
ಪಿಟ್ಸ್ ಬರ್ಗ್: ಅಮೆರಿಕದ ಪಿಟ್ಸ್ ಬರ್ಗ್ ನಲ್ಲಿ ಇಬ್ಬರು ಆಗಂತುಕರು ಗುರುವಾರ ನಡೆಸಿದ ಶೂಟೌಟ್ ನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಪಿಟ್ಸ್ ಬರ್ಗ್ ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ವಿಕಿನ್ಸ್ ಬರ್ಗ್ ನ ವಸತಿ ಸಮುಚ್ಛಯದ ಆವರಣದಲ್ಲಿ ಈ ಶೂಟೌಟ್ ನಡೆದಿದ್ದು, ಇಬ್ಬರು ಆಗಂತುಕರು ಏಕಾಏಕಿ ಸ್ಥಳೀಯ ನಿವಾಸಿಗಳ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಘಟನೆಯಲ್ಲಿ ನಾಲ್ಕು ಮಂದಿ ಮಹಿಳೆಯರು ಮತ್ತು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಪ್ರಸ್ತುತ ಶೂಟೌಟ್ ನಡೆದಿರುವ ವಿಕಿನ್ಸ್ ಬರ್ಗ್ ನ ವಸತಿ ಸಮುಚ್ಛಯದಲ್ಲಿ ಬಹುತೇಕ ಮಧ್ಯಮ ವರ್ಗದವರೇ ಹೆಚ್ಚಾಗಿ ನೆಲೆಸಿದ್ದು, ಈ ಹಿಂದೆ ಇಲ್ಲಿ ಇಂತಹ ದಾಳಿಗಳಾಗಿರಲಿಲ್ಲ ಎಂದು ತಿಳಿದುಬಂದಿದೆ. ವಸತಿ ಸಮುಚ್ಛಯ ಸೇರಿಕೊಂಡಿದ್ದ ಇಬ್ಬರು ಆಗಂತುಕರು ಗುಂಡಿನ ಸುರಿಮಳೆಗೈದಿದ್ದಾರೆ. ದುಷ್ಕರ್ಮಿಗಳು ಸುಮಾರು 20 ಸುತ್ತು ಗುಂಡು ಹಾರಿಸಿದ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ದಾಳಿ ನಡೆದಿರುವ ವಿಕಿನ್ಸ್ ಬರ್ಗ್ ನ ವಸತಿ ಸಮುಚ್ಛಯವನ್ನು ಪೊಲೀಸರು ಸುತ್ತುವರೆದಿದ್ದು, ಆಗಂತುಕರಿಗಾಗಿ ಶೋಧ ನಡೆಸುತ್ತಿದ್ದಾರೆ. ಅಲ್ಲದೆ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
Advertisement