
ಚಂಡೀಗಡ: ಪಠಾಣ್‍ಕೋಟ್ ದಾಳಿ ಹಿನ್ನೆಲೆಯಲ್ಲಿ ಎಚ್ಚೆತ್ತಿ ರುವ ಕೇಂದ್ರ ಗೃಹ ಸಚಿವಾಲಯ, ಭಾರತ -ಪಾಕಿಸ್ತಾನ ಗಡಿಯಲ್ಲಿನ ಸೂಕ್ಷ್ಮಪ್ರದೇಶಗಳಲ್ಲಿ ಲೇಸರ್ ಬೇಲಿ ನಿರ್ಮಿಸಲು ನಿರ್ಧರಿಸಿದೆ.
ಉಗ್ರರು ಬೇಲಿರಹಿತ ಗಡಿಪ್ರದೇಶಗಳ ಮೂಲಕ ಒಳನುಸುಳುವುದನ್ನು ತಪ್ಪಿಸುವುದೇ ಇದರ ಉದ್ದೇಶ. ಭಾರತ-ಪಾಕ್ ಗಡಿಯಲ್ಲಿ 40ಕ್ಕೂ ಹೆಚ್ಚು ಸೂಕ್ಷ್ಮಬೇಲಿರಹಿತ ಪ್ರದೇಶಗಳಿದ್ದು, ಇಲ್ಲಿ ಲೇಸರ್ ವಾಲ್ ತಂತ್ರಜ್ಞಾನವನ್ನು ಅಳವಡಿಸ ಲಾಗುತ್ತದೆ. ಗಡಿ ಭದ್ರತಾ ಪಡೆಯೀ ಈ ಲೇಸರ್‍ಗೋಡೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.
40ರ ಪೈಕಿ ಪಂಜಾಬ್‍ನಲ್ಲೇ ಅತಿ ಹೆಚ್ಚು ಸೂಕ್ಷ್ಮಪ್ರದೇಶಗಳಿದ್ದು, ಲೇಸರ್ ಬೇಲಿ ಅಳವಡಿಸುವುದರಿಂದಾಗಿ ಪಾಕ್ ಮೂಲದ ಉಗ್ರರು ಅಂತಾರಾಷ್ಟ್ರೀಯ ಗಡಿಯೊಳಗೆ ನುಸುಳುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಲೇಸರ್ ವಾಲ್?: ಯಾವುದೇ ವಸ್ತು ಅಥವಾ ವ್ಯಕ್ತಿಗಳು ಗಡಿಯನ್ನು ದಾಟಲೆತ್ನಿಸಿದರೆ, ಅದನ್ನು ಪತ್ತೆಹಚ್ಚುವ ತಂತ್ರಜ್ಞಾನವಿದು. ಇಲ್ಲಿ ಲೇಸರ್ ಮೂಲ ಮತ್ತು ಡಿಟೆಕ್ಟರ್ ನಡುವಿನ ಹಾದಿಯನ್ನು ಯಾರಾದರೂ ದಾಟಿದ್ದೇ ಆದಲ್ಲಿ, ಕೂಡಲೇ ಜೋರಾಗಿ ಸೈರನ್ ಮೊಳಗುತ್ತದೆ. 40 ಸೂಕ್ಷ್ಮಪ್ರದೇಶಗಳ ಪೈಕಿ 5-6 ಕಡೆ ಈಗಾಗಲೇ ಲೇಸರ್ ವಾಲ್ ಅಳವಡಿಸಲಾಗಿದೆ. ನದಿಯುದ್ದಕ್ಕೂ ಇರುವ ಬೆಳಕಿನ ಕಿರಣವು ನುಸುಳುಕೋರರು ಗಡಿ ದಾಟಿದೊಡನೆ ಶಬ್ದ ಮಾಡುತ್ತದೆ.
ಗಡಿಯಲ್ಲಿ ನುಸುಳಿದ್ದ ದಾಳಿಕೋರರು: ಪಠಾಣ್‍ಕೋಟ್ ದಾಳಿಕೋರರು ಅಂದರೆ ಪಾಕ್‍ನ ಜೈಶ್ ಉಗ್ರರು ಬಮಿವಾಲ್‍ನ ಉಜ್ ನದಿಯ ಮೂಲಕ ಭಾರತದೊಳಕ್ಕೆ ನುಸುಳಿದ್ದರು. ಇಲ್ಲಿ ಲೇಸರ್ ವಾಲ್ ಅಳವಡಿ ಸಿರಲಿಲ್ಲ. ಜತೆಗೆ, 130 ಮೀಟರ್ ವ್ಯಾಪ್ತಿಯ ನದಿಯ ಸಮೀಪ ಅಳವಡಿಸಲಾಗಿದ್ದ ಕ್ಯಾಮೆರಾ ಕೂಡ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ, ಉಗ್ರರು ನುಸುಳಿದ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಪಠಾಣ್‍ಕೋಟ್ ದಾಳಿ ಬಳಿಕ ಪ್ರಧಾನಿ ಮೋದಿ ಭೇಟಿ ನೀಡಿದ ಮುನ್ನಾದಿನ ಬಿಎಸ್‍ಎಫ್ ಈ ಪ್ರದೇಶದಲ್ಲಿ ಲೇಸರ್ ವಾಲ್ ಅಳವಡಿಸಿತ್ತು.
Advertisement