
ಬೀಜಿಂಗ್: ಓರ್ವ ಪತ್ನಿ, ಹಲವು ಗಂಡಂದಿರು.. ಪ್ರಸ್ತುತ ಹೆಣ್ಣು ಮಕ್ಕಳ ಅಭಾವ ಎದುರಿಸುತ್ತಿರುವ ಚೀನಾಕ್ಕೆ ಇದೊಂದೇ ದಾರಿ ಎನಿಸುತ್ತಿದೆ...
ಏಕೆಂದರೆ ಇತ್ತೀಚೆಗೆ ಸಮಾರಂಭವೊಂದರಲ್ಲಿ ಝೆಜಿಯಾಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗಿದ್ದು, ಚೀನಾದಲ್ಲಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಹೌದು.. ಚೀನಾದಲ್ಲಿ ಇದೀಗ ಹೆಣ್ಣುಮಕ್ಕಳ ಅಭಾವ ಎದುರಾಗಿದ್ದು, ಯುವಕರಿಗೆ ಮದುವೆಯಾಗಲು ಯುವತಿಯರೇ ಸಿಗುತ್ತಿಲ್ಲವಂತೆ. ಒಂದು ಮೂಲದ ಪ್ರಕಾರ 2020ರ ವೇಳೆಗೆ ಚೀನಾದಲ್ಲಿನ ಅವಿವಾಹಿತರ ಸಂಖ್ಯೆ ಸುಮಾರು 30 ಮಿಲಿಯನ್ ಗೆ ಏರಲಿದೆಯಂತೆ. ಇದಕ್ಕೆ ಹೆಣ್ಣುಮಕ್ಕಳ ಅಭಾವವೇ ಕಾರಣ ಎಂದು ವರದಿಯೊಂದು ಹೇಳಿದೆ.
ಪ್ರಸ್ತುತ ಚೀನಾದಲ್ಲಿ ಸರಾಸರಿ ಪ್ರತೀ 100 ಯುವತಿಯರಿಗೆ 117 ಮಂದಿ ಯುವಕರಿದ್ದು, ಯುವತಿಯರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆಯಂತೆ. ಇದಕ್ಕೆ ಪ್ರಮುಖವಾಗಿ ಚೀನಾದ ಲಿಂಗ ಅಸಮಾನತೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಬಹು ಪತಿತ್ವವೇ ಪರಿಹಾರ ಎಂದು ಝೆಜಿಯಾಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕ್ಸಿ ಜ್ವಾಶಿ ಹೇಳಿದ್ದಾರೆ.
ಕ್ಸಿ ಜ್ವಾಶಿ ಅವರ ಪ್ರಕಾರ, ಚೀನಾದಲ್ಲಿ ಎದುರಾಗಿರುವ ಈ ಸಮಸ್ಯೆಗೆ ಬಹು ಪತಿತ್ವ ಒಂದೇ ಪರಿಹಾರವಾಗಿದ್ದು, ಸರ್ಕಾರ ಬಹು ಪತಿತ್ವ ಪದ್ಧತಿಯನ್ನು ಅಧಿಕೃತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. "ಚೀನಾದಲ್ಲಿ ಉಂಟಾಗಿರುವ ಹೆಣ್ಣು ಮಕ್ಕಳ ಅಭಾವದಿಂದಾಗಿ ಗಂಡು ಮಕ್ಕಳಿಗೆ ಪ್ರಮುಖವಾಗಿ ಬಡ ಕುಟುಂಬದ ಯುವಕರಿಗೆ ಮದುವೆಗಾಗಿ ಯುವತಿಯರನ್ನು ಹುಡುಕುವುದು ಪ್ರಯಾಸದ ಕೆಲಸವಾಗಿದೆ. ಇದೇ ಕೆಲಸ ಶ್ರೀಮಂತನಿಗೆ ಸುಲಭವಾಗಬಹುದು. ಈ ಸಮಸ್ಯೆಗೆ ತಮ್ಮ ಬಳಿ ಉಪಾಯವಿದ್ದು, ಇಬ್ಬರು ಪುರುಷರು ಓರ್ವ ಮಹಿಳೆಯನ್ನು ವಿವಾಹವಾಗುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು" ಎಂದು ಹೇಳಿದ್ದಾರೆ.
ಕ್ಸಿ ಜ್ವಾಶಿ ಅವರ ಈ ವಾದ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 1979ರಲ್ಲಿ ಚೀನಾ ಸರ್ಕಾರ ತಂದಿದ್ದ ಜನನ ನಿಯಂತ್ರಣ ಕಾಯ್ದೆಯ ಪ್ರಸ್ತುತತೆಯನ್ನೇ ಪ್ರಶ್ನಿಸುತ್ತಿದೆ. ಅಲ್ಲದೆ ಅವರ ವಾದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಕ್ಷಾಂತರ ಮಂದಿ ಸ್ವಾಗತಿಸಿದ್ದಾರೆ. ಒಟ್ಟಾರೆ ಜನಸಂಖ್ಯೆಯನ್ನು ನಿಯಂತ್ರಣ ಮಾಡ ಹೋದ ಚೀನಾ ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
Advertisement