
ವಾಷಿಂಗ್ಟನ್: ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನ ಮಾರಾಟ ಮಾಡಿದ ಅಮೆರಿಕ ಕ್ರಮವನ್ನು ಭಾರತ ಖಂಡಿಸಿದ ಬೆನ್ನಲ್ಲೇ ಪ್ರಕರಣಕ್ಕೆ ತೇಪೆ ಹಚ್ಚಲು ದೊಡ್ಡಣ್ಣ ಮುಂದಾಗಿದ್ದು, ಪಾಕಿಸ್ತಾನ ಅಣ್ವಸ್ತ್ರಗಳ ರಕ್ಷಣೆ ಕುರಿತು ತನಗೆ ಆತಂಕ ಇದೆ ಎಂದು ಹೇಳಿದೆ.
ಡಾನ್ ಪತ್ರಿಕೆ ವರದಿ ಮಾಡಿರುವಂತೆ, ಅಣ್ವಸ್ತ್ರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡೆ ಕುರಿತು ತಮಗೆ ಆತಂಕವಿದ್ದು, ಉಭಯ ದೇಶಗಳು ಪರಸ್ಪರ ಮಾತುಕತೆ ಮೂಲಕ ಆತಂಕ ಹೋಗಲಾಡಿಸಲಿಕೊಳ್ಳಬೇಕು ಎಂದು ಅಮೆರಿಕದ ಉಪ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ ಎಂದು ವರದಿ ಮಾಡಿದೆ.
"ಉಭಯ ದೇಶಗಳ ಪರಮಾಣು ಅಣ್ವಸ್ತ್ರಗಳ ಭದ್ರತೆ ಕುರಿತಂತೆ ತಮಗೆ ಕಾಳಜಿ ಇದ್ದು, ಪಾಕಿಸ್ತಾನದೊಂದಿಗಿನ ನಮ್ಮ ಚರ್ಚೆಯಲ್ಲಿ ಈ ವಿಚಾರ ಸಾಮಾನ್ಯವಾಗಿರುತ್ತದೆ. ಅಂತೆಯೇ ಪಾಕಿಸ್ತಾನ ಮತ್ತು ಭಾರತ ದೇಶಗಳ ಪ್ರಾದೇಶಿಕ ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಸೌಹಾರ್ಧಯುತವಾಗಿ ಪರಿಹರಿಸಿಕೊಳ್ಳಬೇಕು. ಈ ಸಂಬಂಧ ಬೇಕಾದರೆ ಅಮೆರಿಕ ಬೆಂಬಲ ನೀಡಲು ಸಿದ್ಧ ಎಂದು ಟೋನರ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಅತ್ಯಾಧುನಿಕ ಯುದ್ಧ ವಿಮಾನ ಎಫ್-16 ಅನ್ನು ಮಾರಾಟ ಮಾಡಿದ ಅಮೆರಿಕದ ನಿರ್ಧಾರದ ವಿರುದ್ಧ ಭಾರತ ನಿನ್ನೆಯಷ್ಟೇ ತನ್ನ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿತ್ತು. ಇನ್ನು ಇದಕ್ಕೂ ಮೊದಲು ಪಾಕಿಸ್ತಾನ ಅಣ್ವಸ್ತ್ರ ಯೋಜನೆ ವೇಗವಾಗಿ ಬೆಳೆಯುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಮಾಧ್ಯಮಗಳ ವರದಿಯನ್ನು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಅವರು, ಮಾಧ್ಯಮದ ವರದಿಗಳು ತಾರತಮ್ಯದ ಅಲೆ ಎಂದು ಟೀಕಿಸಿದ್ದರು.
Advertisement