ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ನ ಖ್ಯಾತ ಪ್ರಧಾನಿ ಜಾನ್ ಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಎಂಟು ವರ್ಷಗಳ ನಂತರ ಇದೀಗ ಅಧಿಕಾರದಿಂದ ಕೆಳಗಿಳಿಯಲು ಸೂಕ್ತ ಸಮಯ ಎಂದು ಭಾವಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
''ಇಲ್ಲಿಯವರೆಗೆ ತೆಗೆದುಕೊಂಡ ನಿರ್ಧಾರಗಳಲ್ಲಿ ಇದು ಅತ್ಯಂತ ಕಠಿಣವಾದದ್ದು. ಮುಂದೆ ಏನು ಮಾಡುತ್ತೇನೆ ಎಂಬುದು ನನಗೆ ಗೊತ್ತಿಲ್ಲ'' ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ತಮ್ಮನ್ನು ತಾವು ಎಂದಿಗೂ ವೃತ್ತಿಪರ ರಾಜಕೀಯ ವ್ಯಕ್ತಿಯಾಗಿ ನೋಡಿಲ್ಲ ಎಂದು ಹೇಳಿದರು.ಪಕ್ಷದ ನಾಯಕನಾಗಿ ಮತ್ತು ದೇಶದ ಪ್ರಧಾನಿಯಾಗಿ ಸಿಕ್ಕಿದ ಅನುಭವ ಅಭೂತಪೂರ್ವ ಎಂದರು.
ಕಿ, ಮಾಜಿ ಮೆರಿಲ್ಲ್ ಲಿಂಚ್ ಕರೆನ್ಸಿ ನಾಯಕನಾಗಿದ್ದು, ಇತ್ತೀಚಿಗೆ ಪ್ರಧಾನಿಯಾಗಿ 8 ವರ್ಷಗಳಾದ ಹಿನ್ನೆಲೆಯಲ್ಲಿ ಆಚರಣೆಯನ್ನು ಮಾಡಿದ್ದರು. ಬಲಪಂಥೀಯ ನ್ಯಾಷನಲ್ ಪಾರ್ಟಿಯ ನಾಯಕನಾಗಿ 10 ವರ್ಷಗಳನ್ನು ಪೂರೈಸಿದ್ದರು, ಮುಂದಿನ ವಾರ ಅವರ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಉಪ ಪ್ರಧಾನಿ ಬಿಲ್ ಇಂಗ್ಲಿಷ್ ಮುಂದಿನ ನಾಯಕರಾಗುವ ಸಾಧ್ಯತೆಯಿದೆ. ನಾನು ಈಗ ಬಹಳ ಖುಷಿಯಾಗಿದ್ದೇನೆ. ಇನ್ನು ಮುಂದೆ ಪತ್ನಿ ಬ್ರೊನಗ್ ಮತ್ತು ಮಕ್ಕಳಾದ ಸ್ಟೆಫನಿ ಮತ್ತು ಮ್ಯಾಕ್ಸ್ ಅವರ ಜೊತೆ ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತೇನೆ ಎಂದರು.
ನನ್ನ ರಾಜೀನಾಮೆಗೆ ಹಲವು ಕಾರಣಗಳಿದ್ದು ಅವುಗಳಲ್ಲಿ ಮುಖ್ಯವಾದದ್ದು ನನ್ನ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು. ಇದು ಹೇಳಲು ಸುಲಭ ಅನಿಸುತ್ತದೆಯಾದರೂ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಬಹಳ ಕಷ್ಟವಾಯಿತು ಎಂದು ಕಿ ಹೇಳಿದರು.
ರಾಜೀನಾಮೆ ನೀಡುವಾಗ ಉತ್ತಮ ಸಹೋದ್ಯೋಗಿಗಳು, ಸಂಪುಟ ಸಚಿವರ ತಂಡವನ್ನು ರಚಿಸಿದ್ದೇನೆ ಎಂಬ ತೃಪ್ತಿ, ಸಂತೋಷವಿದೆ. ಇದು ಮುಂದಿನ ನಾಯಕರಿಗೆ ಸಹಾಯವಾಗಲಿದೆ ಎಂದರು.
ನ್ಯೂಜಿಲ್ಯಾಂಡ್ ಸಂಸತ್ತಿಗೆ 2002ರಲ್ಲಿ ಪ್ರವೇಶಿಸಿದ್ದ ಜಾನ್ ಕಿ 4 ವರ್ಷಗಳ ನಂತರ ನ್ಯಾಷನಲಿಸ್ಟ್ ಪಕ್ಷದ ನಾಯಕತ್ವ ವಹಿಸಿದರು. 2008ರಲ್ಲಿ 9 ವರ್ಷಗಳ ಹೆಲೆನ್ ಕ್ಲಾರ್ಕ್ ನಾಯಕತ್ವದ ಲೇಬರ್ ಪಕ್ಷದ ಆಡಳಿತವನ್ನು ಕೊನೆಗೊಳಿಸಿ ಅಧಿಕಾರ ಸ್ವೀಕರಿಸಿಕೊಂಡಿದ್ದರು.
ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ಜಾನ್ ಕಿ ಅಪಾರ ಜನಮೆಚ್ಚುಗೆ ಗಳಿಸಿದ್ದರು.
2011ರಲ್ಲಿ ಕ್ರಿಸ್ಟ್ ಚರ್ಚ್ ಎಂಬಲ್ಲಿ ಭಾರೀ ಪ್ರಮಾಣದ ಭೂಕಂಪ ಸಂಭವಿಸಿ 185 ಜನ ಮೃತಪಟ್ಟಿದ್ದರು. ಆ ಸಮಯದಲ್ಲಿ ಜಾನ್ ಕಿ ನೇತೃತ್ವದ ಸರ್ಕಾರ ಜನರ ನೆರವಿಗೆ ಧಾವಿಸಿದ್ದಕ್ಕೆ ಅಪಾರ ಹರ್ಷ ವ್ಯಕ್ತವಾಗಿತ್ತು.