ನವದೆಹಲಿ: ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸ್ಥಗಿತಗೊಂಡಿರುವ ಉಭಯ ರಾಷ್ಟ್ರಗಳ ಮಾತುಕತೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದ್ದು, ಇಸ್ಲಾಮಾಬಾದ್ ನಲ್ಲಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪಾಕಿಸ್ತಾನದಲ್ಲಿನ ಭಾರತದ ನೂತನ ರಾಯಭಾರಿ ಗೌತಮ ಬಂಬವಾಲೆ ಅವರು ಪ್ರಧಾನಿ ನವಾಜ್ ಷರೀಫ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ನಸೀರ್ ಖಾನ್ ಜಂಜುವಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹಾಗೂ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹಮದ್ ಚೌಧರಿ ನಡುವೆ ಮಾತುಕತೆ ನಡೆಯಲಿದೆ.
ಜನವರಿಯಲ್ಲಿ ನಡೆಯಬೇಕಿದ್ದ ಈ ಮಾತುಕತೆ ಪಂಜಾಬ್‌ನ ಪಠಾಣ್‌ಕೋಟ್ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಅಲ್ಲದೇ, ಈ ಮಾತುಕತೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಗಳು ಎದುರಾಗಿತ್ತು. ಆದರೆ, ಈಗ ಗೊಂದಲಕ್ಕೆ ತೆರೆ ಬಿದ್ದಿದೆ.