
ಲಂಡನ್: ಐರೋಪ್ಯ ಒಕ್ಕೂಟದಲ್ಲೇ ಬ್ರಿಟನ್ ಇರಲು ಅಥವಾ ಹೊರಹೋಗುವ ಸಂಬಂಧ ನಡೆದ ಬ್ರೆಕ್ಸಿಟ್ ಜನಮತದಲ್ಲಿ ಉಭಯ ನಿರ್ಣಯಕ್ಕೆ ಸಮಾನ ಪೈಪೋಟಿ ಎದುರಾಗಿದ್ದು, ನೆಕ್ ಟು ನೆಕ್ ಸ್ಪರ್ಧೆ ಏರ್ಪಟಿದೆ ಎಂದು ತಿಳಿದುಬಂದಿದೆ.
ಮತ ಎಣಿಕೆ ನಡೆಯುತ್ತಿರುವ 382 ಕೇ೦ದ್ರಗಳ ಪೈಕಿ ಪರ ಮತ್ತು ವಿರೋಧ ನಿರ್ಣಯಗಳ ಸಮಾನ ಪ್ರಮಾಣದ ಮತಗಳು ಬಿದ್ದಿದ್ದು, ಇಂದು ಮಧ್ಯಾಹ್ನದ ವೇಳೆ ಪೂರ್ಣ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ತೀವ್ರ ಕುತೂಹಲ ಕೆರಳಿಸಿರುವ ಬ್ರೆಕ್ಸಿಟ್ ಫಲಿತಾಂಶ ಯೂರೋಪಿಯನ್ ಷೇರುಮಾರುಕಟ್ಟೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಇದೇ ಕಾರಣಕ್ಕಾಗಿ ಐರೋಪ್ಯ ಒಕ್ಕೂಟದ ಎಲ್ಲ ಷೇರು ಸೂಚ್ಯ೦ಕಗಳೂ ರಾತ್ರಿಯಿಡೀ ಬ್ರೆಕ್ಸಿಟ್ ಫಲಿತಾ೦ಶಗಳ ಮೇಲೆ ಕಣ್ಣಿಟ್ಟಿವೆ.
ಐರೋಪ್ಯ ಒಕ್ಕೂಟದಿ೦ದ ಬ್ರಿಟನ್ ಹೊರಬ೦ದರೆ ಐರೋಪ್ಯ ಒಕ್ಕೂಟದ ದೇಶಗಳಲ್ಲಿನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉ೦ಟಾಗಲಿದ್ದು, ಭಾರಿ ಏರಿಳಿತ ನಿರೀಕ್ಷಿಸಲಾಗಿದೆ. ಆದರೆ ಈಗಾಗಲೇ ನಡೆಸಿದ ಎಲ್ಲ ಸಮೀಕ್ಷೆಗಳಲ್ಲೂ ಒಕ್ಕೂಟದಿ೦ದ ಹೊರ ಹೋಗಬೇಕು ಅಥವಾ ಹೊರಹೋಗಬಾರದು ಎ೦ಬ ಅಭಿಪ್ರಾಯ ಹೊ೦ದಿದವರ ಪ್ರಮಾಣ ಸಮಾನವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಫಲಿತಾ೦ಶ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ.
ಬ್ರಿಟನ್‌ನಲ್ಲಿರುವ ಸುಮಾರು 12 ಲಕ್ಷ ಭಾರತೀಯ ಮೂಲದವರೂ ಸೇರಿದಂತೆ ಒಟ್ಟಾರೆ 4.6 ಕೋಟಿ ಮತದಾರರು, ಗುರುವಾರದ ಜನಮತಗಣನೆಯಲ್ಲಿ ಹಕ್ಕು ಚಲಾಯಿಸುವ ಅಧಿಕಾರ ಹೊಂದಿದ್ದು, ಶೇ.60-ಶೇ.70ರಷ್ಟು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಯುರೋಪಿಯನ್ ಒಕ್ಕೂಟದಲ್ಲೇ ಬ್ರಿಟನ್ ಇರಬೇಕು ಎಂದು ಬಯಸುವ ಪ್ರಧಾನಿ ಡೇವಿಡ್ ಕೆಮರಾನ್ ಮತ್ತು ಹೊರಹೋಗಬಯಸಿರುವ ಬಣದ ನಾಯಕ, ಲಂಡನ್‌ನ ಮಾಜಿ ಮೇಯರ್ ಬೋರಿಸ್ ಜಾನ್ಸನ್ ನೇತೃತ್ವದ ಬಣಗಳು, ತಮ್ಮ ತಮ್ಮ ನಿಲುವಿನ ಪರ ಗುರುವಾರವೂ ಭರ್ಜರಿ ಪ್ರಚಾರ ನಡೆಸಿದರು.
ಯೂರೋಪಿಯನ್ ಒಕ್ಕೂಟದಲ್ಲೇ ಇರಲಿದೆ ಬ್ರಿಟನ್: ತಜ್ಞರ ಅಭಿಪ್ರಾಯ
ಇನ್ನು ಬ್ರೆಕ್ಸಿಟ್ ಮತದಾನ ಕುರಿತಂತೆ ಕೇವಲ ಬ್ರಿಟನ್ ಮಾತ್ರವಲ್ಲದೇ ಭಾರತ, ಅಮೆರಿಕ ಸೇರಿದಂತೆ ವಿಶ್ವದ ನಾನಾ ದೇಶಗಳು ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ತಜ್ಞರ ಪ್ರಕಾರ ಬ್ರಿಟನ್ ಯೂರೋಪಿಯನ್ ಒಕ್ಕೂಟದಲ್ಲೇ ಇರಲಿದೆ ಎಂಬ ಅಭಿಪ್ರಾಯವೂ ಕೂಡ ಕೇಳಿಬಂದಿದೆ. ಇನ್ನು ಈ ಬಗ್ಗೆ ನಡೆದ ವಿವಿಧ ಸಮೀಕ್ಷೆಗಳೂ ಕೂಡ ಇದೇ ರೀತಿಯ ಫಲಿತಾಂಶ ನೀಡಿದ್ದು, ಜನಮತಗಣನೆ ಬಗ್ಗೆ ಗುರುವಾರ ಪ್ರಕಟವಾದ ನಾಲ್ಕು ಸಮೀಕ್ಷೆಗಳ ಪೈಕಿ 2 ಸಮೀಕ್ಷೆಗಳು ಬ್ರಿಟನ್ ಯುರೋಪಿಯನ್ ಒಕ್ಕೂಟದಲ್ಲೇ ಉಳಿಯಬೇಕೆಂದು ಜನ ಬಯಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೆರಡು ಸಮೀಕ್ಷೆಗಳು ಇದಕ್ಕೆ ವಿರುದ್ಧವಾದ ವರದಿ ನೀಡಿವೆ.
ಒಕ್ಕೂಟದ ಹಿನ್ನೆಲೆ
ವ್ಯಾಪಾರ ಮತ್ತು ಭದ್ರತೆಯ ನಿಟ್ಟಿನಲ್ಲಿ ಯುರೋಪಿಯನ್ ರಾಷ್ಟ್ರಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಇಟಲಿ, ಲಕ್ಸೆಂಬರ್ಗ್ ಮತ್ತು ನೆದರ್‌ಲೆಂಡ್ ದೇಶಗಳು 1958ರಲ್ಲಿ ಯರೋಪಿಯನ್ ಆರ್ಥಿಕ ಒಕ್ಕೂಟ ಎಂಬ ಸಂಘಟನೆ ಹುಟ್ಟುಹಾಕಿಕೊಂಡಿದ್ದವು. ನಂತರ ಇದಕ್ಕೆ 22 ರಾಷ್ಟ್ರಗಳು ಸೇರ್ಪಡೆಯಾಗಿದ್ದವು. ಈ ಪೈಕಿ ಬ್ರಿಟನ್ 1973ರಲ್ಲಿ ಸೇರ್ಪಡೆಯಾಗಿತ್ತು.
ಒಕ್ಕೂಟದಿಂದ ಹೊರಬರದಿದ್ದರೆ ಭಾರತಕ್ಕೆ ಲಾಭ
ಇನ್ನು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರದೇ ಇದ್ದರೆ ಭಾರತೀಯ ಷೇರುಮಾರುಕಟ್ಟೆಗೆ ಲಾಭವಿದ್ದು, ಇದರಿ೦ದಾಗಿ ಷೇರು ಮಾರುಕಟ್ಟೆ ಉತ್ತಮ ಆರ೦ಭ ಕಾಣಲಿದೆ. ಸೆನ್ಸೆಕ್ಸ್ 27,500 ಹಾಗೂ ನಿಫ್ಟಿ 8350ರ ಮಟ್ಟ ತಲುಪಲಿದೆ ಎಂದು ವಿತ್ತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಚಿನ್ನ ಹಾಗೂ ತೈಲ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದ್ದು, ಪೌ೦ಡ್ ಮೌಲ್ಯವಧ೯ನೆಯಾಗುವುದ ರಿ೦ದ ಡಾಲರ್ ಕುಸಿಯುತ್ತದೆ ಎಂದು ಹೇಳಲಾಗುತ್ತಿದೆ.
Advertisement