

ವಾಷಿಂಗ್ಟನ್: "ಅಮೆರಿಕದ ವಸ್ತುಗಳನ್ನೇ ಕೊಳ್ಳಿರಿ, ಅಮೆರಿಕನ್ನರಿಗೇ ಕೆಲಸ ನೀಡಿ" ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಬುಧವಾರ ವಿಸ್ಕಿನ್ಸನ್ ನಲ್ಲಿ ನಡೆದ ಅಭಿನಂದನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಡೊನಾಲ್ಡ್ ಟ್ರಂಪ್, ತಮ್ಮ ಸರ್ಕಾರದ ಮೊದಲ ಆದ್ಯತೆ ಏನಿದ್ದರೂ ಅಮೆರಿಕ ಮತ್ತು ಅಮೆರಿಕನ್ನರು. ವಿಶ್ವದ ಯಾವುದೇ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ತಮ್ಮ ಸರ್ಕಾರ ಎರಡು ಸಾಮಾನ್ಯ ನಿಯಮವನ್ನು ಕಡ್ಡಾಯವಾಗಿ ಅನುಸರಿಸುತ್ತದೆ. ಅದೇನೆಂದರೆ ಅಮೆರಿಕದ ವಸ್ತುಗಳನ್ನೇ ಕೊಳ್ಳಿರಿ ಮತ್ತು ಅಮೆರಿಕನ್ನರಿಗೇ ಕೆಲಸ ನೀಡಿ ಎಂಬ ನಿಯಮವನ್ನು ತಮ್ಮ ಸರ್ಕಾರ ಅನುಸರಿಸುತ್ತದೆ ಎಂದು ಹೇಳಿದ್ದಾರೆ.
ತಮ್ಮ ಸರ್ಕಾರ ವಿಶ್ವದ ಯಾವುದೇ ದೇಶಗಳೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡರೂ ತಮ್ಮ ಆಧ್ಯತೆ ಏನಿದ್ದರೂ ಮೊದಲು ಅಮೆರಿಕ ಮತ್ತು ಅಮೆರಿಕನ್ನರು. ಈ ನಿಯಮವನ್ನು ಮಾತ್ರ ನಾನು ಕಡ್ಡಾಯವಾಗಿ ಪಾಲನೆ ಮಾಡುತ್ತೇನೆ. ಇತರೆ ದೇಶಗಳು ಕೂಡ ಇದನ್ನು ಪಾಲಿಸುವಂತೆ ಮಾಡುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ವಾರ್ಷಿಕ ಸುಮಾರು 800 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದಗಳಿಂದ ಅಮೆರಿಕಕ್ಕೆ ಎಷ್ಟು ಲಾಭ? ಎಷ್ಟು ಅಮೆರಿಕನ್ನರಿಗೆ ಕೆಲಸ ದೊರೆತಿದೆ ಎಂದು ಯಾರಾದರೂ ಚಿಂತನೆ ಮಾಡಿದ್ದಾರಾ? ಉತ್ತರ ಅಮೆರಿಕಾದ ಮುಕ್ತ ವಾಣಿಜ್ಯ ಒಪ್ಪಂದದ ಬಳಿಕ ಅಮೆರಿಕ ತನ್ನ ಶೇ.1/3 ಭಾಗದಷ್ಟು ಉದ್ಯೋಗಾವಶಗಳನ್ನು ಕಳೆದುಕೊಂಡಿದೆ. ಸುಮಾರು 70 ಸಾವಿರಕ್ಕೂ ಅಧಿಕ ಕಾರ್ಖಾನೆಗಳನ್ನು ಕಳೆದುಕೊಂಡಿದ್ದೇವೆ. 70 ಸಾವಿರ ಕಾರ್ಖಾನೆಗಳು ಅಂದರೆ ಕಡಿಮೆ ಸಂಖ್ಯೆ ಏನೂ ಅಲ್ಲ. ಹೀಗಾಗಿಯೇ ತಾವು ಮೊದಲು ಅಮೆರಿಕ ಮತ್ತು ಅಮೆರಿಕನ್ನರು ಬಳಿಕವೇ ಉಳಿದವರು ಎಂಬ ನೀತಿಗೆ ಬದ್ಧನಾಗಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅಭೂತಪೂರ್ವ ವಿಜಯ ಸಾಧಿಸಿದ್ದರಿಂದ ತಮಗೆ ಮತನೀಡಿದ ಮತದಾರರಿಗೆ ಧನ್ಯವಾದ ಆರ್ಪಿಸಲು ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷ ಅಭಿನಂದನಾ ರ್ಯಾಲಿಯನ್ನು ಹಮ್ಮಿಕೊಂಡಿದೆ.