
ಕರಾಚಿ: ವಿವಾದಿತ ಪಾಕಿಸ್ತಾನ ಮಾಡೆಲ್ ಕಂದೀಲ್ ಬಲೋಚ್ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಮುಹಮ್ಮದ್ ವಾಸೀಂನನ್ನು ಅಧಿಕಾರಿಗಳು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಸಾಕಷ್ಟು ವಿವಾದಿತ ಹೇಳಿಕೆಗಳ ಮೂಲಕ ಸದಾಕಾಲ ಸುದ್ದಿಯಲ್ಲಿರುತ್ತಿದ್ದ ಮಾಡೆಲ್ ಕಂದಿಲ್ ಬಲೋಚ್ ಳನ್ನು ನಿನ್ನೆಯಷ್ಟೇ ಹತ್ಯೆ ಮಾಡಲಾಗಿತ್ತು. ಕಂದೀಲ್ ನನ್ನು ಆಕೆಯ ಸಹೋದರನೇ ಮರ್ಯಾದಾ ಹತ್ಯೆ ಮಾಡಿದ್ದಾನೆಂದು ಹೇಳಲಾಗುತ್ತಿತ್ತು.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಪಾಕಿಸ್ತಾನ ಅಧಿಕಾರಿಗಳು ಇದೀಗ ಮಾಡೆಲ್ ಸಹೋದರ ಮುಹಮ್ಮದ್ ವಾಸೀಂ ನನ್ನು ಡೇರಾ ಘಾಜಿ ಖಾನ್ ನಲ್ಲಿ ಬಂಧನಕ್ಕೊಳಪಡಿಸಿದ್ದಾರೆ.
ಇನ್ನು ಘಟನೆ ಕುರಿತಂತೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿರುವ ಮುಹಮ್ಮದ್ ವಾಸೀಂ, ತಾನೇ ತನ್ನ ಸಹೋದರಿ ಕಂದೀಲ್ ಳನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕ್ಕೊಂಡಿದ್ದಾನೆ. ಅಲ್ಲದೆ, ಹತ್ಯೆ ಕುರಿತಂತೆ ಎಳೆಎಳೆಯಾಗಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಸಹೋದರಿ ಹಾಕುತ್ತಿದ್ದ, ವಿಡಿಯೋಗಳು, ಸೆಲ್ಫೀ ಫೋಟೋಗಳು ಹಾಗೂ ಹೇಳಿಕೆಗಳು ಆಕೆಯನ್ನು ಸಾಯಿಸಲು ಕಾರಣವಾಯಿತು. ಇದಲ್ಲೆದೆ, ಮೌಲ್ವಿಯೊಂದಿಗಿನ ಸೆಲ್ಫೀ ಮತ್ತು ಇನ್ನೂ ಕೆಲ ವಿಚಾರಗಳೂ ಕೂಡ ಕಾರಣವಾಯಿತು ಎಂದು ಹೇಳಿದ್ದಾನೆಂದು ಡಾನ್ ವರದಿ ಮಾಡಿದೆ.
ಕಂದೀಲ್ ನನ್ನು ಸಾಯಿಸುವಾಗ ನಾನು ಮಾದಕ ದ್ರವ್ಯವನ್ನು ಸೇವಿಸಿದ್ದೆ. ಹೀಗಾಗಿ ಸರಿಯಾಗಿ ನೆನಪಾಗುತ್ತಿಲ್ಲ. ನಾನು ಆಕೆಯನ್ನು ಸಾಯಿಸುತ್ತಿದ್ದೇನೆಂಬುದು ಆಕೆಗೂ ತಿಳಿದಿರಲಿಲ್ಲ. ಸಾಯಿಸುವುದಕ್ಕೂ ಮುನ್ನ ಆಕೆಗೆ ಕೆಲ ಮಾತ್ರೆಗಳನ್ನು ನೀಡಿದ್ದೆ. ನಂತರ ಆಕೆಯ ಕತ್ತನ್ನು ಹಿಸುಕಿ, ಉಸಿರುಗಟ್ಟಿಸಿ ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.
ಘಟನೆ ಕುರಿತಂತೆ ಮಾತನಾಡಿರುವ ಪೊಲೀಸ್ ಮುಖ್ಯಸ್ಥ ಅಝರ್ ಅಕ್ರಮ್ ಅವರು , ಕಂದೀಲ್ ನನ್ನು ಹತ್ಯೆ ಮಾಡಿದ ಬಳಿಕ ವಾಸೀಮ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಡೇರಾ ಘಾಜಿ ಖಾನ್ ಗೆ ಓಡಿಹೋಗಿದ್ದ. ಇದೀಗ ವಾಸೀಂ ಜೊತೆ ಓಡಿಹೋಗಿದ್ದ ಇಬ್ಬರು ಗೆಳೆಯರಿಗಾಗಿ ಬಲೆ ಬೀಸಲಾಗಿದೆ. ಶೀಘ್ರದಲ್ಲೇ ಇಬ್ಬರನ್ನು ಬಂಧಿಸಲಾಗುತ್ತದೆ. ಬಂಧನದ ನಂತರ ವಿಚಾರಣೆ ನಡೆಸಿ ಮರ್ಯಾದಾ ಹತ್ಯೆಯಲ್ಲಿ ಅವರು ಭಾಗಿಯಾಗಿದ್ದರೋ ಇಲ್ಲವೋ ಎಂಬುದು ತಿಳಿಯಲಾಗುತ್ತದೆ ಎಂದು ಹೇಳಿದ್ದಾರೆ.
ಕಂದೀಲ್ ತಂದೆ ಮುಹಮ್ಮದ್ ಅಜೀಮ್ ಅವರು ಮಾತನಾಡಿ, ನನ್ನ ಮಗಳು ಹಬ್ಬದ ಆಚರಣೆ ಮಾಡುವ ಸಲುವಾಗಿ ಮುಲ್ತಾನ್ ನಿಂದ ಕರಾಚಿಗೆ ಬಂದಿದ್ದಳು. ಜುಲೈ.14 ರಂದು ತನ್ನ ಸಹೋದರ ವಾಸೀಮ್ ನನ್ನು ಭೇಟಿಯಾಗಿದ್ದಳು. ಕಂದೀಲ್ ಇತ್ತೀಚಿನ ದಿನಗಳಲ್ಲಿನ ಪ್ರಚಾರದ ವರ್ತನೆಗೆ ವಾಸೀಂ ವಿರೋಧ ವ್ಯಕ್ತಪಡಿಸಿದ್ದ. ಆಕೆಯ ವರ್ತನೆಗೆ ಬೇಸತ್ತು ವಾಸೀಂ ಹತ್ಯೆ ಮಾಡಿದ್ದಾನೆಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಕಂದೀಲ್ ಮೃತ ದೇಹವನ್ನು ಡೇರಾ ಘಾಜಿ ಖಾನ್ ನಲ್ಲಿರುವ ಆಕೆ ನಿವಾಸ ಶಾಹ್ ಸದ್ದಾರ್ದಿನ್'ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement