
ಪ್ಯಾರಿಸ್: ಗುರುವಾರ ರಾತ್ರಿ ಫ್ರಾನ್ಸ್ ನ ನೀಸ್ ನಗರದ ಮೇಲೆ ಭೀಕರ ಉಗ್ರ ದಾಳಿ ನಡೆಸಿದ್ದ ಇಸಿಸ್ ಉಗ್ರಗಾಮಿ ಮೂಲತಃ ಟ್ಯುನಿಷಿಯಾದ ಮೂಲದವನವೆಂದು ತಿಳಿದುಬಂದಿದೆ.
ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಬ್ಯಾಸ್ಟ್ಲೈಲ್ ಡೇ ನಿಮಿತ್ತ ನೀಸ್ ನಗರದ ರಿವೀರಾ ಬೀಚ್ ರೆಸಾರ್ಟ್ ನಲ್ಲಿ ಏರ್ಪಡಿಸಲಾಗಿದ್ದ ಸಿಡಿಮದ್ದ ಪ್ರದರ್ಶನ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಆಗಮಿಸಿದ್ದರು. ಈ ವೇಳೆ ಭಾರಿ ಸ್ಫೋಟಕ ತುಂಬಿದ್ದ ಟ್ರಕ್ ನುಗ್ಗಿಸಿದ್ದ ವ್ಯಕ್ತಿ 80 ಮಂದಿಯನ್ನು ಧಾರುಣವಾಗಿ ಹತ್ಯೆಗೈದಿದ್ದ. ಅಲ್ಲದೆ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಟ್ರಕ್ ನುಗ್ಗಿಸಿದ್ದ ವ್ಯಕ್ತಿಯ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದು, ಆತ ಮೂಲತಃ ಟ್ಯುನಿಷಿಯಾ ಮೂಲದವನೆಂದು ತಿಳಿದುಬಂದಿದೆ.
ಎನ್ ಕೌಂಟರ್ ನಲ್ಲಿ ದಾಳಿ ನಡೆಸಿದ ಉಗ್ರನನ್ನು ಕೊಂದು ಹಾಕಿದ ಬಳಿಕ ಟ್ರಕ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದ ಪೊಲೀಲಸಿರಿಗೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಅಲ್ಲಿದ್ದ ಒಂದು ಗುರುತಿನ ಚೀಟಿಯಲ್ಲಿ ಈತ ಟ್ಯುನಿಷಿಯಾ ಮೂಲದವನೆಂದು ತಿಳಿದುಬಂದಿದೆ. ಆದರೆ ದಾಳಿಕೋರನ ಹೆಸರು ಮಾತ್ರ ಈ ವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಉಗ್ರ ಜಾಲದ ಬೆನ್ನಟ್ಟಿದ್ದಾರೆ.
ಪೊಲೀಸರ ಮೇಲೆ ಗುಂಡು ಹಾರಿಸಿದ್ದ ದುಷ್ಕರ್ಮಿ
ಆರಂಭದಲ್ಲಿ ಟ್ರಕ್ ಬ್ರೇಕ್ ಫೇಲ್ಯೂರ್ ಆಗಿರಬಹುದು ಎಂದು ಪೊಲೀಸರು ಟ್ರಕ್ ಅನ್ನು ಬಲವಂತವಾಗಿ ತಡೆಯಲೆತ್ನಿಸಿದ್ದರು. ಆದರೆ ಅದರೊಳಗಿದ್ದ ಚಾಲಕ ಉದ್ದೇಶ ಪೂರ್ವಕವಾಗಿ ವಾಹನವನ್ನು ಜನರ ಮೇಲೆ ಚಲಾಯಿಸುತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ಆತನತ್ತ ತಮ್ಮ ಬಂದೂಕುಗಳನ್ನು ತಿರುಗಿಸಿದರು. ಈ ವೇಳೆ ಟ್ರಕ್ ಚಾಲಕ ಉಗ್ರಗಾಮಿ ಕೂಡ ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದು ವಾಹನ ಚಲಾಯಿಸುತ್ತಲೇ ಪೊಲೀಸರ ಮೇಲೆ ಗುಂಡಿನ ಮಳೆಗೈದಿದ್ದ. ಈ ವೇಳೆ ಚಾಕಚಕ್ಯತೆ ಮೆರೆದ ಪೊಲೀಸರು ವಾಹನ ಬರುತ್ತಿದ್ದ ಮುಂಭಾಗದಿಂದ ಅಂದರೆ ಕನ್ನಡಿ ಮೂಲಕವಾಗಿ ಆತನ ಮೇಲೆ ಗುಂಡು ಹಾರಿಸಿದರು.
ಪೊಲೀಸರು ಹಾರಿಸಿದ ಒಂದೆರಡು ಗುಂಡು ಆತನ ದೇಹ ಸೇರುತ್ತಿದ್ದಂತೆಯೇ ಆತ ವಾಹನವನ್ನು ರಸ್ತೆ ಮಧ್ಯೆಯೇ ನಿಲ್ಲಿಸಿದ್ದ ಈ ವೇಳೆ ಮತ್ತೆ ಪೊಲೀಸರು ಮತ್ತೆ ಗುಂಡು ಹಾರಿಸಿದ ಪರಿಣಾಮ ಆತನ ಪ್ರಾಣ ಪಕ್ಷಿ ಅಲ್ಲಿಯೇ ಹಾರಿಹೋಗಿತ್ತು. ಆತನ ವರ್ತನೆಯನ್ನು ಕಂಡ ಜನರು ಆತ ಉದ್ದೇಶಪೂರ್ವಕವಾಗಿಯೇ ಜನರ ಮೇಲೆ ವಾಹನ ಹರಿಸಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್ ಮೇಲೆ 2ನೇ ಅತೀ ದೊಡ್ಡ ದಾಳಿ
ಈ ಹಿಂದೆ ಕಳೆದ ನವೆಂಬರ್ ನಲ್ಲಿ ಪ್ಯಾರಿಸ್ ನಗರದ ಮೇಲೆ ಮುಂಬೈ ದಾಳಿ ಮಾದರಿಯಲ್ಲಿ ದಾಳಿ ನಡೆಸಿದ್ದ ಇಸಿಸ್ ಉಗ್ರರು 162 ಮಂದಿಯ ಮಾರಣಹೋಮ ನಡೆಸಿದ್ದರು. ಈ ಘಟನೆ ಬಳಿಕ ಫ್ರಾನ್ಸ್ ನಲ್ಲಿ ಹಲವು ಉಗ್ರ ದಾಳಿಗಳು ನಡೆದಿತ್ತಾದರೂ, ಇಷ್ಟು ಪ್ರಮಾಣದಲ್ಲಿ ಜನ ಸತ್ತಿರಲಿಲ್ಲ. ಹೀಗಾಗಿ ಕಳೆದ 8 ತಿಂಗಳಲ್ಲೇ ಫ್ರಾನ್ಸ್ ನಲ್ಲಿ ನಡೆದ 2ನೇ ಅತೀದೊಡ್ಡ ಭಯೋತ್ಪಾದಕ ಕೃತ್ಯ ಇದು ಎಂದು ಹೇಳಲಾಗುತ್ತಿದೆ.
Advertisement