
ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಯತ್ನಿಸುತ್ತಿರುವ ಭಾರತದ ಕ್ರಮವನ್ನು ಪಾಕಿಸ್ತಾನ ಪರೋಕ್ಷವಾಗಿ ಟೀಕಿಸಿದೆ.
ಭದ್ರತಾ ಮಂಡಳಿಯ ಪ್ರಾತಿನಿಧ್ಯದ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿರುವ ಪಾಕಿಸ್ತಾನದ ಪ್ರತಿನಿಧಿ ಮಲೀಹಾ ಲೋಧಿ, ಭದ್ರತಾ ಮಂಡಳಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಸ್ವಾರ್ಥ ಧೋರಣೆ, ಕುರುಡು ರಾಷ್ಟ್ರೀಯ ಆಕಾಂಕ್ಷೆಯನ್ನು ಹೊಂದಿರುವ ರಾಷ್ಟ್ರಗಳೇ ಕಾರಣ ಎಂದು ಹೇಳಿದ್ದಾರೆ.
ಭಾರತದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಇದ್ದರೂ, ಪರೋಕ್ಷವಾಗಿ ಭಾರತವನ್ನು ಸ್ವಾರ್ಥಿ ಎಂದು ಪಾಕಿಸ್ತಾನ ಆರೋಪಿಸಿದೆ. ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಹಲವು ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿತಾದರೂ, ಪಾಕಿಸ್ತಾನ ಹಾಗೂ ಇಟಾಲಿ ಚರ್ಚೆಯಲ್ಲಿ ಅಸಂಗತ ವಿಷಯಗಳನ್ನು ಪ್ರಸ್ತಾಪಿಸಿದವು.
ಸ್ವಾರ್ಥ ಧೋರಣೆ ಮೂಲಕ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಕೆಲವು ರಾಷ್ಟ್ರಗಳು ಯತ್ನಿಸುತ್ತಿವೆ, ಹೊಸ ಖಾಯಂ ಸದಸ್ಯ ರಾಷ್ಟ್ರಗಳ ಸೇರ್ಪಡೆ ಸಾರ್ವತ್ರಿಕವಾಗಿ ಸಮ್ಮತಿಸಲ್ಪಟ್ಟ ತತ್ವಗಳಿಗೆ ವಿರುದ್ಧವಾಗಿರುವ ಕಾರಣ ಪಾಕಿಸ್ತಾನದ ವಿರೋಧವಿದೆ ಎಂದು ಲೋಧಿ ಹೇಳಿದ್ದಾರೆ.
Advertisement