ವರೆಗೂ ಯಾವುದೇ ಉಗ್ರ ಸಂಘಟನೆ ಕೃತ್ಯದ ಜವಾಬ್ದಾರಿ ಹೊತ್ತಿಲ್ಲ.
Advertisement