ಭಾರತದಲ್ಲೇ ಅತಿ ಹೆಚ್ಚು ಕ್ಷಯ ರೋಗಿಗಳು!

ಪ್ರಪಂಚದಲ್ಲೇ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಷಯ ರೋಗಿಗಳಿದ್ದು, ಕ್ಷಯ ರೋಗದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಸಹ ಸಾಕಷ್ಟು ಹೆಚ್ಚಿದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಶ್ವಸಂಸ್ಥೆ: ಪ್ರಪಂಚದಲ್ಲೇ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಷಯ ರೋಗಿಗಳಿದ್ದು,  ಕ್ಷಯ ರೋಗದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಸಹ ಸಾಕಷ್ಟು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಕ್ಷಯ ರೋಗ ವರದಿ 2015 ಬಿಡುಗಡೆ ಮಾಡಿದ್ದು, 2014ರಲ್ಲಿ 96 ಲಕ್ಷ ಜನರಿಗೆ ಕ್ಷಯ ರೋಗವಿರುವುದು ತಿಳಿದು ಬಂದಿದ್ದು, ಅದರಲ್ಲಿ  ಭಾರತೀಯರ ಪ್ರಮಾಣವೇ ಹೆಚ್ಚು ಎಂದು ಹೇಳಿದೆ. 2014ರಲ್ಲಿ ಭಾರತದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಕ್ಷಯ ರೋಗ ಸೋಂಕಿಗೆ ತುತ್ತಾಗಿದ್ದಾರೆ ಎಂದು ಹೇಳಿದೆ.

ಎಚ್​ಐವಿ ಸೋಂಕು ಹೊರತು ಪಡಿಸಿದರೆ ಕ್ಷಯ ರೋಗದಿಂದಲೇ ಅತಿ ಹೆಚ್ಚಿನ ಜನರು ಅಸುನೀಗುತ್ತಿದ್ದಾರೆ. 2014ರಲ್ಲಿ ವಿಶ್ವದಲ್ಲಿ 15 ಲಕ್ಷ ಜನರು ಕ್ಷಯದಿಂದ ಮೃತಪಟ್ಟಿದ್ದರು. ಇದರಲ್ಲಿ ಬಹುತೇಕರು ಆಗ್ನೇಯ ಏಷ್ಯಾ ರಾಷ್ಟ್ರಗಳ ಮತ್ತು ಆಫ್ರಿಕಾ ರಾಷ್ಟ್ರಗಳ ರೋಗಿಗಳು. ವಿಶ್ವದ ಒಟ್ಟು ಕ್ಷಯ ರೋಗಿಗಳ ಮರಣ ಪ್ರಮಾಣದ 3ನೇ 1ಭಾಗದಷ್ಟು ರೋಗಿಗಳು ಭಾರತ ಮತ್ತು ನೈಜೀರಿಯಾದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತ, ಬ್ರೆಜಿಲ್, ಕಾಂಬೊಡಿಯಾ, ಚೀನಾ, ಇಥಿಯೊಪಿಯಾ, ಮ್ಯಾನ್ಮಾರ್, ಫಿಲಿಪೀನ್ಸ್, ಉಗಾಂಡ ಮತ್ತು ವಿಯೆಟ್ನಾಂಗಳಲ್ಲಿ ಕ್ಷಯ ರೋಗದ ಸಮಸ್ಯೆ ಹೆಚ್ಚು ಎಂಬುದು ತಿಳಿದು ಬಂದಿದೆ. ಕ್ಷಯ ರೋಗ ನಿರ್ಮೂಲನೆಗಾಗಿ ವಿಶ್ವಮಟ್ಟದಲ್ಲಿ ವ್ಯಾಪಕ ಪ್ರಚಾರ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ 2000 ದಿಂದ 2015ರವರೆಗೆ 4 ಕೋಟಿ 30 ಲಕ್ಷ ಜನರು ಕ್ಷಯದಿಂದ ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com