ಅಮೆರಿಕ ಸೇನೆ ಸೇರ್ಪಡೆಗೆ ಸಿದ್ಧವಾಯ್ತು ವಿಧ್ವಂಸಕ, ವಿವಾದಾತ್ಮಕ ಎಫ್-35 ಯುದ್ಧ ವಿಮಾನ!

ಅಮೆರಿಕ ಸೇನೆಯ ಬಹು ನಿರೀಕ್ಷಿತ ಯುದ್ಧ ವಿಮಾನ ಎಫ್-35 ಸೇನೆ ಸೇರ್ಪಡೆಗೆ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಸೇರ್ಪಡೆಗೊಳಿಸಲು ಪೆಂಟಗನ್ ಸಿದ್ಧತೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ...
ಎಫ್-35 ಯುದ್ಧ ವಿಮಾನ (ಸಂಗ್ರಹ ಚಿತ್ರ)
ಎಫ್-35 ಯುದ್ಧ ವಿಮಾನ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಅಮೆರಿಕ ಸೇನೆಯ ಬಹು ನಿರೀಕ್ಷಿತ ಯುದ್ಧ ವಿಮಾನ ಎಫ್-35 ಸೇನೆ ಸೇರ್ಪಡೆಗೆ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಸೇರ್ಪಡೆಗೊಳಿಸಲು ಪೆಂಟಗನ್ ಸಿದ್ಧತೆ  ಆರಂಭಿಸಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಪರ-ವಿರೋಧ ಚರ್ಚೆಗಳ ನಡುವೆಯೇ ಅಮೆರಿಕ ವಾಯು ಸೇನೆಗೆ ಎಫ್-35 ಯುದ್ಧ ವಿಮಾನವನ್ನು ಸೇರ್ಪಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಮುಂದಿನ ವಾರದೊಳಗೆ  ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ. ಪೆಂಟಗನ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ವೆಚ್ಚದ ಹಾಗೂ ವಿವಾದಾತ್ಮಕ ಯೋಜನೆ ಇದಾಗಿದ್ದು, ಹಲವು ವರ್ಷಗಳ  ವಿಳಂಬದ ಬಳಿಕ ವಿಮಾನ ಸೇನೆ ಸೇರ್ಪಡೆಗೆ ಸಿದ್ಧವಾಗಿದೆ.

15 ವರ್ಷಗಳ ಹಿಂದೆಯೇ ಈ ವಿಮಾನ ತಯಾರಿಕಾ ಯೋಜನೆ ಆರಂಭವಾಗಿತ್ತಾದರೂ, ತಾಂತ್ರಿಕ ದೋಷ, ಹೆಚ್ಚುವರಿ ನಿರ್ಮಾಣ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಿರ್ಮಾಣ  ಕಾರ್ಯ ವಿಳಂಬವಾಗಿತ್ತು. ವಿಮಾನವನ್ನು ಲಾಕ್ ಹೀಡ್ ಮಾರ್ಟಿನ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ತಯಾರಿಸಿದ್ದು, 2006ರಲ್ಲಿ ಇದರ ತಯಾರಿಕಾ ಕಾರ್ಯ ಆರಂಭವಾಗಿತ್ತು. 2014ರಲ್ಲಿ  ವಿಮಾನವನ್ನು ಪರೀಕ್ಷಾರ್ಥ ಪ್ರಯೋಗ ಹಾರಾಟಕ್ಕೆ ಒಳಪಡಿಸಲಾಗಿತ್ತು. ಆದರೆ ಟೇಕ್ ಆಫ್ ವೇಳೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮತ್ತೆ ವಿಮಾನ ಪರೀಕ್ಷಾರ್ಥ ಹಾರಾಟ  ಮುಂದಕ್ಕೆ ಹೋಯಿತು. ಇದೀಗ ಅಂದರೆ 2016ರ ವರ್ಷಾರಂಭದಲ್ಲಿ ನಡೆದ ಪರೀಕ್ಷಾರ್ಥ ಹಾರಾಟ ಯಶಸ್ಸುಗೊಂಡ ಹಿನ್ನಲೆಯಲ್ಲಿ ಅಮೆರಿಕ ಸೇನೆಗೆ ವಿಮಾನವನ್ನು ಸೇರ್ಪಡೆಗೊಳಿಸಲು  ನಿರ್ಧರಿಸಲಾಗಿದೆ.

ತಾಂತ್ರಿಕತೆಯಲ್ಲಿ ಉತ್ತುಂಗದಲ್ಲಿರುವ ವಿಮಾನ


ಇನ್ನು ವಿಶ್ವದ ಬಲಾಢ್ಯ ಸೇನೆ ಹಾಗೂ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಂದಿರುವ ಅಮೆರಿಕ ಸೇನಾಪಡೆಯಲ್ಲೇ ನೂತನ ಎಫ್-35 ಯುದ್ಧ ವಿಮಾನ ಉತ್ತುಂಗದ ಸ್ಥಿತಿಯಲ್ಲಿದೆ. ಐದನೇ  ತಲೆಮಾರಿನ ಯುದ್ಧ ವಿಮಾನವಾಗಿರುವ ಎಫ್-35 ಮೂರು ವಿಧಗಳಲ್ಲಿ ಲಭ್ಯವಿದೆ. ಎಫ್-35 ಎ ಸರಣಿಯ ವಿಮಾನಗಳು ವೆಚ್ಚ ಸುಮಾರು 153.1 ಮಿಲಿಯನ್ ಡಾಲರ್ ಗಳಾಗಿದ್ದರೆ, ಎಫ್-35 ಬಿ  ಸರಣಿಯ ವಿಮಾನಗಳು ವೆಚ್ಚ ಸುಮಾರು 196.5 ಮಿಲಿಯನ್ ಡಾಲರ್ ಗಳಾಗಿವೆ. ಇನ್ನು ಎಫ್-35 ಬಿ ಸರಣಿಯ ವಿಮಾನಗಳು ಸುಧಾರಿತ ವಿಮಾನಗಳಾಗಿದ್ದು, ಇವುಗಳ ನಿರ್ಮಾಣ ವೆಚ್ಚ  ಸುಮಾರು 199.4 ಮಿಲಿಯನ್ ಡಾಲರ್ ಗಳಾಗಿವೆ ಎಂದು ತಿಳಿದುಬಂದಿದೆ.

51.4 ಅಡಿ ಉದ್ದ ವಿರುವ ವಿಮಾನ, 14.2 ಅಡಿ ಎತ್ತರವಿದೆ. ಖಾಲಿ ಇರುವ ವೇಳೆ ಈ ಯುದ್ಧ ವಿಮಾನದ ತೂಕ 13,300 ಕೆಜಿಗಳಾಗಿದ್ದು, ಶಸ್ತ್ರಾಸ್ತ್ರ ಮತ್ತು ಇಂಧನ ತುಂಬಿರುವ ವೇಳೆ ವಿಮಾನದ  ತೂಕ ಸುಮಾರು 22,470 ಕೆಜಿಗಳಾಗಿರಲಿದೆ. ಇನ್ನು 31,800 ಕೆಜಿ ತೂಕದೊಂದಿಗೆ ಟೇಕ್ ಆಫ್ ಸಾಮರ್ಥ್ಯವನ್ನು ಈ ವಿಮಾನ ಹೊಂದಿದ್ದು, 8,382 ಕೆಜಿ ಇಂಧನ ಸಾಮರ್ಥ್ಯ ಹೊಂದಿದೆ. ಇದರ  ವೇಗ 1.6 ಮಾಚ್ (ಗಂಟೆಗೆ 1960 ಕಿ.ಮೀ) ಗಳಾಗಿದ್ದು, 60 ಸಾವಿರ ಅಡಿಎತ್ತರದಲ್ಲಿ ಸುಮಾರು 1,080 ದೂರ ಕ್ರಮಿಸಬಲ್ಲದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com