

ವಾಷಿಂಗ್ಟನ್: ವಿಶ್ವವಿದ್ಯಾಲಯದ ಪ್ರವೇಶ ಮಾನದಂಡವನ್ನು ಈಡೇರಿಸಿಲ್ಲ ಎಂಬ ಕಾರಣಕ್ಕೆ ತಮ್ಮ ದೇಶಕ್ಕೆ ಹಿಂತಿರುಗುವಂತೆ ಅಥವಾ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದುಕೊಳ್ಳುವಂತೆ ಅಮೆರಿಕದ ವೆಸ್ಟರ್ನ್ ಕೆಂಟುಕಿ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಮೊದಲ ಸೆಮಿಸ್ಟರ್ ನ 25 ಮಂದಿ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶ ನೀಡಲಾಗಿದೆ.
ಈ ವರ್ಷ ಜನವರಿಯಲ್ಲಿ ಸುಮಾರು 60 ಮಂದಿ ಭಾರತೀಯ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್ ಗೆ ಸೇರ್ಪಡೆಗೊಂಡಿದ್ದರು. ಅವರನ್ನು ದಾಖಲಿಸಿಕೊಳ್ಳಲು ವಿಶ್ವವಿದ್ಯಾಲಯ ಅಂತಾರಾಷ್ಟ್ರೀಯ ನೇಮಕಗಾರರನ್ನು ಬಳಸಿಕೊಂಡಿತ್ತು. ಈ ಬಗ್ಗೆ ಕೆಂಟುಕಿ ವಿಶ್ವವಿದ್ಯಾಲಯದ ಅಧ್ಯಕ್ಷ ಜೇಮ್ಸ್ ಗೇರಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿ, ವಿಶ್ವವಿದ್ಯಾಲಯ ರೆಮೆಡಿಯಲ್ ಸಹಾಯ ನೀಡಿದ್ದರೂ ಕೂಡ ಸುಮಾರು 40 ಮಂದಿ ಭಾರತೀಯ ವಿದ್ಯಾರ್ಥಿಗಳು ಪ್ರವೇಶದ ಮಾನದಂಡವನ್ನು ಪೂರೈಸಿಲ್ಲ. ಹಾಗಾಗಿ 60 ಮಂದಿ ಭಾರತೀಯ ವಿದ್ಯಾರ್ಥಿಗಳಲ್ಲಿ ಕೇವಲ 35 ಮಂದಿಗೆ ಪ್ರವೇಶಾವಕಾಶ ನೀಡಲಾಗಿದ್ದು, ಇನ್ನು 25 ಮಂದಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಆದಿತ್ಯ ಶರ್ಮ ಪ್ರತಿಕ್ರಿಯೆ ನೀಡಿ, ಪ್ರವೇಶ ಸಿಗದ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದಿಂದ ವಿದ್ಯಾಭ್ಯಾಸಕ್ಕೋಸ್ಕರ ಇಲ್ಲಿಗೆ ಬಂದಿದ್ದರು. ಅವರು ಸಾಕಷ್ಟು ಹಣ ಹೂಡಿಕೆ ಮಾಡಿ ಪ್ರವೇಶ ಸಿಗದಿರುವಾಗ ನೋವಾಗುತ್ತದೆ. ಆದರೆ ಕೆಲವು ಭಾರತೀಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮಾನದಂಡವನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅಮೆರಿಕ ಕಾಂಗ್ರೆಸ್ ನ್ನುದ್ದೇಶಿಸಿ ಮಾತನಾಡಲಿದ್ದಾರೆ.