
ಇಸ್ಲಾಮಾಬಾದ್: ಸೆಕ್ಸ್ ಗೆ ನಿರಾಕರಿಸಿದ ಮಂಗಳಮುಖಿ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿರುವ ಧಾರುಣ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿರುವ ವಾಯುವ್ಯ ಖೈಬರ್ ಪಕ್ತುಂಖ್ವಾ ಪ್ರದೇಶದಲ್ಲಿ ಸೋಮವಾರ ಈ ಘಟನೆ ಸಂಭವಿಸಿದ್ದು, ಸೆಕ್ಸ್ ಗೆ ನಿರಾಕರಿಸಿದ ಮಂಗಳಮುಖಿ ಮೇಲೆ ಶಸ್ತ್ರ ಸಜ್ಜಿತ ಗುಂಪು ಹಲವು ಬಾರಿ ಗುಂಡಿನ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಖೈಬರ್ ಪಕ್ತುಂಖ್ವಾ ಪ್ರಾಂತ್ಯದ ಮನ್ ಸೆಹ್ರಾ ಪ್ರದೇಶದ ನಿವಾಸಿಯಾದ ಕಾಶಿ ಅಲಿಯಾಸ್ ಚಾಂದ್ ಎಂಬ ಮಂಗಳಮುಖಿ ಮನೆಯಲ್ಲಿದ್ದಾಗ ಆಕೆಯ ಮನೆಗೆ ಆಗಮಿಸಿದ ಕೆಲ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆಕೆ ವಿರೋಧಿಸಿದಾಗ ಕ್ರೋಧಗೊಂಡ ಗುಂಪು ಆಕೆಯ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಗುಂಡಿನ ಶಬ್ದಕೇಳಿ ಸ್ಥಳೀಯ ಜನರು ಗುಂಪು ಸೇರುತ್ತಿದ್ದಂತೆಯೇ ದಾಳಿ ಮಾಡಿದ ತಂಡ ಅಲ್ಲಿಂದ ಪರಾರಿಯಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಾಂದ್ ಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುಂಡಿನ ದಾಳಿ ನಡೆಸಿದ ವ್ಯಕ್ತಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಮೂಲಭೂತವಾದಿಗಳ ಹಿಡಿತದಲ್ಲಿರುವ ಪಾಕಿಸ್ತಾನದಲ್ಲಿ ಇತ್ತೀಚೆಗೆ ಮಂಗಳಮುಖಿಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಮಂಗಳ ಮುಖಿಗೆ ಪೇಶಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ ಸುದ್ದಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಧಾರುಣ ಘಟನೆ ಬೆಳಕಿಗೆ ಬಂದಿದೆ. ಮಂಗಳಮುಖಿಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಇದೀಗ ಅಲ್ಪ ಸಂಖ್ಯಾತ ಮಂಗಳಮುಖಿಯರು ಪಾಕಿಸ್ತಾನದಾದ್ಯಂತ ವ್ಯಾಪಕ ಪ್ರತಿಭಟನೆ ಕೈಗೊಂಡಿದ್ದಾರೆ.
Advertisement