
ವಾಷಿಂಗ್ ಟನ್: ಜಾಗತಿಕ ಉದ್ದಿಮೆದಾರರ ಶೃಂಗಸಭೆಯಲ್ಲಿ (ಜಿಇಎಸ್) ಭಾಗವಹಿಸುವಂತೆ ಆಹ್ವಾನ ನೀಡಿದರೆ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ವಿಶ್ವದ ಉದ್ಯಮಿಗಳನ್ನು ಒಂದೆಡೆ ಸೇರಿಸುವ 'ಜಾಗತಿಕ ಉದ್ದಿಮೆದಾರರ ಪ್ರಸಕ್ತ ಸಾಲಿನ ಸಮ್ಮೇಳನ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ನಡೆಯುತ್ತಿದ್ದು, ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಮುಂದಿನ ವರ್ಷ ಜಿಇಎಸ್ ನ್ನು ಭಾರತ ಆಯೋಜಿಸಲಿದ್ದು ಆಹ್ವಾನ ನೀಡಿದರೆ ಭಾರತಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕಾಗೆ ಭೇಟಿ ನೀಡಿ, ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 2017 ರ ಜಾಗತಿಕ ಉದ್ದಿಮೆದಾರರ ಶೃಂಗಸಭೆಯನ್ನು ಭಾರತ ಆಯೋಜಿಸುವುದರ ಬಗ್ಗೆ ಘೋಷಿಸಿದ್ದರು. ಬರಾಕ್ ಒಬಾಮ ಅವರ ಪರಿಕಲ್ಪನೆಯ ಶೃಂಗಸಭೆಯನ್ನು ಮುಂದುವರೆಸಲು ಭಾರತ ಉತ್ಸಾಹ ತೋರಿದ್ದಕ್ಕಾಗಿ ಅಮೆರಿಕ ಭಾರತಕ್ಕೆ ಧನ್ಯವಾದ ತಿಳಿಸಿತ್ತು.
ಬರಾಕ್ ಒಬಾಮ ಅವರ ಅಧಿಕಾರದ ಅವಧಿಯಲ್ಲಿ ನಡೆಯುತ್ತಿರುವ ಅಂತಿಮ ಜಿಇಎಸ್ ಇದಾಗಿದೆ. ಆದರೆ 2017 ರಲ್ಲಿ ಭಾರತ ಜಾಗತಿಕ ಉದ್ದಿಮೆದಾರರ ಶೃಂಗಸಭೆಯನ್ನು ನಡೆಸಲಿದೆ ಎಂದು ಅಮೆರಿಕದ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ. 2010 ರಲ್ಲಿ ಅಮೆರಿಕ ಮೊದಲ ಜಿಇಎಸ್ ನ್ನು ನಡೆಸಿತ್ತು, ಬಳಿಕ ಟರ್ಕಿ, ಯುಎಇ, ಮಲೇಷ್ಯಾ, ಕಿನ್ಯಾದಲ್ಲಿ ಜಿಇಎಸ್ ನಡೆದಿತ್ತು.
Advertisement