ಡೆನ್ಮಾರ್ಕ್ ನ ಜನ ತುಂಬ ಸಂತೋಷವಂತರಂತೆ

ಡೆನ್ಮಾರ್ಕ್ ದೇಶಕ್ಕೆ ಸತತ ಮೂರನೇ ಬಾರಿಗೆ ಕಿರೀಟವೊಂದು ಸಿಕ್ಕಿದೆ. ಅದು ಇಡೀ ವಿಶ್ವದಲ್ಲಿ ಅತಿ ಖುಷಿವಂತರು ಇರುವ ದೇಶವಂತೆ! ಇದೇ 20ರಂದು ವಿಶ್ವ ಸಂತೋಷ ದಿನವಿದ್ದು...
ಡೆನ್ಮಾರ್ಕ್ ನ ಜನತೆ
ಡೆನ್ಮಾರ್ಕ್ ನ ಜನತೆ
Updated on

ಕೋಪನ್ಹೇಗನ್(ಡೆನ್ಮಾರ್ಕ್): ಡೆನ್ಮಾರ್ಕ್ ಅಂದಾಗ ಕಾಲ್ಪನಿಕ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವ ರಾಜಕುಮಾರ ಹ್ಯಾಮ್ಲೆಟ್, ಕಡಲ್ಗಳ್ಳರ ಕಥೆ ಇವುಗಳನ್ನು ನೀವು ಕೇಳಿರಬಹುದು.

ಆದರೆ ಡೆನ್ಮಾರ್ಕ್ ದೇಶಕ್ಕೆ ಸತತ ಮೂರನೇ ಬಾರಿಗೆ ಕಿರೀಟವೊಂದು ಸಿಕ್ಕಿದೆ. ಅದು ಇಡೀ ವಿಶ್ವದಲ್ಲಿ ಅತಿ ಖುಷಿವಂತರು ಇರುವ ದೇಶವಂತೆ! ಇದೇ 20ರಂದು ವಿಶ್ವ ಸಂತೋಷ ದಿನವಿದ್ದು, ಅದರ ಅಂಗವಾಗಿ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಈ ವರದಿಯನ್ನು ಬಿಡುಗಡೆ ಮಾಡಿದೆ.

156 ದೇಶಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಭೂಮಿ ಮೇಲೆ ಡೆನ್ಮಾರ್ಕ್ ದೇಶ ಅತ್ಯಂತ ಸುಖ ಸಂತೋಷವನ್ನು ಹೊಂದಿರುವ ಜನರನ್ನು ಒಳಗೊಂಡ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವಸಂಸ್ಥೆ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ. ನಮ್ಮ ಭಾರತ ದೇಶ 118ನೇ ಸ್ಥಾನ ಗಳಿಸಿದೆ. ಆಫ್ರಿಕಾ ಖಂಡದ ಬುರುಂಡಿ ಜನ ಹೆಚ್ಚು ಅಸಂತೋಷದಿಂದ ಕೂಡಿದ್ದು ಕೊನೆಯ ಸ್ಥಾನದಲ್ಲಿದೆ. ಡೆನ್ಮಾರ್ಕ್ ನಂತರದಲ್ಲಿ ಸ್ವಿಜರ್ಲೆಂಡ್, ಐಸ್ ಲೆಂಡ್, ನಾರ್ವೆ, ಫಿನ್ಲೆಂಡ್, ಕೆನಡಾ, ನೆದರ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸ್ವೀಡನ್ ದೇಶಗಳು ಟಾಪ್ 10ರಲ್ಲಿವೆ.

5.6 ದಶಲಕ್ಷ ಜನರನ್ನು ಹೊಂದಿರುವ ಸ್ಕ್ಯಾಂಡಿನೇವಿಯಾ ರಾಷ್ಟ್ರ ಈ ಹಿಂದೆ ಕೂಡ ಭೂಮಿ ಮೇಲಿನ ಅತ್ಯಂತ ಸಂತೋಷದ ದೇಶ ಎಂಬ ಕೀರ್ತಿಗೆ ಭಾಜನವಾಗಿತ್ತು. 2012ರಿಂದ ಮೂರು ಬಾರಿ ಈ ಗೌರವಕ್ಕೆ ಪಾತ್ರವಾಗಿದೆ. ದೇಶದ ಜನರ ಆರೋಗ್ಯ, ವೈದ್ಯಕೀಯ ಸೌಲಭ್ಯ, ಕುಟುಂಬ ಸದಸ್ಯರ ಮಧ್ಯೆ ಇರುವ ಸಂಬಂಧಗಳು, ಉದ್ಯೋಗ ಭದ್ರತೆ ಮತ್ತು ಇತರ ಸಾಮಾಜಿಕ ಕಾರಣಗಳು, ರಾಜಕೀಯ ಸ್ವಾತಂತ್ರ್ಯ ಮತ್ತು ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರದ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಡೆನ್ಮಾರ್ಕ್ ನಲ್ಲಿ ಶೇ 43ರಷ್ಟು ಮಂದಿ ಮಹಿಳೆಯರು ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಜನರು ಕಷ್ಟದಲ್ಲಿದ್ದಾಗ ಅಲ್ಲಿನ ಸರ್ಕಾರ ಹೆಚ್ಚೆಚ್ಚು ಸಹಕಾರ ನೀಡಿದಷ್ಟೂ ಒಳ್ಳೆಯದು ಎನ್ನುತ್ತದೆ ಅಧ್ಯಯನ.

ವಿಶ್ವ ಸಂತೋಷ ದಿನ: ಭೂತಾನ್ ನ ಮಾಜಿ ಪ್ರಧಾನಿ ಈ ದಿನವನ್ನು ರೂಪಿಸಿದ್ದರಂತೆ. 2011ರಲ್ಲಿ ಭೂತಾನ್ ನ ಪ್ರಧಾನಿ, '' ದೇಶದ ಅಭಿವೃದ್ಧಿಯನ್ನು ನೋಡುವುದು ಆರ್ಥಿಕ ಪ್ರಗತಿಯಿಂದಲ್ಲ, ಆ ದೇಶದ ಜನ ಎಷ್ಟು ತೃಪ್ತಿ ಮತ್ತು ಸಂತೋಷದಿಂದ ಇದ್ದಾರೆ ಎಂಬುದರಿಂದ'' ಎಂದು ಹೇಳಿದ್ದರು. ಈ ಮೂಲಕ ವಿಶ್ವ ಸಂತೋಷ ದಿನ ಆಚರಿಸುವಂತೆ ಹೇಳಿದ್ದರು. ಅವರ ಹೇಳಿಕೆ ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿತು. ಅಂದಿನಿಂದ ವಿಶ್ವಸಂಸ್ಥೆ ವಿಶ್ವ ಸಂತೋಷ ದಿನ ಆಚರಿಸಲು ಮುಂದಾಯಿತು.

ದೇಶವಾಸಿಗಳು ಎಷ್ಟು ಖುಷಿಯಿಂದಿದ್ದಾರೆ ಎಂದು ಲೆಕ್ಕ ಹಾಕಲಾರಂಭಿಸಲಾಯಿತು. ಅದರ ಫಲವಾಗಿ ಸಂತೋಷದಿಂದ ಕೂಡಿರುವವರ ಪಟ್ಟಿಯನ್ನು ಪ್ರತಿವರ್ಷ ತಯಾರಿಸಲಾಗುತ್ತಿದೆ.
ಕಡಿಮೆ ಸಂತೋಷವನ್ನು ಹೊಂದಿರುವ ದೇಶಗಳು: ಮಡಗಾಸ್ಕರ್, ಟಾಂಜಾನಿಯಾ, ಲಿಬರಿಯಾ, ಗುನಿಯಾ, ರ್ವಾಂಡಾ, ಬೆನಿನ್, ಅಫ್ಘಾನಿಸ್ತಾನ, ಟೋಗೊ, ಸಿರಿಯಾ, ಬುರುಂಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com