ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಕೈವಾಡವಿದೆ ಎಂದು ಅಮೆರಿಕದ ವೈಟ್ ಹೌಸ್ ನ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಂಜಾಬ್ ನ ಪಠಾಣ್ ಕೋಟ್ ದಾಳಿ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿಯಾಗಿದ್ದ ಬ್ರೂಸ್ ರೀಡೆಲ್, ಐಎಸ್ ಐ 15 ವರ್ಷಗಳ ಹಿಂದೆ ಜೈಶ್ ಮೊಹಮ್ಮದ್ ಸಂಘಟನೆಯನ್ನು ಸ್ಥಾಪಿಸಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಅಚ್ಚರಿ ಭೇಟಿಯಿಂದ ಉಭಯ ದೇಶಗಳ ಸಂಬಂಧ ಉತ್ತಮಗೊಳ್ಳುವ ಸಾಧ್ಯತೆ ಇತ್ತು. ಇದನ್ನು ಅಡ್ಡಿ ಪಡಿಸುವ ಉದ್ದೇಶದಿಂದ ಪಠಾಣ್ ಕೋಟ್ ಮತ್ತು ಆಫ್ಗಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಮೇಲೆ ಪಾಕಿಸ್ತಾನದ ಐಎಸ್ ಐ ದಾಳಿ ನಡೆಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಿಂದ ಆಗಬಹುದಾದ ತೊಂದರೆಯ ನೆಪದಲ್ಲಿ ದೊಡ್ಡ ಮೊತ್ತವನ್ನು ಐಎಸ್ ಐ ಪಡೆದುಕೊಳ್ಳುತ್ತದೆ, ಅಷ್ಟೇ ಅಲ್ಲದೇ, ಐಎಸ್ ಐ ಜನರಲ್ ಗಳ ಅಧೀನದಲ್ಲಿದ್ದು, ಸೇನೆಯ ಅಧಿಕಾರಿಗಳೇ ಅದರಲ್ಲಿ ಇದ್ದಾರೆ. ಗೂಢಾಚಾರವನ್ನು ಪಾಕಿಸ್ತಾನದ ಸೇನೆಯೇ ನಿಯಂತ್ರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.